ADVERTISEMENT

ಬಿಜೆಪಿಯನ್ನು ಅಧಿಕಾರಕ್ಕೆ ತಂದದ್ದಕ್ಕೆ ಈಗ ಪಶ್ಚತ್ತಾಪ–ಪ್ರಮೋದ್‌ ಮುತಾಲಿಕ್‌

​ಪ್ರಜಾವಾಣಿ ವಾರ್ತೆ
Published 14 ಜುಲೈ 2022, 10:23 IST
Last Updated 14 ಜುಲೈ 2022, 10:23 IST
ಪ್ರಮೋದ್‌ ಮುತಾಲಿಕ್‌
ಪ್ರಮೋದ್‌ ಮುತಾಲಿಕ್‌   

ಹೊಸಪೇಟೆ (ವಿಜಯನಗರ): ‘ಬಿಜೆಪಿ ಪಕ್ಷವನ್ನು ಬೆಂಬಲಿಸಿ ಅಧಿಕಾರಕ್ಕೆ ತಂದದ್ದಕ್ಕೆ ಈಗ ಪಶ್ಚತ್ತಾಪವಾಗುತ್ತಿದೆ’ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಬೇಸರದಿಂದ ಹೇಳಿದರು.

ಹಿಂದೂಗಳ ಪಕ್ಷ ಅಂದುಕೊಂಡು ಆ ಪಕ್ಷವನ್ನು ಬೆಂಬಲಿಸಿ ಅಧಿಕಾರಕ್ಕೆ ತರಲು ಶ್ರಮಿಸಿದ್ದೆವು. ಎಲ್ಲ ಹಿಂದೂಗಳ ಪರಿಶ್ರಮದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆದರ್ಶ, ಬಡ ಹಿಂದೂಗಳ ಸಂಕಷ್ಟಕ್ಕೆ ಸ್ಪಂದಿಸುತ್ತಾರೆ ಎಂಬ ಭರವಸೆ ಇತ್ತು. ಆದರೆ, ಬಿಜೆಪಿ ದಾರಿ ತಪ್ಪಿದೆ. ಹಿಂದೂಗಳಿಗೆ ಅನ್ಯಾಯವಾಗುತ್ತಿದ್ದರೂ ಏನು ಮಾಡುತ್ತಿಲ್ಲ. ಹಿಂದೂ ಕಾರ್ಯಕರ್ತರ ಹತ್ಯೆ ತಡೆಯುತ್ತಿಲ್ಲ ಎಂದು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹರ್ಷನ ಹತ್ಯೆ ನಡೆದು ಹಲವು ತಿಂಗಳಾಗಿವೆ. ಬಂಧಿತರಿಗೆ ಬೇಗ ಶಿಕ್ಷೆ ಕೊಡುವುದನ್ನು ಬಿಟ್ಟು ಜೈಲಿನಲ್ಲಿ ಬಿರಿಯಾನಿ ಕೊಟ್ಟು ಸಾಕುತ್ತಿದ್ದಾರೆ. ಮೊಬೈಲ್‌ನಲ್ಲಿ ವಿಡಿಯೊ ಕಾಲ್‌ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಕತ್ತೆ ಕಾಯ್ತಾ ಇದೆಯಾ? ಗೃಹ ಸಚಿವರು ಸರಿ ಇಲ್ಲ. ಹರ್ಷನ ತಾಯಿ, ಸಹೋದರಿ ಅವರೊಂದಿಗೆ ಗೃಹಸಚಿವರು ನಡೆದುಕೊಂಡ ವರ್ತನೆ ಸರಿಯಿಲ್ಲ. ತಮ್ಮ ಮಗನ ಕೊಲೆಗೆ ಸಂಬಂಧಿಸಿದಂತೆ ಅವರು ನ್ಯಾಯ ಕೇಳಲು ಹೋಗಿದ್ದರು. ಗೃಹಸಚಿವರನ್ನು ಶೀಘ್ರ ಖುದ್ದು ನಾನೇ ಭೇಟಿಯಾಗಿ ಹರ್ಷನ ಕೊಲೆ ವಿಷಯವಾಗಿ ಚರ್ಚಿಸುವೆ ಎಂದು ಹೇಳಿದರು.

ADVERTISEMENT

ವರ್ಷದ ಹಿಂದೆ ಜಾನುವಾರು ಹತ್ಯೆ ಮತ್ತು ಪ್ರತಿಬಂಧಕ ಕಾಯ್ದೆ, ಆರು ತಿಂಗಳ ಹಿಂದೆ ಮತಾಂತರ ಕಾಯ್ದೆ ಜಾರಿಗೆ ಬಂದಿದೆ. ಆದರೆ, ರಾಜ್ಯದಲ್ಲಿ ನಿರಂತರವಾಗಿ ಗೋಹತ್ಯೆ, ಮತಾಂತರಗಳು ನಡೆಯುತ್ತಲೇ ಇವೆ. ಬಿಜೆಪಿ ಸರ್ಕಾರ ಕಾನೂನು ಜಾರಿಗೆ ತಂದು ಏನು ಸಾಧನೆ ಮಾಡಿದೆ? ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿಯಲ್ಲಿ ದೇಶದಲ್ಲಿಯೇ ಅತಿದೊಡ್ಡ ದನಗಳ ಸಂತೆ ಆಗುತ್ತಿದೆ. ನಿತ್ಯ ಕಸಾಯಿಖಾನೆಗಳಿಗೆ ಗೋವುಗಳನ್ನು ಕಳಿಸಲಾಗುತ್ತಿದೆ. ಈ ಬಗ್ಗೆ ಸ್ವತಃ ಮನೇಕಾ ಗಾಂಧಿ ಮಾತನಾಡಿದ್ದಾರೆ. ಇದು ಇಡೀ ರಾಜ್ಯದಲ್ಲಿ ನಡೀತಾ ಇದೆ. ಕಾನೂನು ತಂದು ಬಿಜೆಪಿ ನಾಟಕ ಆಡ್ತಾ ಇದೆಯಾ? ನಿಮಗೆ ಆಗದಿದ್ದರೆ ಆ ಕೆಲಸ ನಾವುಗಳು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.

ನಮ್ಮ ಸಂಘಟನೆಯ ಸರ್ವೇ ಪ್ರಕಾರ ರಾಜ್ಯದಲ್ಲಿ ಮೂರು ಸಾವಿರ ಚರ್ಚ್‌ಗಳು ಕಾನೂನುಬಾಹಿರವಾಗಿ ನಡೆಯುತ್ತಿವೆ. ಅಲ್ಲಿ ನಿತ್ಯ ಮತಾಂತರ ಚಟುವಟಿಕೆಗಳು ನಡೆಯುತ್ತಿವೆ. ಇದು ಸರ್ಕಾರದ ಗಮನಕ್ಕೆ ಬಂದಿಲ್ಲವೇ? ಇದು ಚುನಾವಣೆಯ ವರ್ಷ ಎನ್ನುವುದನ್ನು ಬಿಜೆಪಿಯವರು ಮರೆಯಬಾರದು. ಗೋಹತ್ಯೆ, ಮತಾಂತರ ನಿಷೇಧ ಕಾಯ್ದೆ ಕಟ್ಟುನಿಟ್ಟಿನಿಂದ ಅನುಷ್ಠಾನಕ್ಕೆ ತರಬೇಕು. ಇಲ್ಲವಾದಲ್ಲಿ ಬರುವ ಚುನಾವಣೆಯಲ್ಲಿ ಹಿಂದೂ ಸಂಘಟನೆಗಳು, ಸ್ವಾಮೀಜಿಗಳು ಒಂದಾಗಿ ನಿಮ್ಮ ವಿರುದ್ಧ ಚುನಾವಣೆಗೆ ನಿಲ್ಲಬೇಕಾಗುತ್ತದೆ. ಈಗಾಗಲೇ 23 ಜನ ಸ್ವಾಮೀಜಿಗಳು ಚುನಾವಣೆ ಸ್ಪರ್ಧಿಸಲು ಸಿದ್ಧರಾಗಿದ್ದಾರೆ ಎಂದು ತಿಳಿಸಿದರು.

ಉತ್ತರಾದಿ ಮಠದ ಗೋಪಿನಾಥ ಆಲೂರು, ಶ್ರೀರಾಮ ಸೇನೆ ವಿಭಾಗೀಯ ಅಧ್ಯಕ್ಷ ಸಂಜೀವ ಮರಡಿ, ಮುಖಂಡರಾದ ಜಗದೀಶ ಕಮಾಟಗಿ, ರವಿ ಬಡಿಗೇರ್‌, ಸೂರಿ ಬಂಗಾರು, ಅನೂಪ್‌ ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.