
ಕವಿತಾ ಎಸ್.ಮನ್ನಿಕೇರಿ
ಹೊಸಪೇಟೆ (ವಿಜಯನಗರ): ‘ಫೆ.28ರಿಂದ ಮಾರ್ಚ್ 17ರವರೆಗೆ ನಡೆಯುವ ಪಿಯು ಪರೀಕ್ಷೆಗೆ ಜಿಲ್ಲೆ ಸಜ್ಜಾಗಿದೆ. 23 ಕೇಂದ್ರಗಳಲ್ಲಿ ಸಿಸಿಟಿವಿ ಕಣ್ಗಾವಲಿನಲ್ಲಿ (ವೆಬ್‌ಕಾಸ್ಟಿಂಗ್) ಪರೀಕ್ಷೆ ನಡೆಯಲಿದೆ’ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು.
ಗುರುವಾರ ತಮ್ಮ ಕಚೇರಿಯಲ್ಲಿ ಪರೀಕ್ಷಾ ಕೇಂದ್ರಗಳ ಅಧೀಕ್ಷಕರ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ವಿಷಯ ತಿಳಿಸಿ, ‘ಹೊಸಪೇಟೆಯಲ್ಲಿ 7, ಹರಪನಹಳ್ಳಿಯಲ್ಲಿ 5, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಕೊಟ್ಟೂರುಗಳಲ್ಲಿ ತಲಾ 3 ಹಾಗೂ ಕೂಡ್ಲಿಗಿಯಲ್ಲಿ 2 ಪರೀಕ್ಷಾ ಕೇಂದ್ರಗಳಿವೆ’ ಎಂದರು.
‘ಒಟ್ಟು 14,801 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ 12,378 ಹೊಸಬರು, 500 ಮಂದಿ ಖಾಸಗಿಯಾಗಿ ಪರೀಕ್ಷೆಗೆ ಕಟ್ಟಿದವರು, 1,905 ಮಂದಿ ಪುನರಾವರ್ತಿತರು ಹಾಗೂ 8 ಮಂದಿ ಫಲಿತಾಂಶ ಸುಧಾರಣೆಗೆ ಪುನಃ ಪರೀಕ್ಷೆಗೆ ಹಾಜರಾಗುವವರು. ಒಟ್ಟು ಅಭ್ಯರ್ಥಿಗಳಲ್ಲಿ 7,235 ಬಾಲಕಿಯರು ಹಾಗೂ 5,143 ಬಾಲಕರು’ ಎಂದು ಮಾಹಿತಿ ನೀಡಿದರು.
‘ಪರೀಕ್ಷೆ ಅವಧಿಗೆ ಸರಿಯಾಗಿ ಬಸ್ ಬಿಡಲು ಸೂಚಿಸಲಾಗಿದೆ. ಹಾಲ್‌ಟಿಕೆಟ್ ತೋರಿಸಿದರೆ ಉಚಿತವಾಗಿ ಪ್ರಯಾಣ ಮಾಡಬಹುದು. ಬುರ್ಖಾ ಧರಿಸಿದವರು ತಮ್ಮ ಮುಖವನ್ನು ತೋರಿಸಬೇಕು, ಪರಿಶೀಲನೆಗೆ ಮಹಿಳಾ ಸಿಬ್ಬಂದಿಯೇ ಇರುತ್ತಾರೆ’ ಎಂದರು.
ಸುಧಾರಣೆ ವಿಶ್ವಾಸ: ‘ಕಳೆದ ವರ್ಷ ಅವಿಭಜಿತ ಜಿಲ್ಲೆಯಲ್ಲಿ ಶೇ 67.4ರಷ್ಟು ಫಲಿತಾಂಶ ದಾಖಲಾಗಿತ್ತು. ರಾಜ್ಯದಲ್ಲಿ 27ನೇ ಸ್ಥಾನದಲ್ಲಿತ್ತು. ಈ ಬಾರಿ 15ನೇ ಸ್ಥಾನಕ್ಕೆ ಜಿಗಿಯುವ ವಿಶ್ವಾಸ ಇದೆ. ಎರಡು ಬಾರಿ ಪೂರ್ವತಯಾರಿ ಪರೀಕ್ಷೆ ನಡೆಸಲಾಗಿತ್ತು’ ಎಂದು ನೋಡಲ್ ಅಧಿಕಾರಿ ನಾಗರಾಜ ಹವಾಲ್ದಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.