ADVERTISEMENT

ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ

ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರು ಭಾಗಿ; ರಾಜ್ಯದಲ್ಲಿ ಜಾರಿಗೆ ತರದಂತೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2025, 15:29 IST
Last Updated 12 ಏಪ್ರಿಲ್ 2025, 15:29 IST
ಹೊಸಪೇಟೆಯಲ್ಲಿ ಶನಿವಾರ ವಕ್ಫ್‌ ತಿದ್ದುಪಡಿ ಕಾಯ್ದೆ ವಿರುದ್ಧ ಅಂಜುಮನ್‌ ಕಮಿಟಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಮಂದಿ ಮುಸ್ಲಿಮರು ಪಾಲ್ಗೊಂಡಿದ್ದರು  –ಪ್ರಜಾವಾಣಿ ಚಿತ್ರ/ ಲವ ಕೆ.
ಹೊಸಪೇಟೆಯಲ್ಲಿ ಶನಿವಾರ ವಕ್ಫ್‌ ತಿದ್ದುಪಡಿ ಕಾಯ್ದೆ ವಿರುದ್ಧ ಅಂಜುಮನ್‌ ಕಮಿಟಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಮಂದಿ ಮುಸ್ಲಿಮರು ಪಾಲ್ಗೊಂಡಿದ್ದರು  –ಪ್ರಜಾವಾಣಿ ಚಿತ್ರ/ ಲವ ಕೆ.   

ಹೊಸಪೇಟೆ (ವಿಜಯನಗರ): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಕ್ಫ್‌ ತಿದ್ದುಪಡಿ ಕಾಯ್ದೆಯನ್ನು ಕೂಡಲೇ ಹಿಂಪಡೆಯಬೇಕು, ರಾಜ್ಯದಲ್ಲಿ ಜಾರಿಗೊಳಿಸಬಾರದು ಎಂಬ ಒಕ್ಕೊರಲ ಒತ್ತಾಯವನ್ನು ಅಂಜುಮನ್ ಕಮಿಟಿ ಮಾಡಿದೆ.

ವಕ್ಫ್‌ ತಿದ್ದುಪಡಿ ಕಾಯ್ದೆ ವಿರುದ್ಧ ಶನಿವಾರ ಇಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅಂಜುಮನ್ ಕಮಿಟಿಯ ಅಧ್ಯಕ್ಷರೂ ಆಗಿರುವ ‘ಹುಡಾ’ ಅಧ್ಯಕ್ಷ ಎಚ್‌.ಎನ್‌.ಎಫ್‌. ಮೊಹಮ್ಮದ್ ಇಮಾಮ್‌ ನಿಯಾಜಿ ಈ ಒತ್ತಾಯ ಮಾಡಿದರು.

‘ಮುಸ್ಲಿಂ ಕಾನೂನಿನಂತೆ ವಕ್ಫ್ ಎಂದರೆ ಧಾರ್ಮಿಕ ಮತ್ತು ದತ್ತಿ ಉದ್ದೇಶಗಳಿಗಾಗಿ ದೇವರ ಹೆಸರಿನಲ್ಲಿ ಅರ್ಪಿಸಲಾದ ಆಸ್ತಿಯಾಗಿದೆ. ವಕ್ಫ್ ಆದಾಯವನ್ನು ಮಸೀದಿಗಳ ನಿರ್ವಹಣೆ, ಸಮುದಾಯದ ಬಡ ಜನರ ಅಭಿವೃದ್ಧಿಗೆ ಬಳಸಲಾಗುತ್ತದೆ. ಬಿಜೆಪಿ ಧಾರ್ಮಿಕ ಆಧಾರದ ಮೇಲೆ ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ. ಆದರೆ, ಅದರ ಯೋಜನೆಗಳು ಫಲ ನೀಡುವುದಿಲ್ಲ’ ಎಂದು ನಿಯಾಜಿ ಹೇಳಿದರು.

ADVERTISEMENT

ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ವಿರುದ್ಧ ಪ್ರತಿಭಟನಕಾರರು ಘೋಷಣೆ ಕೂಗಿದರು.

ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಸಾವಿರಾರು ಮಂದಿ ಪ್ರತಿಭಟನಕಾರರು ನಗರದ ಈದ್ಗಾ ಮೈದಾನದಿಂದ ಮೆರವಣೆಗೆ ಆರಂಭಿಸಿ ಡಾ.ಬಿ.ಆರ್. ಅಂಬೇಡ್ಕರ್ ವೃತ್ತ ಮಾರ್ಗವಾಗಿ ತಹಶೀಲ್ದಾರರ ಕಚೇರಿಯ ಎದುರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಇದರಿಂದಾಗಿ ಸುಮಾರು ಅರ್ಧ ಗಂಟೆ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು.

ಅಂಜುಮನ್ ಪದಾಧಿಕಾರಿಗಳಾದ ಬಿ. ಅನ್ಸರ್ ಭಾಷಾ, ಅಬೂಬಕರ್‌, ಕೆ.ಮೋಸೀನ್, ಸದ್ದಾಂ ಹುಸೇನ್, ಫೈರೋಜ್ ಖಾನ್, ಗುಲಾಂ ರಸೂಲ್, ಡಾ.ದರ್ವೇಶ್, ಸಮಾಜದ ಮುಖಂಡರಾದ ಬಡಾವಲಿ, ಅಬ್ದುಲ್ ಖಾದರ ರಫಾಯಿ, ಅಸ್ಲಾಂ ಮಳಿಗಿ, ಪ್ರಗತಿಪರ ಸಂಘಟನೆ ಮುಖಂಡರಾದ ಜಂಬಯ್ಯ ನಾಯಕ, ಕರುಣಾನಿಧಿ ಇದ್ದರು.

ಕಾಯ್ದೆ ಅಸಾಂವಿಧಾನಿಕ’

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅವರಿಗೆ ಸಲ್ಲಿಸಿದ ಮನವಿಯಲ್ಲಿ ವಕ್ಫ್‌ ತಿದ್ದುಪಡಿ ಕಾಯ್ದೆ ಯಾವ ಬಗೆಯಲ್ಲಿ ಮುಸ್ಲಿಮರಿಗೆ ಅನ್ಯಾಯ ಮಾಡಿದೆ ಎಂಬುದನ್ನು ವಿವರಿಸಲಾಗಿದ್ದು ಕೆಟ್ಟ ಉದ್ದೇಶದಿಂದ ರೂಪಿಸಲಾದ ಈ ಕಾಯ್ದೆ ವಿಭಜನಕಾರಿಯೂ ಆಗಿದೆ. ಹೀಗಾಗಿ ಇದನ್ನು ‘ಅಸಾಂವಿಧಾನಿಕ’ ಎಂದು ಘೋಷಿಸಬೇಕು ಎಂದು ಕೋರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.