ಕೂಡ್ಲಿಗಿ: ಪಟ್ಟಣದಲ್ಲಿ 15 ವರ್ಷಗಳ ನಂತರ ನಡೆಯುತ್ತಿರುವ ಗ್ರಾಮ ದೇವತೆ ಊರಮ್ಮ ಜಾತ್ರೆಯಲ್ಲಿ ಖರೀದಿ ಜೋರಾಗಿಯೇ ನಡೆದಿತ್ತು.
ಮೇ 20ರ ಮಂಗಳವಾರದಿಂದ ಆರಂಭವಾಗಿದ್ದ ಊರಮ್ಮ ದೇವಿಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಗುರುವಾರ ಸಂಜೆ ನಡೆದ ಅದ್ದೂರಿ ರಥೋತ್ಸವದೊಂದಿಗೆ ಸಂಪನ್ನಗೊಂಡಿತ್ತು. ಆದರೆ ಜಾತ್ರೆಯಲ್ಲಿ ಸರಕು, ಸಾಮಾನುಗಳ ಖರೀದಿ ಜೋರಾಗಿದ್ದು, ಗುರುವಾರ ಹಾಗೂ ಶುಕ್ರವಾರ ಮಧ್ಯರಾತ್ರಿಯವರಗೆ ನಡೆದು ಶನಿವಾರವೂ ಮುಂದುವರಿದಿತ್ತು.
ಅಣ್ಣಾರೆ ಹೊಸ ಮಾಡೆಲ್ ಇದ್ದರೆ ತೋರಿಸಿ, ಇದರಲ್ಲಿ ಬೇರೆ ಡಿಸೈನ್ ತೋರಿಸಿ, ಅ ಕಿವಿಯೋಲೆ ತೋರಿಸಿ, ಅವು ಜಾಸ್ತಿ ರೇಟ್ ಅದವು ಇವನ್ನೇ ಕೊಡಿ, ಹಸಿರಿನ ಜೊತೆಗೆ ಕಲರ್ ಬಳೆಯನ್ನು ಹಾಕಿ ಎಂಬ ಮಾತುಗಳು ಜಾತ್ರೆಯಲ್ಲೆಡೆ ಕೇಳಿ ಬರುತ್ತಿತ್ತು.
ಜಾತ್ರೆಗೆಂದು ಪಟ್ಟಣದ ಮದಕರಿ ವೃತ್ತದಿಂದ ಹೊಸಪೇಟೆ ರಸ್ತೆಯಲ್ಲಿ ಊರಮ್ಮ ದ್ವಾರ ಬಾಗಿಲವರೆಗೆ, ಅಂಜನೇಯ ದೇವಸ್ಥಾನದಿಂದ ಹಳೆ ಸಂತೆ ಮೈದಾನದ ಎರಡು ಕಡೆಗಳಲ್ಲಿ ಬಳೆ ಅಂಗಡಿ, ಮಕ್ಕಳಾಟಿಕೆ, ಮಹಿಳೆಯರ ಅಲಂಕಾರಿಕ ವಸ್ತಿಗಳ ಮಾರಾಟ, ವಿಭೂತಿ, ಕುಂಕುಮ, ಭಂಡಾರ ಅಂಗಡಿಗಳು ತಾತ್ಕಾಲಿಕ ಟೆಂಟುಗಳಲ್ಲಿ ತೆರೆದುಕೊಂಡಿದ್ದವು. ಮಹಿಳೆಯರು, ಯುವತಿಯರು ಬಳೆ, ಅಲಂಕಾರಿಕ ಅಂಗಡಿಗಳಿಗೆ ಮುಗಿ ಬಿದ್ದಿದ್ದರೆ, ಕೆಲವರು ಮಂಡಕ್ಕಿ ಬೆಂಡು ಬತ್ತಾಸ್ ಖರೀದಿಸುವಲ್ಲಿ ನಿರತರಾಗಿದ್ದರು. ಯುವಕರು ಬೆಲ್ಟು, ಕಣ್ಣಿಗೆ ತಂಪನೆ ಗ್ಲಾಸ್ ಕೊಂಡು ಕೊಳ್ಳುವಲ್ಲಿ ನಿರತರಾಗಿದ್ದು ಕಂಡು ಬಂದರೆ, ಚಿಕ್ಕ ಮಕ್ಕಳು ಆಟಿಕೆಗಳನ್ನು ಕೊಡಿಸುವಂತೆ ಅಳುತ್ತ ಪೋಷಕರೊಂದಿಗೆ ಸಾಗುತ್ತಿದ್ದ ದೃಶ್ಯಸಮಾನ್ಯವಾಗಿತ್ತು. ಒಂಡು ಡಜನ್ ಬಳೆಗಳ ಬೆಲೆ 100ರಿಂದ 120 ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು. ಮಹಿಳೆಯರು ಚೌಕಾಸಿ ಮಾಡಿಯೂ ಕೊಳ್ಳುವುದನ್ನು ಬಿಡಲಿಲ್ಲ. ಇನ್ನೂ ಕಾರ, ಮಂಡಕ್ಕಿ, ಬೆಂಡು ಬತ್ತಾಸ್, ಸಿಹಿ ತಿನಿಸುಗಳ ಬೆಲೆ ಸ್ಥಿರವಾಗಿದ್ದವು. ಮುಂಗಾರು ಆರಂಭವಾಗಿರುವುದರಿಂದ ರೈತರು ಸಹ ತಮಗೆ ಬೇಕಾದ ಪರಿಕರಗಳನ್ನು ಕೊಂಡುಕೊಳ್ಳುತ್ತಿದ್ದರು.
‘ಪ್ರಪಂಚ ಎಷ್ಟೇ ಮುಂದೆ ಹೋದರು ಜಾತ್ರೆ ಹಾಗೂ ಸಂತೆಯಲ್ಲಿನ ವ್ಯಾಪಾರ ಎಂದು ಕಡಿಮೆಯಾಗುವುದಿಲ್ಲ, ಜಾತ್ರೆಯಿಂದ ನಮ್ಮಂತಹ ಎಷ್ಟೋ ಜನ ಬದುಕು ಕಟ್ಟಿಕೊಳ್ಳುತ್ತಾರೆ’ ಎನ್ನುತ್ತಾರೆ ಜಾತ್ರೆಯಲ್ಲಿ ವ್ಯಾಪಾರ ಮಾಡಲು ಬಂದಿದ್ದ ಬಸವರಾಜ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.