
ಅಬ್ದುಲ್ ರಜಾಕ್
ಹೊಸಪೇಟೆ (ವಿಜಯನಗರ): ನಗರದ 88 ಮುದ್ಲಾಪುರ ಭಾಗದಲ್ಲಿ ಮನೆಯೊಂದಕ್ಕೆ ಬಂದಿದ್ದ ನಾಗರಹಾವನ್ನು ಹಿಡಿಯಲು ಯತ್ನಿಸಿದ ನಗರದ ಸಿರಿಸಿನಕಲ್ಲು ನಿವಾಸಿ, ಬಾಲಕ ಅಬ್ದುಲ್ ರಜಾಕ್ ಯಾನೆ ಅಜ್ಜು (16) ಹಾವು ಕಚ್ಚಿ ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಹಾವು ಹಿಡಿದರೆ ₹500 ಸಿಗುತ್ತದೆ ಎಂಬ ಆಸೆಗೆ ಬಾಲಕ ಹಾವು ಹಿಡಿಯಲು ಹೋಗಿದ್ದ ಎನ್ನಲಾಗಿದೆ. ಹಾವಿನ ಬಾಲವನ್ನು ಹಿಡಿದು ಮುಂದೆ ಹೆಡೆಯನ್ನು ಹಿಡಿಯುವ ವೇಳೆ ಹಾವು ಕೈಗೆ ಕಚ್ಚಿದೆ. ಹಾವು ಕಚ್ಚಿದ ಬಳಿಕ ಎರಡು ತಾಸು ಮನೆಯಲ್ಲಿ ಯಾರಿಗೂ ಹೇಳಿರಲಿಲ್ಲ. ಆರೋಗ್ಯದಲ್ಲಿ ಏರುಪೇರಾದಾಗ, ಕೂಡಲೇ ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳಕ್ಕೆ, ನಂತರ ಹುಬ್ಬಳ್ಳಿಗೆ ಕಳುಹಿಸಿಕೊಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬಾಲಕ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.
‘ನ.4ರಂದು ಈ ಘಟನೆ ನಡೆದಿತ್ತು. ಪ್ರಥಮ ಚಿಕಿತ್ಸೆಯಾಗಿ 10 ವಾಯ್ಲ್ ಇಂಜೆಕ್ಷನ್ ಕೊಡಲಾಗಿತ್ತು. ಇಲ್ಲೇ ಉತ್ತಮ ಚಿಕಿತ್ಸೆ ಕೊಡಿಸಿ ಯುವಕನ ಜೀವ ಉಳಿಸುವ ಪ್ರಯತ್ನ ನಡೆದಿತ್ತು. ಆದರೆ, ವೈದ್ಯಕೀಯ ಸಲಹೆ ಮೀರಿ ಅವರಾಗಿಯೇ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಕೊಪ್ಪಳದತ್ತ ತೆರಳಿದ್ದರು, ಅಲ್ಲಿ ಯಾವ ಚಿಕಿತ್ಸೆಯೂ ನೀಡದೆ ಹುಬ್ಬಳ್ಳಿಗೆ ಕಳುಹಿಸಿಕೊಟ್ಟಿದ್ದರು. ಆದರೆ ಬಾಲಕ ಭಾನುವಾರ ಮೃತಪಟ್ಟಿದ್ದಾನೆ ಎಂಬ ಮಾಹಿತಿ ಇದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಲ್.ಆರ್.ಶಂಕರ್ ನಾಯ್ಕ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.