ADVERTISEMENT

ಪ್ರಾದೇಶಿಕ ಭಾಷೆ, ಸಂಸ್ಕೃತಿ ನಿರಾಕರಣೆ ಆತಂಕಕಾರಿ: ಪದ್ಮಾ ಶೇಖರ್‌

ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪದ್ಮಾ ಶೇಖರ್‌ ಕಳವಳ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 9 ಏಪ್ರಿಲ್ 2021, 16:18 IST
Last Updated 9 ಏಪ್ರಿಲ್ 2021, 16:18 IST
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಸಂಜೆ ನಡೆದ ನುಡಿಹಬ್ಬದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪದ್ಮಾ ಶೇಖರ್‌ ಘಟಿಕೋತ್ಸವ ಭಾಷಣ ಮಾಡಿದರು
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಸಂಜೆ ನಡೆದ ನುಡಿಹಬ್ಬದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪದ್ಮಾ ಶೇಖರ್‌ ಘಟಿಕೋತ್ಸವ ಭಾಷಣ ಮಾಡಿದರು   

ಕಮಲಾಪುರ (ಹೊಸಪೇಟೆ ತಾಲ್ಲೂಕು): ‘ಆಧುನಿಕ ಜಗತ್ತು ಪ್ರಾದೇಶಿಕ ಭಾಷೆ ಮತ್ತು ಸಂಸ್ಕೃತಿಗಳನ್ನು ಅಗ್ಗವಾಗಿ ನೋಡುತ್ತಿರುವುದು, ಅವುಗಳನ್ನು ನಿರಾಕರಿಸುತ್ತಿರುವುದು ಆತಂಕಕಾರಿ’ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪದ್ಮಾ ಶೇಖರ್‌ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ನುಡಿಹಬ್ಬದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ‘ಪ್ರಾದೇಶಿಕ, ಭಾಷೆ, ಸಂಸ್ಕೃತಿ ಬಹುದೊಡ್ಡ ಮೌಲ್ಯ ಬೋಧಿಸುತ್ತವೆ. ಅವುಗಳನ್ನು ನಿರಾಕರಿಸಿ ಬದುಕುವುದು ಹೇಗೆ? ಅಂತಹ ಬದುಕಿಗೆ ಅರ್ಥವಿದೆಯೇ? ಆತಂಕಕಾರಿ ಸಂಗತಿ’ ಎಂದು ಹೇಳಿದರು.

‘ಒಂದು ಸಂದರ್ಭದಲ್ಲಿ ಮನುಕುಲದ ಹಿತ ಕಾಯುತ್ತಿದ್ದ ಧರ್ಮ ಇಂದು ಮತ, ಧರ್ಮ–ಜಾತಿ, ಧರ್ಮವಾಗುವತ್ತ ಹೊರಳುತ್ತಿದೆ. ಮನುಷ್ಯ ಸಂಬಂಧವನ್ನೇ ಬೇರ್ಪಡಿಸಿ ಸ್ಪೃಶ್ಯ–ಅಸ್ಪೃಶ್ಯ ಕಂದಕಗಳನ್ನು ಸೃಷ್ಟಿಸುತ್ತಿದೆ. ಬದಲಾವಣೆ ಸಮಾಜದ ಸಹಜ ಗುಣ. ಆದರೆ, ಪ್ರತಿಗಾಮಿ ನೆಲೆಯಲ್ಲಿ ಮನುಷ್ಯತ್ವ ಕೊಲ್ಲುವಂತಾಗಬಾರದು’ ಎಂದರು.

ADVERTISEMENT

‘ಯುವ ಮನಸ್ಸುಗಳು ಜಾತಿ, ಮತ, ಧರ್ಮಗಳನ್ನು ವ್ಯಕ್ತಿಗತ ಚಹರೆ ಮಾಡಿಕೊಳ್ಳುತ್ತಿವೆ. ಸಾಮಾಜಿಕ ಅಂಧಶ್ರದ್ಧೆ, ಮೌಢ್ಯ ಪೋಷಿಸುತ್ತ ಹಣದ ಮೂಲಕವೇ ಬದುಕಿನ ಸುಖ–ಭೋಗ ಅರಸುತ್ತಿವೆ. ಮಾನಸಿಕ ವಿಕ್ಷಿಪ್ತತೆ, ನಿರುದ್ಯೋಗ, ತನ್ನದೇ ನೆಲದಲ್ಲಿ ತನ್ನ ಭಾಷೆ ಅನ್ನದ ಭಾಷೆಯಾಗುತ್ತಿಲ್ಲ. ಉದ್ಯೋಗ ನೀಡುತ್ತಿಲ್ಲ ಎಂಬ ನಿರಾಸೆ, ವಿಷಾದವೇ ಇದಕ್ಕೆ ಪ್ರಮುಖ ಕಾರಣ. ಈ ನಿಟ್ಟಿನಲ್ಲಿ ಸರ್ಕಾರ ಇಚ್ಛಾಶಕ್ತಿ ತೋರಿಸಬೇಕು. ಕನ್ನಡಕ್ಕಾಗಿ ಕಟಿಬದ್ಧವಾಗಬೇಕು. ‘ಕನ್ನಡ ಕಾಯಕ ವರ್ಷ’ ಘೋಷಣೆಗಷ್ಟೇ ಸೀಮಿತಗೊಳ್ಳದೆ ಕನ್ನಡ ಅಭಿವೃದ್ಧಿಗೆ ಮುತುವರ್ಜಿ ವಹಿಸಬೇಕು’ ಎಂದು ಆಗ್ರಹಿಸಿದರು.

‘ಬರವಣಿಗೆಗೆ ಯಾವುದೇ ಕಟ್ಟುಪಾಡು ಇಲ್ಲದ ವಾತಾವರಣ ಬೇಕು. ಭಯ ಇದ್ದಾಗ ಏನೂ ತಿಳಿಯದ ಮಗು ಕೂಡ ಸುಮ್ಮನಾಗುತ್ತದೆ. ಮಗು ಬದುಕಿಗಾಗಿ ಕಣ್ಣು ತೆರೆದು ನೋಡುತ್ತದೆ. ಅದನ್ನು ಭಯದಲ್ಲಿ ಕಾಣು ಎಂದು ಹೇಳಿದರೆ ಹೇಗೆ ಸಾಧ್ಯ?’ ಎಂದರು.

‘ಭಾಷೆಯ ಮೂಲಕ ಬರೆಯುತ್ತೇವೆ, ಮಾತನಾಡುತ್ತೇವೆ, ವಾಗ್ವಾದ ನಡೆಸುತ್ತೇವೆ. ಎಲ್ಲವೂ ಭಾಷೆಯ ಮೂಲಕವೇ ನಡೆಯುತ್ತದೆ. ಭಾಷೆ ಎಲ್ಲ ಸಂದರ್ಭಗಳಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡುತ್ತದೆ. ಭಾಷೆಯ ಸಂವೇದನಾಶೀಲತೆ ಅರ್ಥಮಾಡಿಕೊಂಡರೆ ಎಲ್ಲದಕ್ಕೂ ಪರಿಪೂರ್ಣವಾಗಿ ಮುಖಾಮುಖಿ ಆಗಬಹುದು’ ಎಂದು ಹೇಳಿದರು.

‘ಸಂಶೋಧನೆ ಒಂದು ಜ್ಞಾನವಾಗುವುದಾದರೆ, ಅದರ ತಾರ್ಕಿಕ ಸಂದರ್ಭವನ್ನು ಎಲ್ಲರೂ ಗೌರವಿಸಬೇಕು. ಸಂಶೋಧನೆಗೆ ಮುಖ ತಿರುಗಿಸುವ ಕೆಲಸ ಇಂದು, ನಿನ್ನೆಯಿಂದ ನಡೆಯುತ್ತಿಲ್ಲ. ಸಂಶೋಧನೆ ಆರಂಭವಾದಾಗಿನಿಂದಲೂ ಅದು ಇದೆ. ಅದನ್ನು ಕಬ್ಬಿಣದ ಕಡಲೆ ಎಂದು ತಿಳಿಯುವವರು ಅಂತಹ ವಾಗ್ವಾದವನ್ನು ನೀರಸವಾಗಿ ಮುಕ್ತಾಯಗೊಳಿಸುತ್ತಾರೆ. ಅದು ಅಪಾಯಕಾರಿ. ಸಂಶೋಧನೆ ಎಂದರೆ ಹೆಕ್ಕಿ ತೆಗೆಯುವುದು, ವಿಶ್ಲೇಷಿಸುವುದು, ಪರಸ್ಪರ ವಾಗ್ವಾದಕ್ಕೆ ದಾರಿ ಮಾಡಿಕೊಡುವಂತಹದ್ದು’ ಎಂದು ತಿಳಿಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.