ಹೂವಿನಹಡಗಲಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಸೋಮವಾರ ಬೆಳಿಗ್ಗೆ ಮತ್ತು ಮಧ್ಯಾಹ್ನ ರಭಸದ ಮಳೆ ಸುರಿದಿದೆ.
ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯ ಆವರಣ ಜಲಾವೃತಗೊಂಡು ಓಡಾಡಲು ತೊಂದರೆಯಾಯಿತು. ಪುರಸಭೆಯ ಸಕ್ಕಿಂಗ್ ಮಷಿನ್ ಮೂಲಕ ನೀರು ಹೊರ ಸಾಗಿಸಲಾಯಿತು. ಹಳ್ಳದ ರಸ್ತೆ, ತೋಟದ ರಸ್ತೆಯಲ್ಲಿ ಮಳೆಯ ನೀರು ಹಳ್ಳದಂತೆ ಹರಿಯಿತು. ತಗ್ಗು ಪ್ರದೇಶದ ಮನೆ, ಅಂಗಡಿಗಳಿಗೆ ನೀರು ನುಗ್ಗಿ ಜನರು ತೊಂದರೆ ಅನುಭವಿಸಿದರು.
ಹಡಗಲಿ, ಇಟ್ಟಿಗಿ ಹೋಬಳಿಯಲ್ಲಿ ಕಟಾವು ಮಾಡಿರುವ ಈರುಳ್ಳಿ ಹೊಲಗಳಿಗೆ ಮಳೆಯ ನೀರು ನುಗ್ಗಿ ಬೆಳೆ ಹಾನಿಗೀಡಾಗಿದೆ. ತುಂಗಭದ್ರಾ ನದಿ ತೀರದ ಹರವಿ, ಲಿಂಗನಾಯಕನಹಳ್ಳಿ, ಬನ್ನಿಮಟ್ಟಿ, ಬ್ಯಾಲಹುಣ್ಸಿ, ಮಕರಬ್ಬಿ, ಅಂಗೂರು ಗ್ರಾಮಗಳಲ್ಲಿ ನೂರಾರು ಎಕರೆಯಷ್ಟು ಕಟಾವಿಗೆ ಬಂದಿರುವ ಭತ್ತ ನೆಲಕ್ಕೆ ಉರುಳಿ ಬಿದ್ದು ಬೆಳೆ ನಷ್ಟ ಉಂಟಾಗಿದೆ.
ತಾಲ್ಲೂಕಿನ ಹ್ಯಾರಡ, ಹಿರೇಹಡಗಲಿಯಲ್ಲಿ ತಲಾ ಎರಡು, ಪಟ್ಟಣದಲ್ಲಿ ಒಂದು ಮನೆ ಸೇರಿದಂತೆ ಐದು ಮನೆಗಳು ಭಾಗಶಃ ಕುಸಿದು ಬಿದ್ದಿವೆ. ಈ ತಿಂಗಳಲ್ಲಿ ಕುಸಿದು ಬಿದ್ದಿರುವ ಮನೆಗಳ ಸಂಖ್ಯೆ 22ಕ್ಕೆ ಏರಿದೆ.
ನದಿ ತೀರದ ಗ್ರಾಮಗಳಲ್ಲಿ ಕಟಾವಿಗೆ ಬಂದಿರುವ ಭತ್ತದ ಬೆಳೆ ಹಾನಿಯಾಗಿದೆ. ಪಟ್ಟಣ ಮತ್ತು ಇಟ್ಟಿಗಿ ಹೋಬಳಿಯಲ್ಲಿ ಕಟಾವು ಮಾಡಿರುವ ಈರುಳ್ಳಿ ಬೆಳೆ ಮಳೆಗೆ ಸಿಲುಕಿ ನಷ್ಟ ಉಂಟಾಗಿದೆ. ಜಂಟಿ ಸಮೀಕ್ಷೆ ನಡೆಸಿ ವರದಿಯನ್ನು ಜಿಲ್ಲಾಡಳಿತಕ್ಕೆ ಕಳಿಸುತ್ತೇವೆ ಎಂದು ತಹಶೀಲ್ದಾರ್. ಜಿ. ಸಂತೋಷಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.