ADVERTISEMENT

ಸಂಭ್ರಮದಿಂದ ಸಂತ ಸೇವಾಲಾಲ್‌ ಜಯಂತಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2023, 10:22 IST
Last Updated 15 ಫೆಬ್ರುವರಿ 2023, 10:22 IST
ಸಂತ ಸೇವಾಲಾಲ್‌ ಮಹಾರಾಜರ ಜಯಂತಿ ಅಂಗವಾಗಿ ಹೊಸಪೇಟೆ ತಾಲ್ಲೂಕಿನ ಕಮಲಾಪುರದಲ್ಲಿ ಬುಧವಾರ ನಡೆದ ಮೆರವಣಿಗೆಯಲ್ಲಿ ಬಂಜಾರ ಸಮಾಜದ ಮಹಿಳೆಯರು ಲಂಬಾಣಿ ದಿರಿಸಿನಲ್ಲಿ ನೃತ್ಯ ಮಾಡಿ ಗಮನ ಸೆಳೆದರು
ಸಂತ ಸೇವಾಲಾಲ್‌ ಮಹಾರಾಜರ ಜಯಂತಿ ಅಂಗವಾಗಿ ಹೊಸಪೇಟೆ ತಾಲ್ಲೂಕಿನ ಕಮಲಾಪುರದಲ್ಲಿ ಬುಧವಾರ ನಡೆದ ಮೆರವಣಿಗೆಯಲ್ಲಿ ಬಂಜಾರ ಸಮಾಜದ ಮಹಿಳೆಯರು ಲಂಬಾಣಿ ದಿರಿಸಿನಲ್ಲಿ ನೃತ್ಯ ಮಾಡಿ ಗಮನ ಸೆಳೆದರು   

ಹೊಸಪೇಟೆ (ವಿಜಯನಗರ): ಸಡಗರ, ಸಂಭ್ರಮದ ನಡುವೆ ಸಂತ ಸೇವಾಲಾಲ್‌ ಮಹಾರಾಜರ 284ನೇ ಜಯಂತಿ ಉತ್ಸವ ತಾಲ್ಲೂಕಿನ ಕಮಲಾಪುರದಲ್ಲಿ ಬುಧವಾರ ಜರುಗಿತು.

ಪಟ್ಟಣದ ಹಂಪಿ ರಸ್ತೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಕೆರೆತಾಂಡದ ಸೇವಾಲಾಲ್‌ ಹಾಗೂ ಮರಿಯಮ್ಮದೇವಿ ದೇವಸ್ಥಾನದ ವರೆಗೆ ಸೇವಾಲಾಲ್‌ ಮಹಾರಾಜರ ಭಾವಚಿತ್ರದ ಮೆರವಣಿಗೆ ನಡೆಯಿತು. ಮೆರವಣಿಗೆಯು ಡಾ.ಬಿ.ಆರ್‌. ಅಂಬೇಡ್ಕರ್ ವೃತ್ತ, ಕೃಷ್ಣದೇವರಾಯ ವೃತ್ತ, ಊರಮ್ಮನ ಬಯಲು, ವಾಲ್ಮೀಕಿ ವೃತ್ತ, ಗಾರೆಬಾವಿ ಆಂಜನೇಯ, ಹಿರೆಕೆರಿ, ಮನ್ಮಥಕೆರಿ, ಚೌಡಿಕೆರಿ ಮಾರ್ಗವಾಗಿ ಕೆರೆತಾಂಡ ತಲುಪಿತು.

ಮೆರವಣಿಗೆಯಲ್ಲಿ ಬಂಜಾರ ಸಮಾಜದ ಯುವತಿಯರು ಗೋದಿಸಸಿ (ತೀಜ್) ತಲೆ ಮೇಲೆ ಹೊತ್ತು ಹೆಜ್ಜೆ ಹಾಕಿದರು. ಸಾಂಪ್ರದಾಯಿಕ ವಾದ್ಯ ಮೇಳಗಳು, ಕಲಾತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು. ಯುವತಿಯರು ಹಾಗೂ ಮಹಿಳೆಯರು ಸಾಂಪ್ರದಾಯಿಕ ಲಂಬಾಣಿ ದಿರಿಸಿನಲ್ಲಿ ನೃತ್ಯ ಮಾಡಿದರು. ಯುವಕರು, ಡಿಜೆ ಸಂಗೀತಕ್ಕೆ ಮನಸೋತು ಕುಣಿದು ಕುಪ್ಪಳಿಸಿದರು.

ADVERTISEMENT

ಜಯಂತಿ ಅಂಗವಾಗಿ ಕೆರೆ ತಾಂಡಾವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಜಾತ್ರೆಯ ವಾತಾವರಣ ಸೃಷ್ಟಿಯಾಗಿತ್ತು. ವಿವಿಧ ರಾಜಕೀಯ ನಾಯಕರ ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.