ಹೊಸಪೇಟೆ (ವಿಜಯನಗರ): ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ಯಶಸ್ವಿಯಾಗಿದ್ದಕ್ಕೆ ಹಾಗೂ ಸೇನೆಗೆ ಇನ್ನಷ್ಟು ಶಕ್ತಿ ಸಿಗಲಿ ಎಂದು ಹಾರೈಸಿ ಧಾರ್ಮಿಕ ದತ್ತಿ ಇಲಾಖೆಯ ಎಲ್ಲ ದೇವಸ್ಥಾನಗಳಲ್ಲಿ ಗುರುವಾರ ಬೆಳಿಗ್ಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಹಂಪಿ ವಿರೂಪಾಕ್ಷ, ಜಂಬುನಾಥ, ಬುಕ್ಕಸಾಗರದ ಏಳು ಹೆಡೆ ನಾಗಪ್ಪ ಕ್ಷೇತ್ರ, ವಡಕರಾಯ ದೇವಸ್ಥಾನ ಸಹಿತ ಹಲವಾರು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
‘ದೇಶಕ್ಕೆ ಒಳಿತಾಗಲಿ, ಸೇನೆಗೆ ಇನ್ನಷ್ಟು ಶಕ್ತಿ ದೊರಕಲಿ, ದೇಶ ಸುಭಿಕ್ಷವಾಗಲಿ, ದೇಶದ ಶತ್ರುಗಳ ಶಕ್ತಿ ಅಡಗಲಿ, ಅವರಿಗೆ ಉತ್ತಮ ಬುದ್ಧಿ ಬರಲಿ ಮುಂತಾದ ಪ್ರಾರ್ಥನೆ ಸಲ್ಲಿಸಿದ ಅರ್ಚಕರು, ವಿಶೇಷ ಅರ್ಚನೆ, ಅಭಿಷೇಕ, ನೈವೇದ್ಯ ಸೇವೆ ಸಲ್ಲಿಸಿ, ಆರತಿ ಬೆಳಗಿದರು.
ಮಸೀದಿಗಳಲ್ಲಿ ಇಂದು ವಿಶೇಷ ಪ್ರಾರ್ಥನೆ: ಭಾರತೀಯ ಸೈನಿಕರ ಶ್ರೇಯಸ್ಸಿಗೆ ಹಾರೈಸಿ ಶುಕ್ರವಾರ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲು ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಸೂಚನೆ ನೀಡಿದ್ದಾರೆ.
‘ವಕ್ಫ್ ಬೋರ್ಡ್ ವ್ಯಾಪ್ತಿಯ ಮಸೀದಿಗಳು ಸೇರಿದಂತೆ ರಾಜ್ಯದ ಎಲ್ಲ ಮಸೀದಿಗಳಲ್ಲಿ ದೇಶದ ಹೆಮ್ಮಯ ಸೈನಿಕರ ಶ್ರೇಯಸ್ಸಿಗಾಗಿ ಹಾಗೂ ಶಕ್ತಿ ತುಂಬಲು ಶುಕ್ರವಾರದ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.