ಹೂವಿನಹಡಗಲಿ: ಸದಾ ಬರಗಾಲಕ್ಕೆ ತುತ್ತಾಗುತ್ತಿದ್ದ ಈ ಭಾಗದ ಬರಡು ಭೂಮಿಗೆ ನೀರುಣಿಸುವ ಮಹತ್ವಾಕಾಂಕ್ಷಿ ‘ಸಿಂಗಟಾಲೂರು ಏತ ನೀರಾವರಿ ಯೋಜನೆ’ ಕಾರ್ಯಗತಗೊಂಡು 13 ವರ್ಷಗಳಾಗಿವೆ. ಪೂರ್ಣ ಅಚ್ಚುಕಟ್ಟಿಗೆ ಇನ್ನೂ ನೀರು ಹರಿದಿಲ್ಲ, ಕಾಲುವೆ ನಿರ್ಮಾಣಕ್ಕೆ ಭೂಮಿ ಕಳೆದುಕೊಂಡವರಿಗೆ ಪರಿಹಾರ ಸಿಕ್ಕಿಯೇ ಇಲ್ಲ.
ಹೂವಿನಹಡಗಲಿ ತಾಲ್ಲೂಕಿನ ರಾಜವಾಳ, ಮುಂಡರಗಿ ತಾಲ್ಲೂಕಿನ ಹಮ್ಮಿಗಿ ಮಧ್ಯದಲ್ಲಿ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ 3.12 ಟಿಎಂಸಿ ಅಡಿ ಸಾಮರ್ಥ್ಯದ ಬ್ಯಾರೇಜ್ 2012ರಲ್ಲಿ ಉದ್ಘಾಟನೆಯಾಗಿದೆ.
ಬಲದಂಡೆ ಹೂವಿನಹಡಗಲಿ ತಾಲ್ಲೂಕಿನಲ್ಲಿ ಕಾಲುವೆ ನೀರಾವರಿಯಿಂದ 35,791 ಎಕರೆ, ಎಡ ದಂಡೆಯ ಗದಗ, ಕೊಪ್ಪಳ ಜಿಲ್ಲೆಯ 1,34,445 ಎಕರೆ ಸೂಕ್ಷ್ಮ ನೀರಾವರಿಗೆ ಒಳಪಟ್ಟಿದೆ.
ತಾಲ್ಲೂಕಿನ ರಾಜವಾಳ ಶಾಖಾ ಕಾಲುವೆ ಮೂಲಕ 3,000 ಎಕರೆ, ಕೆ.ಅಯ್ಯನಹಳ್ಳಿ ಶಾಖಾ ಕಾಲುವೆಯಿಂದ 5,000 ಎಕರೆ, ಮಾಗಳ ಶಾಖಾ ಕಾಲುವೆಯಿಂದ 4,000 ಎಕರೆ, ಹೂವಿನಹಡಗಲಿ ಶಾಖಾ ಕಾಲುವೆಯಿಂದ 23,791 ಎಕರೆ ಅಚ್ಚುಕಟ್ಟು ವ್ಯಾಪ್ತಿಗೆ ಸೇರಿದೆ.
ಕಾಲುವೆಗಳ ದುರಸ್ತಿ, ನಿರ್ವಹಣೆ ಕೊರತೆಯಿಂದ 13 ವರ್ಷ ಕಳೆದರೂ ಕೊನೆಯ ಅಂಚಿನ ರೈತರಿಗೆ ನೀರು ತಲುಪಿಲ್ಲ. ಮಾಗಳ, ಅಯ್ಯನಹಳ್ಳಿ, ದಾಸರಹಳ್ಳಿ ತಾಂಡ ಬಳಿ ವಿತರಣಾ ಕಾಲುವೆಗಳು ಆಗಿಲ್ಲ. ಹೊಲಗಾಲುವೆಗಳು ನಿರ್ಮಾಣವಾಗದೇ ರೈತರು ಮೋಟಾರ್ ಅಳವಡಿಸಿಕೊಂಡೇ ಹೊಲಗಳಿಗೆ ನೀರು ಹರಿಸಿಕೊಳ್ಳಬೇಕಿದೆ. ಕೆಲ ರೈತರಿಗೆ ಯೋಜನೆ ವರದಾನವಾಗಿದ್ದರೆ, ಹಲವರಿಗೆ ನಿರಾಸೆ ತಂದಿದೆ.
ನೀರಾವರಿ ಇಲಾಖೆಯ ಅಧಿಕಾರಿಗಳ ಮಾಹಿತಿ ಪ್ರಕಾರ ಶೇ 50ರಷ್ಟು ಅಚ್ಚುಕಟ್ಟಿಗೆ ನೀರು ಹರಿಯುತ್ತಿದೆ. ಇದನ್ನು ಅಲ್ಲಗಳೆಯುವ ರೈತರು ‘ಅಣ್ಣನ ಹೊಲಕ್ಕೆ ನೀರು ಹರಿದರೆ ತಮ್ಮನ ಹೊಲಕ್ಕೆ ಹರಿಯುತ್ತಿಲ್ಲ’ ಎಂದು ದೂಷಿಸುತ್ತಿದ್ದಾರೆ.
ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಹೋಗುವ ಜಲ ಸಂಪನ್ಮೂಲ ಬಳಸಿಕೊಂಡು ತಾಲ್ಲೂಕನ್ನು ಬರಮುಕ್ತಗೊಳಿಸಬಹುದಾಗಿದ್ದರೂ ಇಚ್ಛಾಸಕ್ತಿಯ ಕೊರತೆಯಿಂದ ಅದು ಸಾಧ್ಯವಾಗಿಲ್ಲ ಎಂಬ ಆರೋಪ ರೈತರಿಂದ ಕೇಳಿ ಬರುತ್ತಿದೆ.
ಯೋಜನೆ ನಿರ್ವಹಣೆ ಸಮಸ್ಯೆ ಕುರಿತು ಸದನದಲ್ಲಿ ಗಮನ ಸೆಳೆದಿರುವೆ. ಹಲವು ಬಾರಿ ಸರ್ಕಾರಕ್ಕೆ ಪತ್ರ ಬರೆದಿದ್ದರೂ ನಿರ್ವಹಣೆಗೆ ಬಿಡಿಗಾಸು ನೀಡಿಲ್ಲ. ರೈತರಿಗೆ ಭೂ ಪರಿಹಾರ ಕೊಟ್ಟಿಲ್ಲ. ಬೇರೆ ದಾರಿ ಕಾಣಿಸದೇ ಜನರನ್ನು ಸಂಘಟಿಸಿ ಹೋರಾಟಕ್ಕೆ ಇಳಿಯುವ ಯೋಚನೆ ಮಾಡಿರುವೆಕೃಷ್ಣನಾಯ್ಕ, ಶಾಸಕ ಹೂವಿನಹಡಗಲಿ
ಅನುದಾನ ಕೊರತೆಯಿಂದ ನಿರ್ವಹಣೆ ಸಮಸ್ಯೆಯಾಗಿದೆ. ಈ ಬಾರಿ ನರೇಗಾ ಅಡಿಯಲ್ಲಿ ಕೆಲವು ಕಾಲುವೆ ಹೂಳು ತೆಗೆಸಿದ್ದೇವೆ. ಪೂರ್ಣ ಅಚ್ಚುಕಟ್ಟಿಗೆ ನೀರು ಹರಿಸಲು ಯೋಜನೆ ಹಾಕಿಕೊಂಡಿದ್ದೇವೆ. ನೀರು ಬಳಕೆದಾರರ ಸಂಘ ರಚಿಸಿ ರೈತರಲ್ಲಿ ಅರಿವು ಮೂಡಿಸಲಾಗುವುದುಶಿವಮೂರ್ತಿ ಇಇ ಸಿಂಗಟಾಲೂರು ಏ.ನೀ.ಯೋ. ವಿಭಾಗ ಹಡಗಲಿ
ಇಡೀ ತಾಲ್ಲೂಕನ್ನು ಹಸಿರಾಗಿಸುವ ನೀರಾವರಿ ಯೋಜನೆಯನ್ನು ಎಂ.ಪಿ.ಪ್ರಕಾಶ್ ಮಾಡಿ ಹೋಗಿದ್ದಾರೆ. ನಿರ್ವಹಣೆ ಕೊರತೆಯಿಂದ ಕೊನೆಯ ಭಾಗದ ರೈತರು ಇನ್ನು ನೀರು ಕಂಡಿಲ್ಲ. ಚುನಾವಣೆಯಲ್ಲಿ ಮಾತ್ರ ಜನಪ್ರತಿನಿಧಿಗಳಿಗೆ ಈ ಯೋಜನೆ ನೆನಪಾಗುವುದು ದುರ್ದೈವಎಲ್.ಸೋಮಿನಾಯ್ಕ ರೈತ ದಾಸರಹಳ್ಳಿ ತಾಂಡ
ಯೋಜನೆ ಉದ್ಘಾಟನೆಯಾಗಿ 13 ವರ್ಷವಾದರೂ ಪೂರ್ಣ ಅಚ್ಚುಕಟ್ಟಿಗೆ ನೀರು ಹರಿದಿಲ್ಲ. ತಾಂತ್ರಿಕ ಅಡೆತಡೆ ನಿವಾರಿಸಿ ಇಡೀ ತಾಲ್ಲೂಕಿಗೆ ನೀರಾವರಿ ಸೌಲಭ್ಯ ವಿಸ್ತರಿಸಬೇಕು. ಜಮೀನು ಕಳೆದುಕೊಂಡ ರೈತರಿಗೆ ಸರ್ಕಾರ ತಕ್ಷಣ ಭೂ ಪರಿಹಾರ ನೀಡಬೇಕುಎಂ.ಶಿವರಾಜ್ ಕಾರ್ಯದರ್ಶಿ ರೈತ ಸಂಘ ಹಡಗಲಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.