
ಹೊಸಪೇಟೆ: ಹಿಂದೂಗಳಲ್ಲಿನ ಜಾತಿ ತಾರತಮ್ಯ ಮೀರಿ ಎಲ್ಲರೂ ಒಗ್ಗಟ್ಟಿನಿಂದ ಸಾಗಿದಾಗ ಇಡೀ ಜಗತ್ತಿನಲ್ಲೇ ಶಕ್ತಿಶಾಲಿಯಾಗಿ ಬೆಳೆದು ನಿಲ್ಲುವುದು ಸಾಧ್ಯವಿದೆ ಎಂಬುದು ಈಗಾಗಲೇ ಸಾಬೀತಾಗಿದೆ, ಈ ಒಗ್ಗಟ್ಟನ್ನು ಮುರಿಯುವ ಪ್ರಯತ್ನವೂ ನಡೆಯುತ್ತಿದೆ, ಅದಕ್ಕೆ ಫಲ ಸಿಗದು ಎಂದು ಆರ್‌ಎಸ್ಎಸ್‌ನ ಆಂಧ್ರ, ತೆಲಂಗಾಣ, ಕರ್ನಟಕ ದಕ್ಷಿಣದ ಬೌದ್ಧಿಕ ಪ್ರಮುಖ ಶ್ರೀಧರಸ್ವಾಮಿ ಹೇಳಿದರು.
ಇಲ್ಲಿ ಗುರುವಾರ ಸಂಜೆ ನಗರಸಭೆಯ ನಾಲ್ಕು ವಾರ್ಡ್‌ಗಳ ಮಟ್ಟದ ಹಿಂದೂ ಸಮ್ಮೇಳನದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಈ ಹಿಂದೆ ಸಹ ನಮ್ಮ ಸಂಪತ್ತನ್ನು ಕೊಳ್ಳೆ ಹೊಡೆಯಲಾಯಿತೇ ಹೊರತು ನಮ್ಮ ಒಗ್ಗಟ್ಟನ್ನು ಮುರಿಯುವುದು ಸಾಧ್ಯವಾಗಿರಲಿಲ್ಲ, ಅದೇ ಪರಂಪರೆ ಮುಂದೆಯೂ ಇರಲಿದೆ, ಹೀಗಾಗಿ ನಮ್ಮ ಏಕತೆಯನ್ನು ತುಳಿಯಲು ಪ್ರಯತ್ನಿಸುವ ನಮ್ಮವರಿಗೆ ನಾವೆಲ್ಲ ನಮ್ಮ ಶಕ್ತಿಯ ಮನವರಿಕೆ ಮಾಡಬೇಕಾಗಿದೆ ಎಂದರು.
ಪಾಶ್ಚಾತ್ಯ ಅನುಕರಣೆಯೇ ನಾವು ಇಂದು ಗಂಭೀರವಾಗಿ ಪರಿಶೀಲಿಸಬೇಕಾದ ವಿಷಯವಾಗಿದ್ದು, ಅದರಿಂದ ವಿಮುಖವಾದರೆ ದೇಶಕ್ಕೆ ಯಾವ ತೊಂದರೆಯೂ ಇರುವುದಿಲ್ಲ. ಈಗಾಗಲೇ ಚಾಲ್ತಿಯಲ್ಲಿರುವ ಸ್ವದೇಶಿ ವಸ್ತುಗಳ ಬಳಕೆ, ಆತ್ಮನಿರ್ಭರ ಭಾರತ ಪರಿಕಲ್ಪನೆ ಬಹಳಷ್ಟು ಶಕ್ತಿಶಾಲಿಯಾಗಿದ್ದು, ಅದನ್ನು ಅನುಸರಿಸುವ ಪ್ರಯತ್ನ ನಮ್ಮಿಂದ ಆಗಬೇಕು ಎಂದರು.
ಸೋಸಲೆ ವ್ಯಾಸರಾಜ ಮಠದ ವಿದ್ಯಾಶ್ರೀಶತೀರ್ಥ ಶ್ರೀಪಾದರು, ಹಂಪಿ ಮಾತಂಗ ಪರ್ವತ ಪೀಠದ ಪೂರ್ಣಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಎಚ್.ಜಗನ್ನಾಥ ರಾಜುಲಾ ಪ್ರಮಾಣವಚನ ಬೋಧಿಸಿದರು.
ನಗರಸಭೆ ಅಧ್ಯಕ್ಷ ಎನ್. ರೂಪೇಶ್ ಕುಮಾರ್, ಪ್ರಮುಖರಾದ ಕಟಗಿ ರಾಮಕೃಷ್ಣ, ಅಯ್ಯಾಳಿ ತಿಮ್ಮಪ್ಪ ಇದ್ದರು. ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನೂರಾರು ಮಂದಿ ಸೇರಿದ್ದರು. ರಾಣಿಪೇಟೆಯಿಂದ ವೆಂಕಟೇಶ್ವರ ಕಲ್ಯಾಣ ಮಂಟಪದ ವರೆಗೆ ಮೆರವಣಿಗೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.