ADVERTISEMENT

ಹಡಗಲಿ ಮಲ್ಲಿಗೆ ದರ ದಿಢೀರ್ ಕುಸಿತ

ಪ್ರಯಾಣಿಕರಿಗೆ 2 ಕ್ವಿಂಟಲ್‌ ಮೊಗ್ಗು ಹಂಚಿದ ರೈತರು

ಸಿ.ಶಿವಾನಂದ
Published 14 ಜುಲೈ 2024, 20:21 IST
Last Updated 14 ಜುಲೈ 2024, 20:21 IST
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಪಿಂಜಾರ್‌ ಹೆಗ್ಡಾಳು ಗ್ರಾಮದಲ್ಲಿ ಬೆಳೆಗಾರರು ಭಾನುವಾರ ಬಸ್ ಪ್ರಯಾಣಿಕರಿಗೆ ಉಚಿತವಾಗಿ ಮಲ್ಲಿಗೆ ಮೊಗ್ಗುಗಳನ್ನು ಹಂಚಿದರು
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಪಿಂಜಾರ್‌ ಹೆಗ್ಡಾಳು ಗ್ರಾಮದಲ್ಲಿ ಬೆಳೆಗಾರರು ಭಾನುವಾರ ಬಸ್ ಪ್ರಯಾಣಿಕರಿಗೆ ಉಚಿತವಾಗಿ ಮಲ್ಲಿಗೆ ಮೊಗ್ಗುಗಳನ್ನು ಹಂಚಿದರು   

ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ‘ಹಡಗಲಿ ಮಲ್ಲಿಗೆ’ ಮೊಗ್ಗಿನ ಬೆಲೆ ದಿಢೀರ್ ಕುಸಿತ ಕಂಡಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.

ತಾಲ್ಲೂಕಿನ ಪಿಂಜಾರ್ ಹೆಗ್ಡಾಳು ಗ್ರಾಮದಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಈ ಮಲ್ಲಿಗೆ ಬೆಳೆಯಲಾಗುತ್ತಿದೆ. ಬೆಲೆ ಇಳಿಕೆಯಿಂದ ಬೇಸರಗೊಂಡ ಬೆಳೆಗಾರರು ಗಿಡಗಳಿಂದ ಕಿತ್ತು ತಂದಿದ್ದ ಮೊಗ್ಗನ್ನು ಭಾನುವಾರ ಬೆಳಿಗ್ಗೆ ಈ ಮಾರ್ಗವಾಗಿ ಹೊಸಪೇಟೆ ಮತ್ತು ದಾವಣಗೆರೆ ಕಡೆಗೆ ತೆರಳುತ್ತಿದ್ದ ಬಸ್‌ ಪ್ರಯಾಣಿಕರಿಗೆ ಪ್ಲಾಸ್ಟಿಕ್‌ ಚೀಲದಲ್ಲಿ ತಲಾ ಅರ್ಧ ಕೆ.ಜಿಯಷ್ಟು ಮೊಗ್ಗು ತುಂಬಿ ಉಚಿತವಾಗಿ ಹಂಚಿದರು. ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತರೆ ವಾಹನಗಳ ಪ್ರಯಾಣಿಕರಿಗೂ ನೀಡಿದರು. 

ಪ್ರತಿ ವರ್ಷ ಮೊಹರಂ ಹಬ್ಬಕ್ಕೂ ಮೊದಲು ರೈತರಿಗೆ ಮಲ್ಲಿಗೆ ವ್ಯಾಪಾರದಿಂದ ಕೈತುಂಬಾ ಲಾಭ ದೊರೆಯುತ್ತಿತ್ತು. ಈ ಬಾರಿ ಕಾಕಡ ಮಲ್ಲಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದರಿಂದ ಹಡಗಲಿ ಮಲ್ಲಿಗೆ ದರವು ಇಳಿಕೆಯಾಗಿದೆ ಎಂದು ಬೆಳೆಗಾರರು ಹೇಳುತ್ತಾರೆ.

ADVERTISEMENT

ಪಿಂಜಾರ್ ಹೆಗ್ಡಾಳು ಗ್ರಾಮದಲ್ಲಿ 162 ರೈತರು, ಸುಮಾರು 350 ಎಕರೆ ಪ್ರದೇಶದಲ್ಲಿ ಹಡಗಲಿ ಮಲ್ಲಿಗೆ (ಸುವಾಸನೆ ಮಲ್ಲಿಗೆ) ಮತ್ತು ದುಂಡುಮಲ್ಲಿಗೆ ಬೆಳೆದಿದ್ದಾರೆ. ಮೊಹರಂ ಸಂದರ್ಭದಲ್ಲಿ ಪ್ರತಿ ಕೆ.ಜಿಗೆ ₹350ರಿಂದ ₹400ರ ವರೆಗೂ ಬೆಲೆ ದೊರೆಯುತ್ತಿತ್ತು.

‘ಈ ಬಾರಿ ಹೊಸಪೇಟೆ ಮತ್ತು ಶಿವಮೊಗ್ಗ ಮಾರುಕಟ್ಟೆಯಲ್ಲಿ ಬೆಳಿಗ್ಗೆ ಕೆ.ಜಿ.ಗೆ ₹100ರಂತೆ ಹಾಗೂ ಸಂಜೆ ₹60ಕ್ಕೆ ಮಾರಾಟವಾಗುತ್ತದೆ. ಗಿಡದಿಂದ ಕೀಳುವ ಪ್ರತಿ ಕೆ.ಜಿ ಮೊಗ್ಗಿಗೆ ₹100 ಕೂಲಿ ಕೊಡಬೇಕು. ಸಾಗಣೆ ವೆಚ್ಚದ ಜತೆಗೆ ಖರೀದಿದಾರರಿಗೆ ಕಮಿಷನ್ ನೀಡಬೇಕು. ಮಾರುಕಟ್ಟೆಯಲ್ಲಿ ಕಡಿಮೆ ದರ ಲಭಿಸುತ್ತಿರುವುದರಿಂದ ನಷ್ಟ ಅನುಭವಿಸುವಂತಾಗಿದೆ. ಹಾಗಾಗಿ, 2 ಕ್ವಿಂಟಲ್‌ನಷ್ಟು ಮೊಗ್ಗನ್ನು ಹಂಚಿದ್ದೇವೆ’ ಎಂದು ಬೆಳೆಗಾರರು ತಿಳಿಸಿದರು.

ಈ ತಿಂಗಳು ನಷ್ಟವಾಗಿದೆ. ಮುಂದಿನ ತಿಂಗಳು ಶ್ರಾವಣದಲ್ಲಿ ಬೆಲೆ ಏರಿಕೆಯಾಗಲಿದೆ ಎಂಬ ವಿಶ್ವಾಸ ಬೆಳೆಗಾರರಲ್ಲಿದೆ. ಆದರೆ, ಆ ವೇಳೆಗೆ ಮಲ್ಲಿಗೆ ಇಳುವರಿ ಕಡಿಮೆ ಆಗುವ ಆತಂಕವೂ ಅವರಿಗೆ ಕಾಡುತ್ತಿದೆ.

Quote - ಮಲ್ಲಿಗೆ ಬೆಳೆಯಲು ನರೇಗಾದಡಿ ಸೌಲಭ್ಯ ಸಿಗಲಿದೆ. ಇದರಿಂದ ಬೆಳೆಗಾರರ ಸಂಖ್ಯೆ ಹೆಚ್ಚಿದೆ. ಹೆಚ್ಚಿನ ಪ್ರಮಾಣದಲ್ಲಿ ಹೂವು ಕಟಾವಿಗೆ ಬಂದಿರುವುದೇ ಬೆಲೆ ಕುಸಿತಕ್ಕೆ ಕಾರಣವಾಗಿದೆ ಎಚ್. ರಾಜೇಂದ್ರ ಹಿರಿಯ ಉಪ ನಿರ್ದೇಶಕ ತೋಟಗಾರಿಕೆ ಇಲಾಖೆ

Cut-off box - ಕೆ.ಜಿ ಕಾಕಡಕ್ಕೆ ₹300 ದರ ತುಂಗಭದ್ರಾ ಜಲಾಶಯ ಆಶ್ರಿತ ಗಂಗಾವತಿ ಮತ್ತು ಕಂಪ್ಲಿ ಭಾಗದಲ್ಲಿ ಯಥೇಚ್ಛವಾಗಿ ಕಾಕಡ ಮಲ್ಲಿಗೆ ಬೆಳೆಯಲಾಗುತ್ತಿದೆ. ಸದ್ಯ ಪ್ರತಿ ಕೆ.ಜಿ.ಗೆ ₹300 ಧಾರಣೆ ಇದೆ. ಗಿಡದಿಂದ ಕಿತ್ತ ನಂತರ ಮೂರು ದಿನಗಳವರೆಗೆ ಈ ಹೂವನ್ನು ಸಂಗ್ರಹಿಸಬಹುದಾಗಿದೆ. ಆದರೆ ಹಡಗಲಿ ಮಲ್ಲಿಗೆ ಮೊಗ್ಗು ಉತ್ತಮ ಗುಣಮಟ್ಟ ಮತ್ತು ಸುವಾಸನೆ ಭರಿತವಾಗಿದೆ. ಆದರೆ ಗಿಡದಿಂದ ಕಿತ್ತ ನಂತರ ಗರಿಷ್ಠ ಎರಡು ದಿನಗಳವರೆಗೆ ಮಾತ್ರ ಸಂಗ್ರಹಿಸಬಹುದಾಗಿದೆ. ಇದರಿಂದ ಖರೀದಿದಾರರು ಕಾಕಡ ಮಲ್ಲಿಗೆಗೆ ಮೊದಲ ಆದ್ಯತೆ ನೀಡುತ್ತಿದ್ದಾರೆ ಎಂಬುದು ಹೂವಿನ ಸಗಟು ಖರೀದಿದಾರರ ವಿವರಣೆ.

ಕೆ.ಜಿ ಕಾಕಡಕ್ಕೆ ₹300 ದರ

ತುಂಗಭದ್ರಾ ಜಲಾಶಯ ಆಶ್ರಿತ ಗಂಗಾವತಿ ಮತ್ತು ಕಂಪ್ಲಿ ಭಾಗದಲ್ಲಿ ಯಥೇಚ್ಛವಾಗಿ ಕಾಕಡ ಮಲ್ಲಿಗೆ ಬೆಳೆಯಲಾಗುತ್ತಿದೆ. ಸದ್ಯ ಪ್ರತಿ ಕೆ.ಜಿ.ಗೆ ₹300 ಧಾರಣೆ ಇದೆ.

ಗಿಡದಿಂದ ಕಿತ್ತ ನಂತರ ಮೂರು ದಿನಗಳವರೆಗೆ ಈ ಹೂವನ್ನು ಸಂಗ್ರಹಿಸಬಹುದಾಗಿದೆ.

ಆದರೆ, ಹಡಗಲಿ ಮಲ್ಲಿಗೆ ಮೊಗ್ಗು ಉತ್ತಮ ಗುಣಮಟ್ಟ ಮತ್ತು ಸುವಾಸನೆ ಭರಿತವಾಗಿದೆ. ಆದರೆ, ಗಿಡದಿಂದ ಕಿತ್ತ ನಂತರ ಗರಿಷ್ಠ ಎರಡು ದಿನಗಳವರೆಗೆ ಮಾತ್ರ ಸಂಗ್ರಹಿಸಬಹುದಾಗಿದೆ. ಇದರಿಂದ ಖರೀದಿದಾರರು ಕಾಕಡ ಮಲ್ಲಿಗೆಗೆ ಆದ್ಯತೆ ನೀಡುತ್ತಿದ್ದಾರೆ ಎಂಬುದು ಹೂವಿನ ಸಗಟು ಖರೀದಿದಾರರ ವಿವರಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.