ADVERTISEMENT

ತುಂಗಭದ್ರಾ ನೀರಾವರಿ ನಿಗಮಕ್ಕೆ ಎಂಜಿನಿಯರ್‌ ಕೊರತೆ

ಮುಖ್ಯ ಕಾಲುವೆಗಳು ಹಾಗೂ ವಿಜಯನಗರ ಉಪಕಾಲುವೆಗಳ ನಿರ್ವಹಣೆಯ ಹೊಣೆಗಾರಿಕೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 6 ಜುಲೈ 2022, 3:55 IST
Last Updated 6 ಜುಲೈ 2022, 3:55 IST
ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯ
ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯ   

ಹೊಸಪೇಟೆ (ವಿಜಯನಗರ): ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ (ಕಾಡಾ) ಅಡಿ ಕೆಲಸ ನಿರ್ವಹಿಸುತ್ತಿರುವ ಇಲ್ಲಿಗೆ ಸಮೀಪದ ತುಂಗಭದ್ರಾ ನೀರಾವರಿ ನಿಗಮವು ಸಿಬ್ಬಂದಿ ಕೊರತೆಯಿಂದ ಬಳಲುತ್ತಿದೆ.

ಅದರಲ್ಲೂ ನಿಗಮದಲ್ಲಿ ಎಂಜಿನಿಯರ್‌, ಸಹಾಯಕ ಎಂಜಿನಿಯರ್‌, ಕಿರಿಯ ಎಂಜಿನಿಯರ್‌ಗಳು ಮಹತ್ವದ ಪಾತ್ರ ನಿರ್ವಹಿಸುತ್ತಾರೆ. ಆದರೆ, ಅನೇಕ ಹುದ್ದೆಗಳು ಖಾಲಿ ಉಳಿದಿವೆ. ಹುದ್ದೆ ತುಂಬಲು ಸರ್ಕಾರ ಇಚ್ಛಾಶಕ್ತಿ ತೋರಿಸುತ್ತಿಲ್ಲ ಎನ್ನುವುದು ರೈತರ ಆರೋಪ. ಒಂದುವೇಳೆ ಖಾಲಿ ಉಳಿದ ಹುದ್ದೆಗಳನ್ನು ತುಂಬಿದರೆ ಯೋಜನೆಗಳನ್ನು ಸಕಾಲದಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ವಿಳಂಬ ಉಂಟಾಗುತ್ತದೆ ಎನ್ನುವುದು ರೈತರ ವಾದ.

ಅಂದಹಾಗೆ, ನೀರಾವರಿ ಯೋಜನೆಯ ಅಧಿಕಾರಿಗಳು ಮುಖ್ಯ ಕಾಲುವೆಗಳು ಹಾಗೂ ವಿಜಯನಗರ ಕಾಲದ ಉಪಕಾಲುವೆಗಳ ನಿರ್ವಹಣೆ ಮಾಡುತ್ತಾರೆ. ರಾಜ್ಯಕ್ಕೆ ಪ್ರತಿ ವರ್ಷ ಎಷ್ಟು ನೀರು ಬೇಕು ಎನ್ನುವುದರ ನೀರಿನ ಕೋಟಾ ಕೂಡ ಸಲ್ಲಿಸುತ್ತಾರೆ. ಪ್ರತಿ ವರ್ಷ ಕಾಲುವೆಗಳ ದುರಸ್ತಿ, ನವೀಕರಣ ಕೆಲಸ ನಡೆಯುತ್ತಲೇ ಇರುತ್ತದೆ. ಹಾಲಿ ಇರುವ ಎಂಜಿನಿಯರ್‌ಗಳ ಮೇಲೆ ಹೆಚ್ಚಿನ ಕಾರ್ಯಭಾರ ಇದೆ. ಹೀಗಿದ್ದರೂ ಸರ್ಕಾರ ಖಾಲಿ ಹುದ್ದೆಗಳನ್ನು ತುಂಬಲು ಮನಸ್ಸು ಮಾಡಿಲ್ಲ.

ADVERTISEMENT

ನಿಗಮದ ಕಚೇರಿಗೆ ಒಟ್ಟು 175 ಸಹಾಯಕ ಎಂಜಿನಿಯರ್‌ ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ 90 ಹುದ್ದೆ ತುಂಬಲಾಗಿದೆ. 85 ಖಾಲಿ ಉಳಿದಿವೆ. ಒಟ್ಟು ಮಂಜೂರಾದ 118 ಜ್ಯೂನಿಯರ್‌ ಎಂಜಿನಿಯರ್‌ ಹುದ್ದೆಗಳಲ್ಲಿ 64 ತುಂಬಲಾಗಿದೆ. 85 ಹುದ್ದೆಗಳು ಖಾಲಿ ಉಳಿದಿವೆ. ಅರ್ಧದಷ್ಟು ಹುದ್ದೆಗಳು ಖಾಲಿ ಇರುವುದರಿಂದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಹಿನ್ನಡೆ ಉಂಟಾಗುತ್ತಿದೆ ಎಂದು ಗೊತ್ತಾಗಿದೆ.

ನಿರ್ವಹಣಾ ವೆಚ್ಚಕ್ಕೂ ಕತ್ತರಿ:

ಪ್ರಸ್ತಕ ಸಾಲಿಗೆ ತುಂಗಭದ್ರಾ ನೀರಾವರಿ ನಿಗಮದ ನಿರ್ವಹಣೆಗೆ ₹58 ಕೋಟಿ ಬರಬೇಕಿತ್ತು. ಆದರೆ, ₹41 ಕೋಟಿಯಷ್ಟೇ ಸರ್ಕಾರ ಬಿಡುಗಡೆಗೊಳಿಸಿದೆ. ನಿರ್ವಹಣಾ ವೆಚ್ಚದಲ್ಲಿಯೇ ಕೂಲಿ ಕಾರ್ಮಿಕರ ವೇತನ ಪಾವತಿಸಲಾಗುತ್ತದೆ. ಕಾಲುವೆ ಸುತ್ತಮುತ್ತ ಬೆಳೆದ ಜಂಗಲ್‌ ಕಟ್ಟಿಂಗ್‌ಗೆ ಹಣ ವಿನಿಯೋಗಿಸಲಾಗುತ್ತದೆ. ಆದರೆ, ಅದಕ್ಕೂ ಸರ್ಕಾರ ಕತ್ತರಿ ಹಾಕಿರುವುದರಿಂದ ಸಮಸ್ಯೆ ಉದ್ಭವಿಸಿದೆ.

‘ಒಟ್ಟು ನಿರ್ವಹಣಾ ವೆಚ್ಚದಲ್ಲಿ ₹41 ಕೋಟಿಯಷ್ಟೇ ಬಂದಿದೆ. ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಅದರ ಮೊತ್ತ ಆಧರಿಸಿ, ಕಾಲಕಾಲಕ್ಕೆ ಅನುದಾನ ಬಿಡುಗಡೆಗೊಳಿಸಲಾಗುತ್ತದೆ’ ಎಂದು ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಬಸಪ್ಪ ಜಾನಕರ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ನಿಗಮದಲ್ಲಿ ಎಂಜಿನಿಯರ್‌ಗಳ ಕೊರತೆ ಇರುವುದರಿಂದ ಸಕಾಲಕ್ಕೆ ಸಮಸ್ಯೆಗೆ ಸ್ಪಂದಿಸಲು ಆಗುತ್ತಿಲ್ಲ. ಈ ಕುರಿತು ಸ್ವತಃ ರೈತರೇ ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದ್ದರು. ಆದರೆ, ಮೂವರು ಮುಖ್ಯಮಂತ್ರಿಗಳು ಬದಲಾದರೂ ಸಮಸ್ಯೆ ಬಗೆಹರಿದಿಲ್ಲ. ಸರ್ಕಾರದ ಇಚ್ಛಾಶಕ್ತಿ ಏನೆಂಬುದು ಇದು ತೋರಿಸುತ್ತದೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಜೆ. ಕಾರ್ತಿಕ್‌ ತಿಳಿಸಿದರು.

ತುಂಗಭದ್ರಾ ನೀರಾವರಿ ನಿಗಮದ ಹುದ್ದೆಗಳ ವಿವರ

175 ಒಟ್ಟು ಮಂಜೂರಾದ ಸಹಾಯಕ ಎಂಜಿನಿಯರ್‌ ಹುದ್ದೆ

90 ಹುದ್ದೆಗಳು ಭರ್ತಿ

85 ಖಾಲಿ ಉಳಿದ ಹುದ್ದೆಗಳು

118 ಮಂಜೂರಾದ ಒಟ್ಟು ಕಿರಿಯ ಎಂಜಿನಿಯರ್‌ ಹುದ್ದೆ

64 ಹುದ್ದೆಗಳು ಭರ್ತಿ

54 ಖಾಲಿ ಹುದ್ದೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.