ADVERTISEMENT

ಮೀಸಲಾತಿ ಹೆಚ್ಚಳದಿಂದ ಎಸ್ಸಿ, ಎಸ್ಟಿ ಸಮಾಜದವರ ಏಳಿಗೆ: ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2022, 14:28 IST
Last Updated 4 ನವೆಂಬರ್ 2022, 14:28 IST
   

ಹೊಸಪೇಟೆ (ವಿಜಯನಗರ): ‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಮೀಸಲಾತಿ ಪ್ರಮಾಣ ಹೆಚ್ಚಿಸಿರುವುದರಿಂದ ಎರಡೂ ಸಮಾಜದವರು ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಏಳಿಗೆ ಹೊಂದಲು ಅನುಕೂಲವಾಗಲಿದೆ’ ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಇಲಾಖೆ ಸಚಿವ ಬಿ. ಶ್ರೀರಾಮುಲು ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ಬಿಜೆಪಿ ಪರಿಶಿಷ್ಟ ಪಂಗಡ (ಎಸ್ಟಿ) ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಡಬಲ್ ಗುಂಡಿಗೆ ಇದ್ದವರು ಮಾತ್ರ ಮೀಸಲಾತಿ ಹೆಚ್ಚಿಸಬಹುದು. ನಾಲ್ಕು ದಶಕಗಳಿಂದ ಈ ಬೇಡಿಕೆ ಇತ್ತು. ಅನೇಕ ಜನ ಮುಖ್ಯಮಂತ್ರಿಗಳು ಆಗಿ ಹೋದರು. ಯಾರೂ ಮಾಡದ ಕೆಲಸ ಬಸವರಾಜ ಬೊಮ್ಮಾಯಿ ಅವರು ಮಾಡಿದ್ದಾರೆ. ಅವರಿಗೆ ಸಮಾಜದಿಂದ ಕೃತಜ್ಞತೆ ಸಲ್ಲಿಸುವುದು ನಮ್ಮ ಕರ್ತವ್ಯ. ಬಳ್ಳಾರಿ–ವಿಜಯನಗರ ಎರಡೂ ಜಿಲ್ಲೆಗಳಿಂದ ಐದು ಲಕ್ಷ ಜನ ಬಳ್ಳಾರಿಯಲ್ಲಿ ಆಯೋಜಿಸಿರುವ ಎಸ್ಟಿ ಸಮಾವೇಶದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
17 ಜಿಲ್ಲೆಗಳಲ್ಲಿ ಸಭೆ ನಡೆಸಿ ಬಳ್ಳಾರಿಯ ಎಸ್ಟಿ ಸಮಾವೇಶಕ್ಕೆ ಕಾರ್ಯಕರ್ತರನ್ನು ಆಹ್ವಾನಿಸುವ ಕೆಲಸ ನಡೆಸಲಾಗಿದೆ. ಅವಳಿ ಜಿಲ್ಲೆಗಳಿಂದಲೂ ಹೆಚ್ಚಿನ ಜನ ಬರಬೇಕು. ನಮ್ಮ ಶಕ್ತಿ ಪ್ರದರ್ಶನದ ಮೂಲಕ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಬೇಕು ಎಂದು ಹೇಳಿದರು.

ಶಾಸಕ ಎನ್.ವೈ.ಗೋಪಾಲಕೃಷ್ಣ ಮಾತನಾಡಿ, ವರ ಕೊಟ್ಟವರಿಗೆ ಶಿರ ಕೊಡಬೇಕು ಎಂಬ ಗಾದೆ ಮಾತಿದೆ. ರಾಜ್ಯ ಸರ್ಕಾರ ವರ ಕೊಟ್ಟಿದೆ. ಅದಕ್ಕೆ ಕೃತಜ್ಞತೆ ಸಲ್ಲಿಸುವ ಸಂದರ್ಭವಿದು. ನಂಬಿಕೆಗೆ ತಕ್ಕಂತೆ ಬಸವರಾಜ ಬೊಮ್ಮಾಯಿ, ಬಿ.ಎಸ್. ಯಡಿಯೂರಪ್ಪನವರು ಮೀಸಲಾತಿ ಹೆಚ್ಚಿಸಲು ಶ್ರಮಿಸಿದ್ದಾರೆ ಎಂದರು.

ADVERTISEMENT

ಶಾಸಕ ಶಿವನಗೌಡ ನಾಯಕ, ವಿಧಾನ ಪರಿಷತ್ ಸದಸ್ಯ ಹೇಮಲತಾ ನಾಯಕ, ಸಂಸದ ವೈ. ದೇವೇಂದ್ರಪ್ಪ, ನಗರಸಭೆ ಅಧ್ಯಕ್ಷೆ ಸುಂಕಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಬುನಾಥ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ, ಮುಖಂಡರಾದ ಸಿದ್ದರಾಜು, ನೇಮಿರಾಜ ನಾಯ್ಕ, ರಾಮಕೃಷ್ಣ, ಜಂಬಯ್ಯ ನಾಯಕ, ಚಂದ್ರ ನಾಯ್ಕ, ಬಂಗಾರಿ ಹನುಮಂತ, ಕಾಸೆಟ್ಟಿ ಉಮಾಪತಿ, ರಾಘವೇಂದ್ರ ಇತರರಿದ್ದರು.

‘ಚಿಕನ್‌, ಮಟನ್‌ ತಿಂದು ಗಟ್ಟಿ, ಮುಟ್ಟಿ ಇರಬೇಕು’
‘ಸಚಿವ ಬಿ. ಶ್ರೀರಾಮುಲು ಅವರು ಬೆಳ್ಳುಳ್ಳಿ, ಈರುಳ್ಳಿ ತಿನ್ನುವುದಿಲ್ಲ. ವಾಲ್ಮೀಕಿ ನಾಯಕ ಸಮಾಜದವರು ಈ ರೀತಿ ಇರಬಾರದು. ನಾನು ದಿನ ಸ್ವಲ್ಪವಾದರೂ ಚಿಕನ್‌, ಮಟನ್‌ ತಿನ್ನೇತ್ತೇನೆ. ನನ್ನಂತೆ ತಿಂದು ಸ್ವಲ್ಪ ಗಟ್ಟಿ ಮುಟ್ಟಿ ಇರಬೇಕು. ಏನೂ ತಿನ್ನದ ಕಾರಣ ಶ್ರೀರಾಮುಲು ಬಹಳ ಸೊರಗಿ ಹೋಗಿದ್ದಾರೆ. ಸಾಕಷ್ಟು ದಣಿದಿದ್ದಾರೆ’ ಎಂದು ಶಾಸಕ ಎನ್‌.ವೈ. ಗೋಪಾಲಕೃಷ್ಣ ಹೇಳಿದಾಗ ಸಭೆ ನಗೆಗಡಲಲ್ಲಿ ಮುಳುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.