ADVERTISEMENT

ಕುದುರೆಮುಖ ಕಂಪನಿಗೆ ಗಣಿಗಾರಿಕೆಗೆ ಅವಕಾಶ ಬೇಡ: ಎಸ್.ಆರ್.ಹಿರೇಮಠ

ಮೇಲುಸ್ತುವಾರಿ ಪ್ರಾಧಿಕಾರಕ್ಕೆ ಪತ್ರ ಬರೆದ ಸಮಾಜ ಪರಿವರ್ತನ ಸಮುದಾಯ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 15:24 IST
Last Updated 20 ಜುಲೈ 2024, 15:24 IST
ಎಸ್‌.ಆರ್‌. ಹಿರೇಮಠ
ಎಸ್‌.ಆರ್‌. ಹಿರೇಮಠ   

ಹೊಸಪೇಟೆ (ವಿಜಯನಗರ): ಸಂಡೂರು ಪ್ರದೇಶದಲ್ಲಿನ ‍ಪವಿತ್ರ ಬೊಚ್ಚಲ ಅರಣ್ಯ ಇಡೀ ಉತ್ತರ ಕರ್ನಾಟಕ ಪ್ರದೇಶ ‘ಆಮ್ಲಜನಕ ಬ್ಯಾಂಕ್’ ಆಗಿ ಕೆಲಸ ಮಾಡುತ್ತಿದ್ದು, ಇಲ್ಲಿ ಕುದುರೆಮುಖ, ಭದ್ರಾವತಿಯ ಕಬ್ಬಿಣ ಅದಿರು ಕಂಪನಿಗಳ ಗಣಿಗಾರಿಕೆಗೆ ಅವಕಾಶ ನೀಡಬಾರದೆಂಬ ಪತ್ರವನ್ನು ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣಾ ಪ್ರಾಧಿಕಾರಕ್ಕೆ ಬರೆಯಲಾಗಿದೆ.

ಈ ಬಗ್ಗೆ ಶನಿವಾರ ಇಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಮಾಜ ಪರಿವರ್ತನ ಸಮುದಾಯದ (ಎಸ್‌ಪಿಎಸ್‌) ಅಧ್ಯಕ್ಷ ಎಸ್.ಆರ್.ಹಿರೇಮಠ, ಮೇಲ್ವಿಚಾರಣಾ ಪ್ರಾಧಿಕಾರವಾಗಿರುವ ನ್ಯಾಯಮೂರ್ತಿ ಬಿ.ಸುದರ್ಶನ ರೆಡ್ಡಿ ಅವರಿಗೆ ತಮ್ಮ ಸಂಘಟನೆಯ ಜತೆಗೆ ಜನ ಸಂಗ್ರಾಮ ಪರಿಷತ್ (ಜೆಎಸ್‌ಪಿ) ಮತ್ತು ಪ್ರಾಕೃತಿಕ ಸಂಪನ್ಮೂಲ ಸಂರಕ್ಷಣೆಯ ರಾಷ್ಟ್ರೀಯ ಮಂಡಳಿಗಳು (ಎನ್‌ಸಿಪಿಎನ್‌ಆರ್‌) ವಿವರವಾದ ಏಳು ಪುಟಗಳ ಪತ್ರ ಬರೆದಿವೆ ಎಂದರು.‌

‘ಕೆಐಒಸಿಎಲ್‌, ವಿಐಎಸ್‌ಎಲ್‌, ಎಸ್‌ಎಐಎಲ್‌ ಕಂಪನಿಗಳಿಗೆ ಗಣಿಗಾರಿಕೆಗೆ ಅವಕಾಶ ನೀಡಿದರೆ ‘ಅಂತರ ತಲೆಮಾರು ಸಮಾನತೆ ನಿಯಮದ ಉಲ್ಲಂಘನೆಯಾಗುತ್ತದೆ ಹಾಗೂ ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ತುಮಕೂರು ಜಿಲ್ಲೆಗಳ ಅದಿರು ಉತ್ಪಾದನೆ ಮೇಲಿನ ಸುಪ್ರೀಂ ಕೋರ್ಟ್‌ ನಿಗದಿಪಡಿಸಿದ ಮಿತಿ (ಕ್ಯಾಪ್‌) ಉಲ್ಲಂಘನೆಯಾಗುತ್ತದೆ ಎಂಬುದನ್ನು ಪತ್ರದಲ್ಲಿ ನೆನಪಿಸಲಾಗಿದೆ’ ಎಂದು ಅವರು ಹೇಳಿದರು.

ADVERTISEMENT

‘ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ), ಮೇಲ್ವಿಚಾರಣಾ ಸಮಿತಿ ಮತ್ತು ಮೇಲ್ವಿಚಾರಣಾ ಪ್ರಾಧಿಕಾರಗಳು ಸುಪ್ರೀಂ ಕೋರ್ಟ್‌ ಹುಟ್ಟು ಹಾಕಿರುವ ಸಂಸ್ಥೆಗಳು. ಇವುಗಳೇ ತಕ್ಷಣ ಈ ನಾಲ್ಕೂ ಜಿಲ್ಲೆಗಳ ವಾಸ್ತವ ಕಬ್ಬಿಣದ ಅದಿರು ನಿಕ್ಷೇಪ/ ಸಂಪನ್ಮೂಲದ ಪ್ರಮಾಣದ ಬಗ್ಗೆ ಖಚಿತ ಮಾಹಿತಿ ಪಡೆದುಕೊಳ್ಳಬೇಕು. ಒಂದು ಅಂದಾಜಿನ ಪ್ರಕಾರ ಇಲ್ಲಿನ ಅದಿರು ಸಂಪನ್ಮೂಲ 34 ವರ್ಷಗಳಲ್ಲಿ ಬರಿದಾಗುತ್ತದೆ. ಇದರಿಂದ ಅಂತರ ತಲೆಮಾರು ಸಮಾನತೆಗೆ ತೀವ್ರ ಧಕ್ಕೆ ಉಂಟಾಗುತ್ತದೆ ಎಂಬುದನ್ನು ಪ್ರಾಧಿಕಾರದ ಗಮನಕ್ಕೆ ತರಲಾಗಿದೆ’ ಎಂದು ಹಿರೇಮಠ ವಿವರಿಸಿದರು.

ಜಿಲ್ಲಾವಾರು ಗಣಿಗಾರಿಕೆ ಮಿತಿಯನ್ನು ಕಡಿತಗಳಿಸುವ ಮೂಲಕ ಈ ಅನ್ಯಾಯವನ್ನು ತಡೆಗಟ್ಟಬಹುದು ಎಂಬ ಸಲಹೆ ನೀಡಲಾಗಿದೆ ಎಂದರು.

ಎಸ್‌ಪಿಎಸ್ ಮತ್ತು ಇತರ ಸಂಘಟನೆಗಳು ಬಳ್ಳಾರಿಯಲ್ಲಿ ಭಾನುವಾರ ಸಭೆ ಸೇರಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲಿವೆ ಎಂದು ತಿಳಿಸಿದರು.

ಜನ ಸಂಗ್ರಾಮ ಪರಿಷತ್‌ನ ರಾಜ್ಯ ಉಪಾಧ್ಯಕ್ಷ ಶ್ರೀಶೈಲ ಆಲದಳ್ಳಿ, ಸೈಯದ್ ಹೈದರ್, ಜಿ.ಕೆ.ನಾಗರಾಜ್‌ ಇದ್ದರು.

‘ಎಚ್‌ಡಿಕೆ ಬೇಜವಾಬ್ದಾರಿ ನಡೆ’

‘ಕೇಂದ್ರದ ಉಕ್ಕು ಮತ್ತು ಭಾರಿ ಉದ್ದಿಮೆಗಳ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಗಣಿಗಾರಿಕೆ ಗುತ್ತಿಗೆಗೆ ಸಂಬಂಧಿಸಿದ ಕಡತವನ್ನು ವಿವರವಾಗಿ ಪರಿಶೀಲಿಸದೆ ಕೆಐಒಸಿಎಲ್ ಕಂಪನಿಯ ಗಣಿ ಗುತ್ತಿಗೆ ಪ್ರಸ್ತಾವಕ್ಕೆ ಅಧಿಕಾರ ವಹಿಸಿಕೊಂಡ ಮೊದಲೇ ದಿನವೇ ಅನುಮೋದನೆ ನೀಡಿದ್ದು ಬೇಜವಾಬ್ದಾರಿ ನಡೆ. ಕಡತಗಳನ್ನು ಅಭ್ಯಾಸ ಮಾಡಿ ಎರಡು ಮೂರು ವಾರದ ಬಳಿಕ ನಿರ್ಧಾರಕ್ಕೆ ಬರುತ್ತಿದ್ದರೆ ಅವರಿಗೆ ಘನತೆ ಬರುತ್ತಿತ್ತು’ ಎಂದು ಎಸ್.ಆರ್.ಹಿರೇಮಠ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.