ADVERTISEMENT

ವಿಜಯನಗರ: ಬಾಲಕನ ಮೇಲೆ ಬೀದಿ ನಾಯಿ ದಾಳಿ

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 6:39 IST
Last Updated 31 ಜುಲೈ 2024, 6:39 IST
   

ಹೊಸಪೇಟೆ (ವಿಜಯನಗರ): ನಗರದ ಚಿತ್ತವಾಡ್ಗಿ ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆ ನಾಲ್ಕು ವರ್ಷದ ಬಾಲಕನ ಮೇಲೆ ಬೀದಿನಾಯಿಯೊಂದು ದಾಳಿ ನಡೆಸಿದ್ದು, ಬಾಲಕನ ಕೆನ್ನೆ, ಬೆನ್ನು, ಕಾಲಿಗೆ ಗಂಭೀರ ಗಾಯವಾಗಿದೆ.

ಒಂದನೇ ವಾರ್ಡ್‌ ಚಿತ್ತವಾಡ್ಗಿ ಕಾಕರ ಓಣಿಯ ಗಂಕಪ್ಪ ಅವರ ಪುತ್ರ ಪರಶುರಾಮ ಮನೆ ಸಮೀಪ ಆಟವಾಡುತ್ತಿದ್ದಾಗ ಒಂದು ನಾಯಿ ದಾಳಿ ನಡೆಸಿ ಆತನ ಕೆನ್ನೆಯ ಮಾಂಸ ಕಚ್ಚಿ ಎಳೆದಿದೆ. ಜತೆಗೆ ಬೆನ್ನು, ಕಾಲಿಗೂ ಗಾಯವಾಗಿದೆ.

ತಕ್ಷಣ ಬಾಲಕನನ್ನು ಇಲ್ಲಿನ 100 ಹಾಸಿಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗಿದೆ. ಬಾಲಕ ಅಪಾಯದಿಂದ ಪಾರಾಗಿದ್ದಾನೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ADVERTISEMENT

ಬೀದಿನಾಯಿ ಹಾವಳಿ: ‘ಚಿತ್ತವಾಡ್ಗಿ ಪ್ರದೇಶದಲ್ಲೇ 600ಕ್ಕೂ ಅಧಿಕ ಬೀದಿನಾಯಿಗಳಿವೆ. ಮಕ್ಕಳು, ವಯಸ್ಕರ ಮೇಲೆ ಆಗಾಗ ದಾಳಿ ನಡೆಸುವ ವಿದ್ಯಮಾನ ನಡೆಯುತ್ತಿದ್ದರೂ ಈ ಬಾರಿ ಅದು ವಿಕೋಪಕ್ಕೆ ಹೋಗಿ ಬಾಲಕನಿಗೆ ತೀವ್ರ ಗಾಯವಾಗುವಂತಾಗಿದೆ. ನಗರಸಭೆ ತಕ್ಷಣ ಬೀದಿನಾಯಿಗಳ ಹಾವಳಿ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಕೆ.ಎಂ.ಸಂತೋಷ್ ಕುಮಾರ್ ಒತ್ತಾಯಿಸಿದರು.

ಶಾಸಕ ಭೇಟಿ: ಬಾಲಕ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಶಾಸಕ ಎಚ್‌.ಆರ್.ಗವಿಯಪ್ಪ ಭೇಟಿ ನೀಡಿ ಬಾಲಕನ ಆರೋಗ್ಯ ವಿಚಾರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.