ADVERTISEMENT

ಅರಸೀಕೆರೆ | ರಸ್ತೆಗೆ ಚಾಚಿದ ಜಾಲಿಮುಳ್ಳು: ಅಪಘಾತಕ್ಕೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2023, 4:48 IST
Last Updated 19 ಡಿಸೆಂಬರ್ 2023, 4:48 IST
<div class="paragraphs"><p>ಅರಸೀಕೆರೆ ಹೋಬಳಿಯ ಗಡಿಭಾಗದ ನಾಗತಿಕಟ್ಟೆ- ಫಣಿಯಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಎರಡೂ ಬದಿಗಳಲ್ಲಿ ಜಾಲಿಮುಳ್ಳಿನ ಕಂಟಿಗಳ ಮಧ್ಯೆ ಹೋಗುತ್ತಿರುವ ಶಾಲಾ ವಾಹನ</p></div>

ಅರಸೀಕೆರೆ ಹೋಬಳಿಯ ಗಡಿಭಾಗದ ನಾಗತಿಕಟ್ಟೆ- ಫಣಿಯಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಎರಡೂ ಬದಿಗಳಲ್ಲಿ ಜಾಲಿಮುಳ್ಳಿನ ಕಂಟಿಗಳ ಮಧ್ಯೆ ಹೋಗುತ್ತಿರುವ ಶಾಲಾ ವಾಹನ

   

ಅರಸೀಕೆರೆ: ಹೋಬಳಿಯ ಗಡಿಭಾಗದ ನಾಗತಿಕಟ್ಟೆ- ಫಣಿಯಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಎರಡೂ ಬದಿಗಳಲ್ಲಿ ಜಾಲಿಮುಳ್ಳಿನ ಕಂಟಿಗಳು ಅಪಘಾತಕ್ಕೆ ಆಹ್ವಾನ ನೀಡುವಂತೆ ಬೆಳೆದು ನಿಂತಿವೆ.

ಬೃಹದಾಕಾರದ ಜಾಲಿ ಮರಗಳ ಟೊಂಗೆಗಳು ರಸ್ತೆಯ ಮಧ್ಯಭಾಗದವರೆಗೂ ಆವರಿಸಿದ್ದು, ಎದರು–ಬದುರು ಬರುವ ವಾಹನ ಕೂಡ ಕಾಣದಂತಾಗಿ ಅವಘಡ ಸಂಭವಿಸುವ ಆತಂಕ ಮೂಡಿಸಿದೆ.

ADVERTISEMENT

ಪೋತಲಕಟ್ಟೆ, ನಾಗತಿಕಟ್ಟೆ ಗ್ರಾಮಗಳಿಂದ ಆಲೂರು ಶಾಲೆಗೆ ನಿತ್ಯ 40ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಮಾರ್ಗದಲ್ಲಿಯೇ ಸಂಚರಿಸುತ್ತಾರೆ. ದಟ್ಟವಾಗಿ ಹಬ್ಬಿದ ಜಾಲಿಯ ಮುಳ್ಳುಗಳಲ್ಲಿಯೇ ಶಾಲಾ ವಾಹನ ಸಂಚರಿಸುವ ಅನಿವಾರ್ಯತೆ ಇದೆ. ಆಕಸ್ಮಿಕವಾಗಿ ಚಾಲಕ ನಿರ್ಲಕ್ಷ್ಯ ತೋರಿದರೆ ಮಕ್ಕಳಿಗೆ ಅನಾಹುತ ತಪ್ಪಿದ್ದಲ್ಲ. ಅಲ್ಲದೆ, ಈ ಮಾರ್ಗವಾಗಿ ನಿತ್ಯ ರೈತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಾರೆ. ಬೈಕ್‌ ಸವಾರರಿಗಂತೂ ಹೆಲ್ಮೆಟ್‌ ಕಡ್ಡಾಯವಾಗಿದೆ. ಇಲ್ಲದಿದ್ದರೆ ಮೈಕೈಗೆ ಮುಳ್ಳು ತೆರಚಿಕೊಂಡು ಹೋಗಬೇಕಾಗುತ್ತದೆ.

‘ಅನಾದಿಕಾಲದಿಂದಲೂ ಗ್ರಾಮಕ್ಕೆ ಸುಸಜ್ಜಿತ ರಸ್ತೆ ಇಲ್ಲ. ಇಂದಿಗೂ ಫಣಿಯಾಪುರ-ನಾಗತಿಕಟ್ಟೆ- ಪೋತಲಕಟ್ಟೆ ಗ್ರಾಮದ ರಸ್ತೆಗಳು ಅಭಿವೃದ್ಧಿ ಕಂಡಿಲ್ಲ. ದಟ್ಟವಾಗಿ ಬೆಳೆದಿರುವ ಜಾಲಿ ಕಂಟಿಗಳನ್ನು ಶಾಶ್ವತವಾಗಿ ತೆರವುಗೊಳಿಸಿ, ರಸ್ತೆ ಅಭಿವೃದ್ಧಿ ಪಡಿಸಬೇಕು’ ಎಂದು ನಾಗತಿಕಟ್ಟೆ ತಾಂಡದ ಸೋಮ್ಯನಾಯ್ಕ, ಹಾಲೇಶ್, ಪೂರ್ಯನಾಯ್ಕ ಆಗ್ರಹಿಸಿದ್ದಾರೆ.

ಕ್ಷೇತ್ರ ವಿಂಗಡಣೆಯಿಂದ ರಸ್ತೆ ಅಭಿವೃದ್ಧಿ ಮರೀಚಿಕೆ

ಹರಪನಹಳ್ಳಿ ಹಾಗೂ ಜಗಳೂರು ವಿಧಾನ ಸಭಾ ಕ್ಷೇತ್ರದ ವಿಂಗಡಣೆಯಿಂದ ಗಡಿಭಾಗದ ಗ್ರಾಮಗಳ ರಸ್ತೆ ಅಭಿವೃದ್ಧಿ ಮರೀಚಿಕೆ ಆಗಿರುವ ಆರೋಪಗಳು ಕೇಳಿ ಬಂದಿದೆ. ಹರಪನಹಳ್ಳಿ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಡುವ ನಾಗತಿಕಟ್ಟೆ ತಾಂಡದ ಬಹುತೇಕ ರಸ್ತೆಗಳು ಅಭಿವೃದ್ಧಿ ಹೊಂದಿದೆ. ಆದರೆ ಜಗಳೂರು ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಹರಪನಹಳ್ಳಿ ಕ್ಷೇತ್ರದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಫಣಿಯಾಪುರ ಗೌಳೆರಹಟ್ಟಿ ಪೋತಲಕಟ್ಟೆ ರಸ್ತೆಗಳು ಇಂದಿಗೂ ಡಾಂಬರೀಕರಣಗೊಂಡಿಲ್ಲ ಎನ್ನುತ್ತಾರೆ ಪೋತಲಕಟ್ಟೆ ಮಂಜುನಾಥ್.

ರಸ್ತೆಯ ಬದಿಗಳಲ್ಲಿ ಬೆಳೆದಿರುವ ಜಾಲಿ ಮುಳ್ಳುಗಳು ರಸ್ತೆಗೆ ಚಾಚಿವೆ. ರಸ್ತೆಯೂ ಗುಂಡಿಮಯವಾಗಿದ್ದು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಲು ಹರಸಾಹಸ ಪಡಬೇಕಿದೆ
ಸಂತೋಷ್, ಶಾಲಾ ವಾಹನ ಚಾಲಕ
ರಸ್ತೆ ಸ್ಥಳಕ್ಕೆ ಭೇಟಿ ನೀಡಿ ಜಾಲಿ ತೆರವು ಹಾಗೂ ರಸ್ತೆ ಅಭಿವೃದ್ಧಿಗೆ ತುರ್ತು ಕ್ರಮ ಕೈಗೊಳ್ಳಲಾಗುವುದು.
ನಾಗಪ್ಪ, ಎಂಜಿನಿಯರ್, ಪಂಚಾಯತ್ ರಾಜ್ ಇಲಾಖೆ
ಅರಸೀಕೆರೆ ಹೋಬಳಿಯ ಗಡಿಭಾಗದ ನಾಗತಿಕಟ್ಟೆ- ಫಣಿಯಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಎರಡೂ ಬದಿಗಳಲ್ಲಿ ಜಾಲಿಮುಳ್ಳಿನ ಕಂಟಿಗಳ ಮಧ್ಯೆ ಹೋಗುತ್ತಿರುವ ಶಾಲಾ ವಾಹನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.