ADVERTISEMENT

ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕ ಪಾರದರ್ಶಕತೆ ಕಡ್ಡಾಯ: ಜಿಲ್ಲಾಧಿಕಾರಿ

‘ಡೇರಾ’ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಎಸ್‌.ದಿವಾಕರ್ ಸೂಚನೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 16:18 IST
Last Updated 11 ಸೆಪ್ಟೆಂಬರ್ 2024, 16:18 IST
ಹೊಸಪೇಟೆಯಲ್ಲಿ ಬುಧವಾರ ಜಿಲ್ಲಾಧಿಕಾರಿ ಅವರು ನಡೆಸಿದ ಖಾಸಗಿ ಶಾಲೆಗಳ ಸಭೆಯಲ್ಲಿ ಪಾಲ್ಗೊಂಡಿದ್ದ ಸಂಸ್ಥೆಗಳ ಮುಖ್ಯಸ್ಥರು ಮತ್ತು ಮುಖ್ಯಾಧ್ಯಾಪಕರು  –ಪ್ರಜಾವಾಣಿ ಚಿತ್ರ
ಹೊಸಪೇಟೆಯಲ್ಲಿ ಬುಧವಾರ ಜಿಲ್ಲಾಧಿಕಾರಿ ಅವರು ನಡೆಸಿದ ಖಾಸಗಿ ಶಾಲೆಗಳ ಸಭೆಯಲ್ಲಿ ಪಾಲ್ಗೊಂಡಿದ್ದ ಸಂಸ್ಥೆಗಳ ಮುಖ್ಯಸ್ಥರು ಮತ್ತು ಮುಖ್ಯಾಧ್ಯಾಪಕರು  –ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ‘ಖಾಸಗಿ ಶಿಕ್ಷಣ ಸಂಸ್ಥೆಗಳು ಶುಲ್ಕದ ವಿಷಯದಲ್ಲಿ ಪಾರದರ್ಶಕತೆ ಪ್ರದರ್ಶಿಸಬೇಕು, ಮುಂದಿನ ವರ್ಷದ ಶುಲ್ಕದ ಸ್ವರೂಪ ಮತ್ತು ಈ ವರ್ಷದ ಶುಲ್ಕದ ಲೆಕ್ಕಪರಿಶೋಧನೆ ವರದಿಗಳನ್ನು ಡಿಸೆಂಬರ್‌ 31ರೊಳಗೆ ಸಲ್ಲಿಸಬೇಕು’ ಎಂದು ಜಿಲ್ಲಾಧಿಕಾರಿ ಎಂ.ಎಸ್‌.ದಿವಾಕರ್ ಸೂಚಿಸಿದರು.

ಬುಧವಾರ ಇಲ್ಲಿನ ತಮ್ಮ ಕಚೇರಿಯಲ್ಲಿ ನಡೆದ ಜಿಲ್ಲಾಮಟ್ಟದ ಶಿಕ್ಷಣ ನಿಯಂತ್ರಣ ಪ್ರಾಧಿಕಾರದ (ಡೇರಾ) ಸಭೆಯಲ್ಲಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಡಿ.ಸಿ ಅವರು ಈ ಸೂಚನೆ ನೀಡಿದರು.

‘ಶುಲ್ಕ ಪಾರದರ್ಶಕತೆ ಕುರಿತಂತೆ 2019ರಲ್ಲಿಯೇ ಅಧಿಸೂಚನೆ ಹೊರಡಿಸಲಾಗಿದೆ. ಅದರ ಪಾಲನೆ ಕಡ್ಡಾಯವಾಗಿ ಆಗಬೇಕು. ಖಾಸಗಿ ಶಾಲೆಗಳ ಘೋಷಿತ ಶುಲ್ಕದ ವಿವರವನ್ನು ಜಿಲ್ಲಾಡಳಿತದ ವೆಬ್‌ಸೈಟ್‌ನಲ್ಲಿ ಹಾಕಲಾಗುತ್ತದೆ. ಜತೆಗೆ ಶಾಲೆಗಳಲ್ಲಿ ಸಹ ಇಂತಿಷ್ಟು ಶುಲ್ಕ ನಿಗದಿಪಡಿಸಿದ್ದೇವೆ ಎಂಬುದನ್ನು ಎಲ್ಲರಿಗೂ ಕಾಣುವ ಸ್ಥಳದಲ್ಲಿ ಹಾಕಬೇಕು. ಇದನ್ನು ಪಾಲನೆ ಮಾಡದ ಶಾಲೆಗಳಿಗೆ ನೊಟೀಸ್ ನೀಡಲಾಗುವುದು’ ಎಂದು ಅವರು ಎಚ್ಚರಿಸಿದರು.

ADVERTISEMENT

ಇದುವರೆಗೆ ಶುಲ್ಕದ ಸ್ವರೂಪವನ್ನು ಘೋಷಿಸದ ಶಾಲೆಗಳ ಸಿಆರ್‌ಸಿ ಚೆಕ್ ಮಾಡಬೇಕು ಎಂದು ಡಿ.ಸಿ ಅವರು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕ್ರಮದ ಎಚ್ಚರಿಕೆ: ‘ಜಿಲ್ಲೆಯ ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನಿಗದಿಪಡಿಸಿದಕ್ಕಿಂತ ಹೆಚ್ಚಿಗೆ ಶುಲ್ಕ ಪಡೆಯಬಾರದು. ಜಾಸ್ತಿ ಪಡೆದುಕೊಳ್ಳುತ್ತಿರುವುದರ ಬಗ್ಗೆ ಲಿಖಿತ ದೂರುಗಳು ಬಂದಲ್ಲಿ ಕ್ರಮ ಜರುಗಿಸಲು ನಮಗೆ ಅಧಿಕಾರವಿದೆ’ ಎಂದು ಡಿ.ಸಿ ದಿವಾಕರ್‌ ಸ್ಪಷ್ಟಪಡಿಸಿದರು.

ಮೂಲ ಸೌಕರ್ಯಕ್ಕೆ ಗಮನಕೊಡಿ: ವಿಜಯನಗರ ಜಿಲ್ಲೆಯ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ಸಂಖ್ಯೆಗನುಗುಣವಾಗಿ ಶೌಚಾಲಯಗಳ ಮತ್ತು ನೀರಿನ ವ್ಯವಸ್ಥೆ ಇರಬೇಕು. ಶೌಚಕ್ಕೆ ಹೋಗಬೇಕಾಗುತ್ತದೆ ಎಂದು ನೀರು ಕುಡಿಯದೇ ಬಾಲಕಿಯರು ಕಾಯಿಲೆಗಳಿಗೆ ಬೀಳುವ ದುಸ್ಥಿತಿಯಿದೆ. ಉತ್ತಮ ಸ್ಥಿತಿಯ ಶೌಚಾಲಯಗಳಿದ್ದರೆ ಈ ಸ್ಥಿತಿ ಬರದು ಎಂದು ಮನವರಿಕೆ ಮಾಡಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ರೀತಿಯ ಸಮಸ್ಯೆಗಳಿರುವ ಬಗ್ಗೆ ತಿಳಿಸಿದಲ್ಲಿ ಜಿಲ್ಲಾಡಳಿತ ಜೊತೆಯಿರಲಿದೆ ಎಂದರು.

ಸಿಎ ಅವರಿಂದ ಒಂದಕ್ಕಿಂತ ಹೆಚ್ಚು ಲೆಕ್ಕ ಪರಿಶೋಧನಾ ವರದಿ ನೀಡುವುದು ನಿಯಮಬಾಹಿರವಾಗಿ ಲೆಕ್ಕ ಪರಿಶೋಧನಾ ವರದಿ ಸಿದ್ಧಪಡಿಸಿ ಸಲ್ಲಿಸುವುದು ಕಂಡು ಬಂದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು
ಎಂ.ಎಸ್‌.ದಿವಾಕರ್, ಜಿಲ್ಲಾಧಿಕಾರಿ

ಸಭೆಯಲ್ಲಿ ಡಿಡಿಪಿಐ ಹನುಮಕ್ಕ, ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರು, ಬೇರೆ ಬೇರೆ ಶಾಲೆಗಳ ಮುಖ್ಯಾಧ್ಯಾಪಕರು ಇದ್ದರು.

ಶಾಲಾ ವಾಹನಗಳು ಸುಸ್ಥಿತಿಯಲ್ಲಿರಲಿ

ಎಲ್ಲ ಖಾಸಗಿ ಶಾಲೆಗಳಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆಯ ನಿಯಮಗಳನ್ನು ಪಾಲನೆ ಮಾಡಬೇಕು. ದುರಸ್ತಿಗೆ ಬಂದಿರುವ ಟೈಯರ್ ಕಿತ್ತು ಹೋದ ಬಸ್‌ಗಳನ್ನು ಬಳಸಬಾರದು. ಲೈಸೆನ್ಸ್ ಇಲ್ಲದವರ ಕೈಗೆ ಶಾಲಾ ವಾಹನ ನೀಡಬಾರದು. ಈ ಬಗ್ಗೆ ನಿರ್ಲಕ್ಷ್ಯ ವಹಿಸಿ ಶಾಲಾ ವಾಹನಗಳು ಅಪಘಾತಕ್ಕೀಡಾಗುವುದು ಕಂಡು ಬಂದಲ್ಲಿ ಅಂತಹ ಖಾಸಗಿ ಶಾಲೆಗಳ ವಿರುದ್ಧ ಯಾವುದೇ ಮುಲಾಜಿಲ್ಲದೇ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು’ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.