ADVERTISEMENT

ವಿಜಯನಗರ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಿಂದ ಮುಷ್ಕರ

ಜಿಲ್ಲೆಯಲ್ಲಿ ಗ್ರಾಮ ಆಡಳಿತ ಸಂಪೂರ್ಣ ಬಂದ್

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2025, 9:58 IST
Last Updated 10 ಫೆಬ್ರುವರಿ 2025, 9:58 IST
<div class="paragraphs"><p>ವಿಜಯನಗರ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಿಂದ ಮುಷ್ಕರ</p></div>

ವಿಜಯನಗರ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಿಂದ ಮುಷ್ಕರ

   

ಹೊಸಪೇಟೆ (ವಿಜಯನಗರ): ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಗ್ರಾಮಾಡಳಿತ ಅಧಿಕಾರಿಗಳು (ಹಿಂದಿನ ವಿ.ಎ.ಗಳು) ಸೋಮವಾರದಿಂದ ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದು, ಜನನ ಮರಣ, ಜಾತಿ, ಆದಾಯ ಪ್ರಮಾಣ ಪತ್ರ ಸಹಿತ ಹಲವು ಸೇವೆಗಳು ಸ್ಥಗಿತಗೊಂಡಿವೆ.

‘2024ರ ಸೆಪ್ಟೆಂಬರ್‌ 26ರಿಂದ ಅಕ್ಟೋಬರ್‌ 3ರವರೆಗೆ ಇದೇ ರೀತಿಯಲ್ಲಿ ಮುಷ್ಕರ ನಡೆಸಿದ್ದೆವು. ಸರ್ಕಾರ ತಾನು ನೀಡಿದ ಭರವಸೆ ಈಡೇರಿಸಿಲ್ಲ. ಹೀಗಾಗಿ ರಾಜ್ಯ ಸಂಘದ ಕರೆಯಂತೆ ಎರಡನೇ ಹಂತದ ಮುಷ್ಕರ ಆರಂಭಿಸಿದ್ದೇವೆ. ಎಲ್ಲರೂ ಒಂದು ತಿಂಗಳ ಸಾಮೂಹಿಕ ರಜೆಗೆ ಅರ್ಜಿ ಹಾಕಿದ್ದೇವೆ, ಸರ್ಕಾರ ಶೀಘ್ರ ಬೇಡಿಕೆ ಈಡೇರಿಸುವ ವಿಶ್ವಾಸ ಇದೆ’ ಎಂದು ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಹೊಸಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ರವಿಚಂದ್ರ ಎಸ್.ಗೊಗ್ಗಿ ತಿಳಿಸಿದರು.

ADVERTISEMENT

‘ಇದು ಮೊದಲ ದಿನದ ಮುಷ್ಕರ. ಜನರಿಗೆ ಸೇವೆಯಲ್ಲಿ ಅಂತಹ ವ್ಯತ್ಯಯ ಆಗಿರುವುದಿಲ್ಲ, ತತ್ಕಾಲ್‌ನಲ್ಲೂ ಸೇವೆ ನೀಡುವುದಕ್ಕೆ ನಿರ್ದಿಷ್ಟ ಸಮಯ ಇರುತ್ತದೆ. ಸರ್ಕಾರ ಬೇಗ ಸ್ಪಂದಿಸಿದರೆ ಜನರಿಗೆ ಕಷ್ಟವಾಗುವುದಿಲ್ಲ, ಸದ್ಯ ಮೂರು ದಿನ ಮುಷ್ಕರ ನಡೆಯುತ್ತದೆ, ಸರ್ಕಾರ ಸ್ಪಂದಿಸದಿದ್ದರ ಅದು ಮುಂದುವರಿಯಬಹುದು, ಏನಿದ್ದರೂ ರಾಜ್ಯ ಸಂಘದ ನಿರ್ಧಾರವನ್ನು ನಾವೆಲ್ಲ ಪಾಲಿಸುತ್ತೇವೆ’ ಎಂದರು.

ಹೊಸಪೇಟೆ ತಾಲ್ಲೂಕಿನಲ್ಲಿ ಸದ್ಯ 29 ಮಂದಿ ಗ್ರಾಮಾಡಳಿತ ಅಧಿಕಾರಿಗಳಿದ್ದು, ಅವರೆಲ್ಲರೂ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ತಮಗೆ ಒಂದು ತಿಂಗಳ ರಜೆ ನೀಡಬೇಕೆಂದು ಅವರೆಲ್ಲರೂ ಸಾಮೂಹಿಕವಾಗಿ ರಜೆ ಅರ್ಜಿಯನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಿದ್ದು, ಅವರಿಂದ ಇನ್ನೂ ಉತ್ತರ ಬಂದಿಲ್ಲ ಎಂದು ಹೇಳಲಾಗಿದೆ.

ಇಲ್ಲಿನ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ನಡೆದ ಮುಷ್ಕರದಲ್ಲಿ ಸಂಘದ ಅಧ್ಯಕ್ಷ ರವಿಚಂದ್ರ ಜತೆಗೆ ಪ್ರಧಾನ ಕಾರ್ಯದರ್ಶಿ ಜಯಪ್ರತಾಪ್‌, ಉಪಾಧ್ಯಕ್ಷ ಅನಿಲ್‌ ಕುಮಾರ್, ಖಜಾಂಚಿ ಅಶೋಕ್‌ ಮೇಟಿ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.