ADVERTISEMENT

ಹೊಸಪೇಟೆ | ವಿವಿಧ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ: ಹೋರಾಟಗಾರರ ಬಂಧನ, ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 5:21 IST
Last Updated 10 ಜುಲೈ 2025, 5:21 IST
ಕೇಂದ್ರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಸಿಐಟಿಯು ಸಹಿತ ವಿವಿಧ ಕಾರ್ಮಿಕ ಸಂಘಟನೆಗಳಿಂದ ಬುಧವಾರ ಹೊಸಪೇಟೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು  –ಪ್ರಜಾವಾಣಿ ಚಿತ್ರ
ಕೇಂದ್ರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಸಿಐಟಿಯು ಸಹಿತ ವಿವಿಧ ಕಾರ್ಮಿಕ ಸಂಘಟನೆಗಳಿಂದ ಬುಧವಾರ ಹೊಸಪೇಟೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು  –ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ಕೇಂದ್ರ ಸರ್ಕಾರ ತರಲು ಉದ್ದೇಶಿಸಿರುವ ನಾಲ್ಕು ಕಾರ್ಮಿಕ ಸನ್ನದುಗಳ ಜಾರಿಯನ್ನು ತಡೆಹಿಡಿಯಬೇಕು, ಕನಿಷ್ಠ ವೇತನವನ್ನು ₹36 ಸಾವಿರಕ್ಕೆ ನಿಗದಿಪಡಿಸಬೇಕು ಎಂಬ ಬೇಡಿಕೆ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬುಧವಾರ ಇಲ್ಲಿ ಪ್ರತಿಭಟನಾ ಪ್ರದರ್ಶನ ನಡೆಯಿತು.

ಸಿಐಟಿಯು ಸಹಿತ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಭಾಗವಾಗಿ ನಡೆದ ಈ ಪ್ರತಿಭಟನೆ ನಗರದ ಗಾಂಧಿ ಚೌಕದಿಂದ ಆರಂಭವಾಗಿ ಬಸ್ ನಿಲ್ದಾಣ ಸಮೀಪದ ಬಿಎಸ್‌ಎನ್‌ಎಲ್ ಕಚೇರಿ ಮುಂಭಾಗ ಕೊನೆಗೊಂಡಿತು. ಕೊನೆಯಲ್ಲಿ ಪೊಲೀಸರು ಪ್ರತಿಭಟನಕಾರರನ್ನು ಪಕ್ಕದ ಪಟ್ಟಣ ಪೊಲೀಸ್ ಠಾಣೆಯ ಆವರಣಕ್ಕೆ ಕರೆದೊಯ್ದು, ಸಾಂಕೇತಿಕ ಬಂಧನಕ್ಕೆ ಒಳಪಡಿಸಿದರು ಹಾಗೂ ಬಿಡುಗಡೆಗೊಳಿಸಿದರು.

ಮುಷ್ಕರದಿಂದಾಗಿ ಬ್ಯಾಂಕ್‌, ಎಲ್‌ಐಸಿ, ಅಂಚೆ, ಆದಾಯ ತೆರಿಗೆಯಂತಹ ಕೇಂದ್ರ ಸರ್ಕಾರದ ಅಧೀನಕ್ಕೆ ಒಳಪಟ್ಟ ಕಚೇರಿಗಳಲ್ಲಿ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಅಂಗನವಾಡಿ ಕೇಂದ್ರಗಳು ಬಹುತೇಕ ಮುಚ್ಚಿದ್ದವು.

ADVERTISEMENT

ಸಿಐಟಿಯು ಮುಖಂಡರಾದ ಆರ್.ಭಾಸ್ಕರ ರೆಡ್ಡಿ, ಜಂಬಯ್ಯ ನಾಯಕ,  ನಾಗರತ್ನಮ್ಮ, ಯಲ್ಲಾಲಿಂಗ, ಕೆ.ಎಂ.ಸಂತೋಷ್‌ ಕುಮಾರ್‌, ಎಲ್‌.ಮಂಜುನಾಥ್, ರಮೇಶ್ ಕುಮಾರ್, ಸಪ್ನ ಇತರರು ಮಾತನಾಡಿ, ಕೇಂದ್ರದ ಕಾರ್ಮಿಕ ವಿರೋಧಿ ನೀತಿಯನ್ನು ಕಟುವಾಗಿ ಖಂಡಿಸಿದರು. ಕಾರ್ಪೊರೇಟ್‌ ಕಂಪನಿಗಳ ಒತ್ತಾಯಕ್ಕೆ ಮಣಿದು ನಾಲ್ಕು ಸನ್ನದುಗಳನ್ನು ಜಾರಿಗೆ ತರಲು ಯತ್ನಿಸಿದ್ದೇ ಆದರೆ ಇನ್ನಷ್ಟು ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.

ಕೇಂದ್ರದ ವಿರುದ್ಧ ನಡೆದಿರುವ ಸಾಂಕೇತಿಕ ಪ್ರತಿಭಟನೆ ಇದು ತಕ್ಷಣ ಬೇಡಿಕೆಗಳಿಗೆ ಸ್ಪಂದಿಸಲಿ ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಿಶ್ಚಿತ
ಆರ್‌.ಭಾಸ್ಕರ ರೆಡ್ಡಿ ಜಿಲ್ಲಾ ಸಿಐಟಿಯು ಮುಖಂಡ
ಕಾರ್ಮಿಕರ ಪ್ರತಿಭಟನೆಯ ಹಕ್ಕನ್ನೇ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಇದು ಬಹಳ ಅಪಾಯಕಾರಿ ಕಾರ್ಮಿಕರು ಇದರ ಬಗ್ಗೆ ಈಗಲೇ ಗಮನ ಹರಿಸಬೇಕು
ಮರಡಿ ಜಂಬಯ್ಯ ನಾಯಕ ಸಿಐಟಿಯು ಮುಖಂಡ
ಪ್ರಮುಖ ಬೇಡಿಕೆಗಳು
8 ಗಂಟೆ ಕೆಲಸದ ಅವಧಿ ನಿಗದಿಯಾಗಬೇಕು.ಗುತ್ತಿಗೆ ಹೊರಗುತ್ತಿಗೆ ನೌಕರರು ಮಾಡುವ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಹಳೆಯ ಪಿಂಚಣಿ ಪದ್ಧತಿ ಮರುಜಾರಿಗೊಳಿಸಬೇಕು. ಹೊಸಪೇಟೆಯಲ್ಲಿ ತಕ್ಷಣ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು. ನಿವೇಶನ ರಹಿತರಿಗೆ ನಿವೇಶನ ಮನೆ ವಿತರಣೆ ಮಾಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.