ADVERTISEMENT

ಮೀಸಲಾತಿ ಹೆಚ್ಚಿಸುವವರೆಗೆ ಹೋರಾಟ ನಿಲ್ಲುವುದಿಲ್ಲ: ಮರಡಿ ಜಂಬಯ್ಯ ನಾಯಕ

​ಪ್ರಜಾವಾಣಿ ವಾರ್ತೆ
Published 16 ಮೇ 2022, 8:11 IST
Last Updated 16 ಮೇ 2022, 8:11 IST
   

ಹೊಸಪೇಟೆ (ವಿಜಯನಗರ): ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೀಸಲಾತಿ ಪ್ರಮಾಣ ಹೆಚ್ಚಿಸುವವರೆಗೆ ಹೋರಾಟ ನಿಲ್ಲುವುದಿಲ್ಲ’ ಎಂದು ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ವಿಜಯನಗರ ಜಿಲ್ಲಾ ಹೋರಾಟ ಕ್ರಿಯಾ ಸಮಿತಿ ಮುಖಂಡ ಮರಡಿ ಜಂಬಯ್ಯ ನಾಯಕ ಸ್ಪಷ್ಟಪಡಿಸಿದರು.

ಪರಿಶಿಷ್ಟ ಜಾತಿಯವರ ಮೀಸಲು ಪ್ರಮಾಣ ಶೇ 15ರಿಂದ ಶೇ 17ಕ್ಕೆ, ಪರಿಶಿಷ್ಟ ಪಂಗಡದವರ ಮೀಸಲಾತಿ ಪ್ರಮಾಣ ಶೇ 3ರಿಂದ 7.5ಕ್ಕೆ ಹೆಚ್ಚಿಸುವಂತೆ ಹರಿಹರದ ಮಹರ್ಷಿ ವಾಲ್ಮೀಕಿ ಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಅವರು ಕಳೆದ 97 ದಿನಗಳಿಂದ ಬೆಂಗಳೂರಿನಲ್ಲಿ ಧರಣಿ ನಡೆಸುತ್ತಿದ್ದಾರೆ. ರಾಜ್ಯದ ಎಲ್ಲ ಕಡೆಗಳಲ್ಲಿಯೂ ಹೋರಾಟ ನಡೆಸಲಾಗುತ್ತಿದೆ.

ಹೀಗಿದ್ದರೂ ಸರ್ಕಾರ ತನ್ನ ಹಠಮಾರಿ ಧೋರಣೆ ಬದಲಿಸಿಕೊಂಡಿಲ್ಲ. ಆದರೆ, ನಮ್ಮ ಬೇಡಿಕೆ ಈಡೇರುವವರೆಗೆ ಹೋರಾಟ ಕೂಡ ನಿಲ್ಲುವುದಿಲ್ಲ. ಇದನ್ನು ಸರ್ಕಾರ ಅರಿತುಕೊಳ್ಳಬೇಕು ಎಂದು ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಮೇ 20ರಂದು ವಿಜಯನಗರ ಜಿಲ್ಲೆ ಬಂದ್‌ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಅದನ್ನು ಸದ್ಯ ಕೈಬಿಡಲಾಗಿದೆ. ಪ್ರಸನ್ನಾನಂದ ಪುರಿ ಸ್ವಾಮೀಜಿಯವರ ಅವರ ಸಲಹೆ ಮೇರೆಗೆ ಆ ದಿನ ವಿಜಯನಗರ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು. ಅಂದು ಬೆಳಿಗ್ಗೆ 11ಕ್ಕೆ ನಗರದ ವಾಲ್ಮೀಕಿ ವೃತ್ತದಿಂದ ತಹಶೀಲ್ದಾರ್‌ ಕಚೇರಿ ವರೆಗೆ ರ್‍ಯಾಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.

ಮೀಸಲಾತಿ ಹೆಚ್ಚಿಸುವುದಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳನ್ನು ಕೊಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು. ಆದರೆ, ಈಗ ತಿಂಗಳುಗಳೇ ಕಳೆದಿವೆ. ಆದರೆ, ಆನಿಟ್ಟಿನಲ್ಲಿ ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಸಿ.ಎಂ. ಸೇರಿದಂತೆ ಸಚಿವರು ಈ ವಿಷಯದಲ್ಲಿ ಮೌನ ವಹಿಸಿರುವುದು ಸರಿಯಲ್ಲ. ರಾಜ್ಯದಲ್ಲಿ 1.68 ಕೋಟಿ ಜನಸಂಖ್ಯೆ ಹೊಂದಿರುವ ಸಮಾಜವನ್ನು ನಿರ್ಲಕ್ಷಿಸಿದರೆ ಬರುವ ಚುನಾವಣೆಯಲ್ಲಿ ಅದರ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬರುವ ದಿನಗಳಲ್ಲಿ ರಾಜ್ಯದಾದ್ಯಂತ ಪಾದಯಾತ್ರೆ ನಡೆಸಿ, ಸರ್ಕಾರದಿಂದ ಆಗುತ್ತಿರುವ ಅನ್ಯಾಯದ ವಿರುದ್ಧ ಜನರಲ್ಲಿ ಅರಿವು ಮೂಡಿಸಲಾಗುವುದು. ಅನಂತರ ಕರ್ನಾಟಕ ಬಂದ್‌ ಸೇರಿದಂತೆ ಇತರೆ ಸ್ವರೂಪದ ಹೋರಾಟಗಳನ್ನು ನಡೆಸಲಾಗುವುದು. ಮೀಸಲಾತಿ ಹೆಚ್ಚಿಸುವ ವಿಚಾರ ತಾರ್ಕಿಕ ಅಂತ್ಯ ಕಾಣುವವರೆಗೆ ವಿರಮಿಸುವುದಿಲ್ಲ. ಸರ್ಕಾರ ಇದನ್ನು ಅರಿತುಕೊಳ್ಳಬೇಕು ಎಂದರು.

ಮುಖಂಡ ಎಂ.ಸಿ. ವೀರಸ್ವಾಮಿ ಮಾತನಾಡಿ, ‘ಪರಿಶಿಷ್ಟರು ಎಲ್ಲ ಹಕ್ಕುಗಳನ್ನು ಹೋರಾಟದಿಂದಲೇ ಪಡೆದಿದ್ದಾರೆ. ಮೀಸಲಾತಿ ಹೆಚ್ಚಿಸುವ ಬೇಡಿಕೆಯನ್ನು ಹೋರಾಟದ ಮೂಲಕವೇ ಪಡೆದುಕೊಳ್ಳಲಾಗುವುದು. ಅನೇಕ ದಿನಗಳಿಂದ ಬೆಂಗಳೂರಿನಲ್ಲಿ ಪ್ರಸನ್ನಾನಂದಪುರಿ ಸ್ವಾಮೀಜಿ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಕಿವಿಗೊಟ್ಟಿಲ್ಲ. ಸಿ.ಎಂ. ಏಕೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಸಿ.ಎಂ.ಗೆ ಅವರ ಮಾತು ಉಳಿಸಿಕೊಳ್ಳಲು ಸಾಧ್ಯವಾಗದಿದ್ದರೆ ಅವರು ಆ ಸ್ಥಾನದಲ್ಲಿ ಕೂರಲು ನಾಲಾಯಕ್‌ ಎಂದು ಹೇಳಿದರು.

ಶೇ 2ರಷ್ಟು ಜನ ಯಾವುದೇ ರೀತಿಯ ಹೋರಾಟ ನಡೆಸದೇ ಶೇ 10ರಷ್ಟು ಮೀಸಲಾತಿ ಪಡೆದುಕೊಂಡಿದ್ದಾರೆ. ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಪರಿಶಿಷ್ಟರ ಮೀಸಲು ಹೆಚ್ಚಿಸಲು ಮೀನಮೇಷ ಎಣಿಸುತ್ತಿರುವುದೇಕೇ? ಸರ್ಕಾರ ತನ್ನ ಧೋರಣೆ ಬದಲಿಸಿಕೊಳ್ಳಬೇಕು. ಇಲ್ಲವಾದರೆ ಬರುವ ಚುನಾವಣೆಯಲ್ಲಿ ಪರಿಶಿಷ್ಟರ ಮತಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮುಖಂಡರಾದ ಜಂಬಯ್ಯ ನಾಯಕ, ಡಿ. ವೆಂಕಟರಮಣ, ಬಣ್ಣದಮನೆ ಸೋಮಶೇಖರ್‌, ಗೋಸಲ ಭರಮಪ್ಪ, ತಾಯಪ್ಪ ನಾಯಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.