ಹೊಸಪೇಟೆ (ವಿಜಯನಗರ): ಜಿಲ್ಲೆಯಲ್ಲಿ ಶಾಂತಿಯುತವಾಗಿ ಗಣೇಶೋತ್ಸವ, ಈದ್ ಮಿಲಾದ್ ನಡೆಸುವ ನಿಟ್ಟಿನಲ್ಲಿ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾತ್ರಿ 10 ಗಂಟೆಯೊಳಗೆ ಡಿ.ಜೆ.ಗಳನ್ನು ಬಂದ್ ಮಾಡಬೇಕು, ಅದರೊಳಗೆ ಗಣೇಶ ವಿಸರ್ಜನೆ ಕೊನೆಗೊಳಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷುಗಿರಿ ಹೇಳಿದರು.
ಇಲ್ಲಿನ ಪಟ್ಟಣ ಪೊಲೀಸ್ ಠಾಣೆ ಆವರಣದಲ್ಲಿ ಶನಿವಾರ 100ಕ್ಕೂ ಅಧಿಕ ರೌಡಿಶೀಟರ್‌ಗಳ ಪರೇಡ್ ನಡೆಸಿದ ಬಳಿಕ ಅವರು ಮಾಧ್ಯಮದವರಿಗೆ ಈ ವಿಷಯ ತಿಳಿಸಿದರು.
‘26 ಮಂದಿಯ ರೌಡಿಗಳ ಗಡಿಪಾರಿಗೆ ಸಲ್ಲಿಸಲಾದ ಪ್ರಸ್ತಾವ ಉಪವಿಭಾಗಾಧಿಕಾರಿ ಅವರ ಪರಿಶೀಲನೆಯಲ್ಲಿದೆ. ಇನ್ನೂ ಎರಡು, ಮೂರು ಮಂದಿಯ ಹೆಸರನ್ನು ಶಿಫಾರಸು ಮಾಡಲಾಗಿದೆ. ಇದು ಗೌರವ ಪರೇಡ್ ಅಲ್ಲ, ನೀವು ಕೆಟ್ಟ ದಾರಿ ಹಿಡಿದು ಜೈಲು, ಕೋರ್ಟ್ ಅಲೆಯುತ್ತ ನಿಮ್ಮ ಜೀವನ ಹಾಳು ಮಾಡಿಕೊಂಡಿದ್ದೀರಿ, ಇತರರಿಗೆ ಇಂತಹ ಹಾದಿ ತುಳಿಯದಂತೆ ನೀವು ನಿಮ್ಮ ವ್ಯಾಪ್ತಿಯಲ್ಲಿ ತಿಳಿಹೇಳಬೇಕು ಎಂಬ ಬುದ್ಧಿವಾದವನ್ನು ನಾವು ರೌಡಿಗಳಿಗೆ ತಿಳಿಸಿದ್ದೇವೆ’ ಎಂದು ಎಸ್‌ಪಿ ಹೇಳಿದರು.
ಅಶ್ಲೀಲ ದೃಶ್ಯ ಕಳುಹಿಸಬೇಡಿ: ಮೊಬೈಲ್ ದುರ್ಬಳಕೆ ಈಚಿನ ದಿನಗಳಲ್ಲಿ ಹೆಚ್ಚಾಗಿದೆ, ಅಶ್ಲೀಲ ದೃಶ್ಯ ಕಳುಹಿಸುವುದು, ಪ್ರಚೋದನಾತ್ಮಕ ಸಂದೇಶ ಕಳುಹಿಸುವುದು ಹೆಚ್ಚುತ್ತಿದೆ. ಇದನ್ನು ಮಾಡಕೂಡದು ಎಂದು ರೌಡಿಗಳಿಗೆ ತಿಳಿಸಲಾಗಿದೆ. ಸಾರ್ವಜನಿಕರು ಸಹ ತಮ್ಮ ಮೊಬೈಲ್ ಬಳಕೆ ವಿಚಾರದಲ್ಲಿ ಎಚ್ಚರದಿಂದ ಇರಬೇಕು ಎಂದರು.
ಡಿಜೆ ಬದಲಿಗೆ ಜಾನಪದ ಕಲಾತಂಡ?: ಡಿ.ಜೆ ಬದಲಿಗೆ ಜಾನಪದ ಕಲಾತಂಡಗಳನ್ನು ಗಣೇಶ ವಿಸರ್ಜನೆ ಮೆರವಣಿಗೆಗಳಲ್ಲಿ ಬಳಸಿಕೊಂಡರೆ ಬಡ ಕಲಾವಿದರಿಗೆ ಒಂದು ತಿಂಗಳ ಅನ್ನ ಸಿಕ್ಕಿದಂತಾಗುತ್ತದೆ. ಗ್ರಾಮೀಣ ಭಾಗದಲ್ಲಿ ಮಾತ್ರವಲ್ಲ ನಗರ ಪ್ರದೇಶಗಳಲ್ಲಿ ಸಹ ಇದಕ್ಕೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಸೂಚನೆ ನೀಡಲಾಗುವುದು ಎಂದು ಎಸ್‌ಪಿ ಹೆಳಿದರು.
600 ಮಂದಿಯಿಂದ ಅರ್ಜಿ: ಜಿಲ್ಲೆಯಲ್ಲಿ ಇದುವರೆಗೆ 2,031 ಕಡೆ ಸಾರ್ವಜನಿಕ ಗಣೇಶೋತ್ಸವ ನಡೆಸುವ ನಿಟ್ಟಿನಲ್ಲಿ ಕೋರಿಕೆ ಸಲ್ಲಿಕೆಯಾಗಿದೆ. ಈ ಪೈಕಿ ಇದುವರೆಗೆ 600 ಮಂದಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿದ್ದಾರೆ, ಉಳಿದವರು ಇದೇ 25ರೊಳಗೆ ಅರ್ಜಿ ಸಲ್ಲಿಸುವ ನಿರೀಕ್ಷೆ ಇದೆ. ಧ್ವನಿವರ್ಧಕ, ಪರಿಸರ ಸ್ನೇಹಿ ಗಣೇಶ ಮೂರ್ತಿ ಬಳಕೆ ವಿಚಾರದಲ್ಲಿ ಸರ್ಕಾರ, ಕೋರ್ಟ್‌ಗಳು ನೀಡಿದ ಸೂಚನೆಯನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದರು.
ಎಎಸ್‌ಪಿ ಜಿ.ಮಂಜುನಾಥ, ಡಿವೈಎಸ್‌ಪಿ ಟಿ.ಮಂಜುನಾಥ್, ವಿವಿಧ ಠಾಣೆಗಳ ಇನ್‌ಸ್ಪೆಕ್ಟರ್‌ಗಳು, ಪಿಎಸ್‌ಐಗಳು ಇದ್ದರು.
135 ಮೊಬೈಲ್ ಹಸ್ತಾಂತರ:
ನಗರದ ವಿವಿಧ ಕಡೆಗಳಲ್ಲಿ ಕಳವು ಮಾಡಲಾಗಿದ್ದ ₹28.43 ಲಕ್ಷ ಮೌಲ್ಯದ 135 ಮೊಬೈಲ್ ಫೋನ್‌ಗಳನ್ನು ಅವುಗಳ ವಾರಸುದಾರರಿಗೆ ಎಸ್‌ಪಿ ಅರುಣಾಂಗ್ಷುಗಿರಿ ಡಿವೈಎಸ್‌ಪಿ ಕಚೇರಿ ಆವರಣದಲ್ಲಿ ಹಸ್ತಾಂತರಿಸಿದರು.
ಪಟ್ಟಣ ಠಾಣೆ ವ್ಯಾಪ್ತಿಯಲ್ಲಿ ಕಳವಾಗಿದ್ದ 55, ಗ್ರಾಮೀಣ ಠಾಣೆಯ 32,ಬಡಾವಣೆ ಠಾಣೆಯ 19, ಚಿತ್ರವಾಡ್ಗಿಯ 17, ಕಮಲಾಪುರದ 14, ಹಂಪಿ ಪ್ರವಾಸಿ ಠಾಣೆಯ 2 ಹಾಗೂ ಟಿ.ಬಿ.ಡ್ಯಾಂ ಠಾಣೆಯ 1 ಮೊಬೈಲ್ ಫೋನ್‌ಗಳನ್ನು ಮಾಲೀಕರಿಗೆ ಹಸ್ತಾಂತರಿಸಲಾಯತು.
ಕಳೆದ ಹೋಗಿದ್ದ ಮೊಬೈಲ್‌ಗಳನ್ನು ಐಆರ್ ಪೋರ್ಟಲ್‌ನಲ್ಲಿ ಬ್ಲಾಕ್ ಮಾಡಿ ತೆಲಂಗಾಣ, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಪಂಜಾಬ್, ಗುಜರಾತ್, ಬಿಹಾರ, ಹರಿಯಾಣ ಮತ್ತು ರಾಜ್ಯದ ವಿವಿಧ ಭಾಗಗಳಿಂದ ಈ ಮೊಬೈಲ್‌ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಬಡಾವಣೆ ಠಾಣೆಯ ಪಿಎಸ್‌ಐ ವಿರೂಪಾಕ್ಷ, ನಂದಿನಿ, ಕುಮಾರಾಯ್ಕ್ ಈ ಕಾರ್ಯಾಚರಣೆಯಲ್ಲಿ ತೊಡಗಿದ್ದರು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.