ADVERTISEMENT

ಎಸಿ, ಡಿವೈಎಸ್ಪಿ ಭೇಟಿ: ವ್ಯಾಪಾರಿಗಳಿಗೆ ತರಾಟೆ

ಪ್ರಜಾವಾಣಿ ವರದಿ ಫಲಶ್ರುತಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2021, 7:54 IST
Last Updated 25 ಏಪ್ರಿಲ್ 2021, 7:54 IST
ಡಿವೈಎಸ್ಪಿ ವಿ. ರಘುಕುಮಾರ, ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಅವರು ಭಾನುವಾರ ಹೊಸಪೇಟೆಯ ಎಪಿಎಂಸಿಯಲ್ಲಿ ವ್ಯಾಪಾರಿಗಳನ್ನು ತರಾಟೆಗೆ ತೆಗೆದುಕೊಂಡರು
ಡಿವೈಎಸ್ಪಿ ವಿ. ರಘುಕುಮಾರ, ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಅವರು ಭಾನುವಾರ ಹೊಸಪೇಟೆಯ ಎಪಿಎಂಸಿಯಲ್ಲಿ ವ್ಯಾಪಾರಿಗಳನ್ನು ತರಾಟೆಗೆ ತೆಗೆದುಕೊಂಡರು   

ಹೊಸಪೇಟೆ: ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ಡಿವೈಎಸ್ಪಿ ವಿ. ರಘುಕುಮಾರ ಅವರು ಭಾನುವಾರ ಬೆಳಿಗ್ಗೆ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ (ಎಪಿಎಂಸಿ) ಭೇಟಿ ನೀಡಿ, ವಾರಾಂತ್ಯದ ಕರ್ಫ್ಯೂ ನಿಯಮ ಮೀರಿ ಒಂದೆಡೆ ಸೇರಿದ್ದ ವ್ಯಾಪಾರಿಗಳು, ಜನರನ್ನು ತರಾಟೆಗೆ ತೆಗೆದುಕೊಂಡರು.

‘ಬೆಳಿಗ್ಗೆ ಜನಜಂಗುಳಿ, ಮಧ್ಯಾಹ್ನ ಸ್ತಬ್ಧ’ ಶೀರ್ಷಿಕೆ ಅಡಿ ‘ಪ್ರಜಾವಾಣಿ’ ಭಾನುವಾರ ವರದಿ ಪ್ರಕಟಿಸಿತ್ತು. ವರದಿ ಆಧರಿಸಿ ಸ್ಥಳಕ್ಕೆ ಭೇಟಿ ನೀಡಿದ ಎಸಿ, ಡಿವೈಎಸ್ಪಿ, ಅಂತರ ಕಾಯ್ದುಕೊಳ್ಳದೆ, ಮಾಸ್ಕ್‌ ಧರಿಸದೆ ತರಕಾರಿ, ಹಣ್ಣು ಮಾರಾಟ ಮಾಡುತ್ತಿದ್ದವರು, ಅದನ್ನು ಖರೀದಿಸುತ್ತಿದ್ದ ಜನರನ್ನು ಅಲ್ಲಿಂದ ಕಳುಹಿಸಿದರು. ಜನ ಗುಂಪು ಗೂಡದಂತೆ ಪೊಲೀಸರು ಕ್ರಮ ಕೈಗೊಂಡರು.

‘ಎಪಿಎಂಸಿಯಲ್ಲಿ ಯಾರೂ ಚಿಲ್ಲರೆ ವಹಿವಾಟು ಮಾಡುವಂತಿಲ್ಲ. ಸಗಟು ವ್ಯಾಪಾರಕ್ಕಷ್ಟೇ ಅವಕಾಶ ಇದೆ. ಹೀಗಿದ್ದರೂ ಕೋವಿಡ್‌ ನಿಯಮ ಉಲ್ಲಂಘಿಸಿ ಜನರನ್ನು ಸೇರಿಸಿಕೊಂಡು ವ್ಯಾಪಾರ ಮಾಡುತ್ತಿರುವುದು ಸರಿಯಲ್ಲ. ಇದೇ ಕೊನೆ. ಈ ರೀತಿ ಮುಂದೆ ಆಗದಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು’ ಎಂದು ಸಿದ್ದರಾಮೇಶ್ವರ ಅವರು ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದರು.

ADVERTISEMENT

‘ಸಾರ್ವಜನಿಕರ ಅನುಕೂಲಕ್ಕಾಗಿ ನಗರದ ವಿವಿಧ ಭಾಗಗಳಲ್ಲಿ ಮಾರುಕಟ್ಟೆ ಆರಂಭಿಸಲಾಗಿದೆ. ಜನ ಅಲ್ಲಿಯೇ ಖರೀದಿಸಬೇಕು. ಅನಗತ್ಯವಾಗಿ ಯಾರೂ ಎಪಿಎಂಸಿಗೆ ಬಂದು ಗುಂಪು ಸೇರಬಾರದು. ಇಲ್ಲವಾದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಸಾರ್ವಜನಿಕರಿಗೆ ರಘುಕುಮಾರ ಎಚ್ಚರಿಕೆ ಕೊಟ್ಟರು.
ಕೋವಿಡ್‌ ಪ್ರಕರಣಗಳ ಸಂಖ್ಯೆ ಜಿಲ್ಲೆಯಲ್ಲಿ ಒಂದೇ ಸಮನೆ ಏರಿಕೆಯಾಗುತ್ತಿದೆ. ಮತ್ತೊಂದೆಡೆ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿದೆ. ಹೀಗಿದ್ದರೂ ಜನ ಅದನ್ನು ಲೆಕ್ಕಿಸದೆ ಎಪಿಎಂಸಿಯಲ್ಲಿ ಭಾನುವಾರ ಅಪಾರ ಸಂಖ್ಯೆಯಲ್ಲಿ ಜನ ಒಂದೆಡೆ ಸೇರಿದ್ದರು. ಅಂತರ ಕಾಯ್ದುಕೊಳ್ಳದೆ ವ್ಯವಹರಿಸುತ್ತಿದ್ದರು. ಅನೇಕರು ಮಾಸ್ಕ್‌ ಕೂಡ ಧರಿಸಿರಲಿಲ್ಲ.

ನಗರಸಭೆ ಪೌರಾಯುಕ್ತ ಮನ್ಸೂರ್‌ ಅಲಿ, ಪರಿಸರ ಎಂಜಿನಿಯರ್‌ ಆರತಿ, ಪೊಲೀಸ್‌ ಇನ್‌ಸ್ಪೆಕ್ಟರ್‌ಗಳಾದ ವಿ. ನಾರಾಯಣ, ಎ. ರವಿಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.