ಹೊಸಪೇಟೆ (ವಿಜಯನಗರ): ‘ತಾಲ್ಲೂಕಿನ ಹಂಪಿ ಸಮೀಪದ ನರಹರಿತೀರ್ಥರ ಬೃಂದಾವನದ ಆರಾಧನೆ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಮಂತ್ರಾಲಯ ಮಠ ಸಿದ್ಧವಿದೆ’ ಎಂದು ಮಂತ್ರಾಲಯದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ಹೈಕೋರ್ಟ್ ಆದೇಶದ ಮೇರೆಗೆ ಬುಧವಾರ ಇಲ್ಲಿ ನರಹರಿತೀರ್ಥರ ಉತ್ತರಾರಾಧನೆಯಲ್ಲಿ ಪಾಲ್ಗೊಂಡು ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಉತ್ತರಾದಿಮಠದ ಜೊತೆ ನಮಗೆ ದ್ವೇಷವಿಲ್ಲ. ಎರಡೂ ಮಠಗಳು ಕೂಡಿ ವ್ಯಾಜ್ಯ ಪರಿಹರಿಸಿಕೊಳ್ಳಲು ಮುಂದಾಗಬೇಕು. ಅದಕ್ಕೆ ನಾವು ಸಿದ್ಧ. ಜತೆಗೂಡಿ ಪೂಜೆ ಮಾಡಲು ನಮ್ಮ ಸಮ್ಮತಿ ಇದೆ’ ಎಂದರು.
‘ರಾಘವೇಂದ್ರ ಸ್ವಾಮಿ ಮಠ ಪೂಜೆ ವಿಷಯದಲ್ಲಿ ನಮಗೆ ಮುಕ್ತ ಭಾವನೆಯಿದೆ. ನವಬೃಂದಾವನ ಸಹಿತ ಎಲ್ಲಾ ಕಡೆಯಲ್ಲೂ ನಮ್ಮ ನಿಲುವು ಇದೇ ಆಗಿದೆ. ಪೂಜೆ ಮಾಡುವುದು ಎಲ್ಲರ ಕರ್ತವ್ಯ ಮತ್ತು ಹಕ್ಕು. ನಾವು ಯಾವ ನ್ಯಾಯಾಲಯದಲ್ಲೂ ದಾವೆ ಹೂಡಿಲ್ಲ. ದಾವೆ ಹೂಡಿದ್ದಕ್ಕೆ ಉತ್ತರ ಕೊಟ್ಟಿದ್ದೇವೆ ಅಷ್ಟೇ’ ಎಂದರು.
ಮಠದಿಂದ ಆರ್ಥಿಕ ನೆರವು: ಆರಾಧನಾ ಮಹೋತ್ಸವಕ್ಕೆ ಬರುತ್ತಿದ್ದ ಮಠದ ಮೂವರು ವಿದ್ಯಾರ್ಥಿಗಳು ಸಿಂಧನೂರಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವುದು ನೋವುಂಟು ಮಾಡಿದೆ. ಮೃತರ ಕುಟುಂಬದವರಿಗೆ ಮಠದಿಂದ ಅಗತ್ಯ ನೆರವು ನೀಡಲಾಗುವುದು’ ಎಂದು ಸ್ವಾಮೀಜಿ ಹೇಳಿದರು.
ಉತ್ತರರಾಧನೆ: ಹೈಕೋರ್ಟ್ ದ್ವಿಸದಸ್ಯ ಪೀಠದ ಆದೇಶದ ಹಿನ್ನೆಲೆಯಲ್ಲಿ ನರಹರಿ ತೀರ್ಥರ ಬೃಂದಾವನಕ್ಕೆ ಬುಧವಾರ ಬಂದ ರಾಘವೇಂದ್ರ ಸ್ವಾಮಿ ಮಠದ ಪೀಠಾಧೀಶ್ವರ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರು ಮೂಲರಾಮದೇವರ ಸಂಸ್ಥಾನ ಪೂಜೆ ನೆರವೇರಿಸಿದರು.
ವಿಜಯೋತ್ಸವ ಇಲ್ಲ: ಆರಾಧನೆ ಹಿನ್ನೆಲೆಯಲ್ಲಿ ಮಂತ್ರಾಲಯದಿಂದ ಹಂಪಿಗೆ ಬರುವ ಸಂದರ್ಭದಲ್ಲಿ ಮಠದ ಸಂಸ್ಕೃತ ವಿದ್ಯಾಪೀಠದ ಮೂವರು ವಿದ್ಯಾರ್ಥಿಗಳು ಹಾಗೂ ಚಾಲಕ ಅಪಘಾತದಲ್ಲಿ ಮೃತಪಟ್ಟ ಹಿನ್ನೆಲೆ ವಿಜಯಯೋತ್ಸವ ಮಾಡದೆ ಸಾಂಪ್ರದಾಯಿಕ ಧಾರ್ಮಿಕ ವಿಧಿ ವಿಧಾನಗಳನ್ನಷ್ಟೇ ನಡೆಸಲಾಯಿತು. ಬೆಳಿಗ್ಗೆ ಪಂಚಾಮೃತಾಭಿಷೇಕ, ಅರ್ಚನೆ, ರಜತ ರೇಷ್ಮೆ, ಹೂವಿನ ಅಲಂಕಾರ ನೆರವೇರಿಸಲಾಯಿತು.
ಭಕ್ತರಿಗೆ ಆಶೀರ್ವಚನ ನೀಡಿದ ಶ್ರೀಗಳು, ಮಠಗಳ ನಡುವೆ ಗೊಂದಲ, ತಿಕ್ಕಾಟ ಉಂಟಾಗುವುದು ಸರಿಯಲ್ಲ, ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ. ಪೂಜೆ ವಿಚಾರದಲ್ಲಿ ಮಂತ್ರಾಲಯ ಮಠ ಮುಕ್ತ ಭಾವನೆಯಿಂದ ಇದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ‘ಕಾಡಾ’ ನಿವೃತ್ತ ಮುಖ್ಯ ಎಂಜಿನಿಯರ್ ವಿ.ಪಿ. ಉದ್ಯಾಳ್, ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಪ್ರಹ್ಲಾದ್ ಆಚಾರ್ಯ, ರಾಜಾ ಅಪ್ರಮೇಯಾಚಾರ್ಯ, ಶ್ರೀನಿವಾಸ ರಾವ್ ಕಸಬೆ, ಮಠಾಧಿಕಾರಿಗಳಾದ ಆನಂದ ತೀರ್ಥ ಆಚಾರ್ಯ, ರಾಜಾ ಸುಧೀಂದ್ರ ಆಚಾರ್ಯ, ಧೀರೇಂದ್ರ ಆಚಾರ್ಯ, ಅನಿಲ್ ಹಿಂದೂಪುರ, ಡಾಣಾಪುರ ಶ್ರೀನಿವಾಸ ಇತರರು ಇದ್ದರು.
ಎರಡೂ ಮಠಗಳಿಂದ ಆರಾಧನೆ
ಹೈಕೋರ್ಟ್ ತೀರ್ಪಿನ ಮೇರೆಗೆ ನರಹರಿತೀರ್ಥರ ಪೂರ್ವಾರಾಧನೆ ಮತ್ತು ಮಧ್ಯಾರಾಧನೆಯನ್ನು ಉತ್ತರಾದಿಮಠದವರು ನೆರವೇರಿಸಿದರೆ, ಅದೇ ಹೈಕೋರ್ಟ್ ತೀರ್ಪಿನಂತೆ ಉತ್ತರಾರಾಧನೆಯನ್ನು ಮಂತ್ರಾಲಯ ಮಠ ನೆರವೇರಿಸಿದಂತಾಗಿದೆ. ಇಡೀ ವರ್ಷದಲ್ಲಿ ಈ ಮೂರು ದಿನಗಳ ಆರಾಧನೆಯೇ ವಿವಾದದ ಕೇಂದ್ರಬಿಂದುವಾಗಿದ್ದು, ಸೌಹಾರ್ದಯುತವಾಗಿ ಇತ್ಯರ್ಥಗೊಳ್ಳದೆ ಇದ್ದರೆ ಮುಂದಿನ ವರ್ಷ ಮತ್ತೆ ವಿವಾದ ಭುಗಿಲೇಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.