ADVERTISEMENT

ಚಟ್ನಿಹಳ್ಳಿ | ಕುಸಿಯುವ ಸ್ಥಿತಿಯಲ್ಲಿ ಸರ್ಕಾರಿ ಶಾಲೆ ಕಟ್ಟಡ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2023, 5:16 IST
Last Updated 31 ಡಿಸೆಂಬರ್ 2023, 5:16 IST
ಅರಸೀಕೆರೆ ಹೋಬಳಿಯ ಚಟ್ನಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳು ಬಿರುಕು ಬಿಟ್ಟಿದ್ದು, ಮೇಲ್ಚಾವಣಿ ಕುಸಿಯುತ್ತಿರುವುದನ್ನು ತೋರಿಸಿದ ಗ್ರಾಮಸ್ಥರು
ಅರಸೀಕೆರೆ ಹೋಬಳಿಯ ಚಟ್ನಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳು ಬಿರುಕು ಬಿಟ್ಟಿದ್ದು, ಮೇಲ್ಚಾವಣಿ ಕುಸಿಯುತ್ತಿರುವುದನ್ನು ತೋರಿಸಿದ ಗ್ರಾಮಸ್ಥರು   

ಅರಸೀಕೆರೆ (ವಿಜಯನಗರ ಜಿಲ್ಲೆ): ಹೋಬಳಿಯ ಚಟ್ನಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿಗಳು ಬಿರುಕು ಬಿಟ್ಟಿದ್ದು, ವಿದ್ಯಾರ್ಥಿಗಳು ಪ್ರತಿ ದಿನವೂ ಆತಂಕದಲ್ಲಿ ಪಾಠ ಆಲಿಸುವಂತಾಗಿದೆ.

ಶಾಲೆಯಲ್ಲಿ 5 ಕೊಠಡಿಗಳು ಇವೆ. ಮೂರು ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು, ಚಾವಣಿಯ ಮೇಲ್ಪದರು ಭಾಗಶಃ ಕುಸಿದಿದೆ. 1ರಿಂದ 7ನೇ ತರಗತಿವರೆಗಿನ ಈ ಶಾಲೆಯಲ್ಲಿ 102 ವಿದ್ಯಾರ್ಥಿಗಳಿದ್ದಾರೆ. ನಾಲ್ವರು ಶಿಕ್ಷಕರಿದ್ದಾರೆ.

‘ಚಾವಣಿಯ ಕಬ್ಬಿಣದ ಸರಳುಗಳು ಕಾಣುತ್ತಿವೆ. ಗೋಡೆಗಳು ಬಿರುಕು ಬಿಟ್ಟಿವೆ. ಯಾವುದೇ ಕ್ಷಣ ಕಟ್ಟಡ ಕುಸಿದು ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಮಕ್ಕಳು ಹೆದರಿಕೊಂಡೆ ಶಾಲೆಗೆ ಹೋಗುತ್ತಾರೆ’ ಎಂದು ಗ್ರಾಮಸ್ಥರು ತಿಳಿಸಿದರು.

ADVERTISEMENT

‘ಶಾಲೆ ಒಳ ಮತ್ತು ಹೊರ ಆವರಣ ಶುಚಿಯಾಗಿಲ್ಲ. ಸೊಳ್ಳೆಗಳ ಕಾಟವಿದೆ. ವಿಷ ಜಂತುಗಳ ಹಾವಳಿಯೂ ಇದೆ. ಹೀಗಾಗಿ ಶಾಲೆಯಲ್ಲಿ ಇರಲು ಸಮಸ್ಯೆ ಆಗುತ್ತದೆ. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿ, ಶಾಲೆಗೆ ಹೊಸದಾಗಿ ಕಟ್ಟಡ ನಿರ್ಮಿಸಿದರೆ ಅನುಕೂಲವಾಗುತ್ತದೆ’ ಎಂದು ವಿದ್ಯಾರ್ಥಿಗಳು ತಿಳಿಸಿದರು.

‘ನಾಲ್ಕು ದಶಕಗಳ ಹಿಂದೆ ನಿರ್ಮಾಣವಾದ ಶಾಲಾ ಕಟ್ಟಡಕ್ಕೆ ಸಣ್ಣಪುಟ್ಟ ದುರಸ್ತಿ ಕಾಮಗಾರಿ ಹೊರತು‍ಪಡಿಸಿ ಯಾವುದೇ ಹೊಸ ನಿರ್ಮಾಣ ಕಾಮಗಾರಿ ಕೈಗೊಂಡಿಲ್ಲ. ಅದಕ್ಕೆ ಶಾಲೆ ಕಟ್ಟಡ ಇಷ್ಟು ದಯನೀಯ ಸ್ಥಿತಿಗೆ  ತಲುಪಿದೆ’ ಎಂದು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯ ಪರಶುರಾಮಪ್ಪ ತಿಳಿಸಿದರು.

‘ಶಾಲೆಯ ಅಭಿವೃದ್ಧಿಗಾಗಿ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಹಲವು ಸಲ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ ತಿಳಿಸಿದರು.

ಚಾವಣಿ ಮೇಲ್ಪದರ ಕುಸಿತ: ವಿದ್ಯಾರ್ಥಿಗಳ ರಕ್ಷಣೆ

‘‌‌‌ಶಾಲೆಯ ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದ ಕಾರಣ 3 4 ಮತ್ತು 5ನೇ ತರಗತಿಯ ವಿದ್ಯಾರ್ಥಿಗಳನ್ನು ಒಂದೇ ಕೊಠಡಿಯಲ್ಲಿ ಕೂರಿಸಿ ಪಾಠ ಮಾಡುತ್ತಿದ್ದ ವೇಳೆ ಮೇಲ್ಚಾವಣಿ ಪದರು ಕೆಳಗೆ ಬಿತ್ತು. ತಕ್ಷಣವೇ ವಿದ್ಯಾರ್ಥಿಗಳು ಕೂಗಿಕೊಂಡರು. ತಕ್ಷಣವೇ ಹೋಗಿ ಅವರನ್ನು ಸಮಾಧಾನಪಡಿಸಿದೆವು. ನಂತರ ಬ್ಯಾಗು ಪುಸ್ತಕಗಳ ಸಮೇತ ವಿದ್ಯಾರ್ಥಿಗಳನ್ನು ಹೊರತಂದೆವು’ ಎಂದು ಶಿಕ್ಷಕ ಸದಾನಂದ ಗೌಡ ತಿಳಿಸಿದರು.

ಶಿಥಿಲಗೊಂಡಿರುವ ಕೊಠಡಿಗಳನ್ನು ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಾಣ ಮಾಡಿ ಮಕ್ಕಳನ್ನು ರಕ್ಷಣೆ ಮಾಡಬೇಕು. ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ.
ಕುಮಾರ್ ಚಟ್ನಿಹಳ್ಳಿ, ಅಧ್ಯಕ್ಷ, ಶಾಲಾ ಮೇಲುಸ್ತುವಾರಿ ಸಮಿತಿ
ಹರಪನಹಳ್ಳಿ ತಾಲ್ಲೂಕಿನಲ್ಲಿ 72 ಶಾಲಾ ಕೊಠಡಿ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಶಾಲೆಗೆ ಭೇಟಿ ನೀಡಿ ಪರ್ಯಾಯ ವ್ಯವಸ್ಥೆ ಮಾಡಲಾಗುವುದು.
ಯು.ಬಸವರಾಜಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ, ಹರಪನಹಳ್ಳಿ
ಅರಸೀಕೆರೆ ಹೋಬಳಿಯ ಚಟ್ನಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಮೇಲ್ಚಾವಣಿ ಕುಸಿಯುತ್ತಿರುವುದು
ಅರಸೀಕೆರೆ ಹೋಬಳಿಯ ಚಟ್ನಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.