ADVERTISEMENT

ಕಾಯಂ ಉದ್ಯೋಗಕ್ಕೆ ಹೋರಾಟ ನಿರಂತರ: ಡಿವೈಎಫ್‌ಐ ಒಕ್ಕೊರಲ ನಿರ್ಧಾರ

ಡಿವೈಎಫ್‌ಐ ರಾಜ್ಯ ಸಂಘಟನಾ ಕಾರ್ಯಾಗಾರದಲ್ಲಿ ಒಕ್ಕೊರಲ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2024, 12:16 IST
Last Updated 24 ಆಗಸ್ಟ್ 2024, 12:16 IST
<div class="paragraphs"><p>ಡಿವೈಎಫ್‌ಐ ರಾಜ್ಯ ಸಂಘಟನಾ ಕಾರ್ಯಾಗಾರ</p></div>

ಡಿವೈಎಫ್‌ಐ ರಾಜ್ಯ ಸಂಘಟನಾ ಕಾರ್ಯಾಗಾರ

   

ಹೊಸಪೇಟೆ: ಕೇಂದ್ರ ಸರ್ಕಾರ ನಿರುದ್ಯೋಗ ತೊಡೆದು ಹಾಕುವಲ್ಲಿ ವಿಫಲವಾಗಿದೆ. ಅಪ್ರೆಂಟ್‌ಷಿಪ್‌ ಹೆಸರಲ್ಲಿ ₹5 ಸಾವಿರ ನೀಡುವ ಮಾತನ್ನು ಸರ್ಕಾರ ಈಗ ಆಡುತ್ತಿದೆ. ಇದರಿಂದ ಮನೆ ನಡೆಯಲು ಸಾಧ್ಯವಿಲ್ಲ. ಕಾಯಂ ಉದ್ಯೋಗವನ್ನೇ ನೀಡಬೇಕು ಎಂಬ ನಿಟ್ಟಿನಲ್ಲಿ ಡಿವೈಎಫ್‌ಐ ಹೋರಾಟ ನಿರಂತರ ಸಾಗಲಿದೆ ಎಂಬ ನಿರ್ಧಾರ ಕೈಗೊಳ್ಳಲಾಗಿದೆ.

ಶಿಕ್ಷಣ, ಉದ್ಯೋಗ, ಆರೋಗ್ಯದ ಹಕ್ಕಿಗಾಗಿ ಹಾಗೂ ವಿಜಯುನಗರ–ಬಳ್ಳಾರಿ ಜಿಲ್ಲೆಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಶನಿವಾರ ಇಲ್ಲಿ ಆರಂಭವಾದ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌ನ (ಡಿವೈಎಫ್‌ಐ) ರಾಜ್ಯ ಸಂಘಟನಾ ಕಾರ್ಯಾಗಾರದಲ್ಲಿ ಮಾತನಾಡಿದ ಸಂಘಟನೆಯ ಅಖಿಲ ಭಾರತ ಅಧ್ಯಕ್ಷರೂ ಆಗಿರುವ ರಾಜ್ಯಸಭಾ ಸದಸ್ಯ ಎ.ಎ.ರಹೀಂ ಈ ವಿಷಯ ತಿಳಿಸಿದರು.

ADVERTISEMENT

ಕೇಂದ್ರ ಸರ್ಕಾರದ 9.79 ಲಕ್ಷ ಹುದ್ದೆಗಳು, ರೈಲ್ವೆ  ಇಲಾಖೆಯ 2.74 ಲಕ್ಷ ಹುದ್ದೆಗಳ ಸಹಿತ ಕೇಂದ್ರ ಸರ್ಕಾರ ಭರ್ತಿ ಮಾಡಬೇಕಾದ ಲಕ್ಷಾಂತರ ಹುದ್ದೆಗಳಿಗೆ ನೇಮಕಾತಿ ಮಾಡುತ್ತಿಲ್ಲ, ಬದಲಿಗೆ ಗುತ್ತಿಗೆ ವ್ಯವಸ್ಥೆಯನ್ನು ಉತ್ತೇಜಿಸುತ್ತಿದೆ. ಸೇನೆಯಲ್ಲೂ ಅಗ್ನಿವೀರ ಹೆಸರಲ್ಲಿ ಗುತ್ತಿಗೆ ಪದ್ಧತಿ ತರಲಾಗಿದೆ. ಕೇಂದ್ರ ಸರ್ಕಾರದ ತಪ್ಪು ಆರ್ಥಿಕ ನೀತಿಯಿಂದ ಜೀವನ ವೆಚ್ಚ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಹೀಗಾಗಿ ‘ನಮಗೆ ಕಾಯಂ ಉದ್ಯೋಗ ಬೇಕು’ ಎಂಬ ಒತ್ತಾಯವನ್ನು ಅಭಿಯಾನವನ್ನಾಗಿ ರೂಪಿಸುವ ಕಾಲ ಬಂದಿದ್ದು, ಡಿವೈಎಫ್‌ಐ ಅದನ್ನು ಮುಂದಕ್ಕೆ ಕೊಂಡೊಯ್ಯಲಿದೆ ಎಂದು ಅವರು ಹೇಳಿದರು.

ಸಂಘಟನೆಯ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಬೆಂಗಳೂರಿನಲ್ಲಿ ಮಾತ್ರವಲ್ಲ, ಜಿಲ್ಲಾ ಮಟ್ಟದಲ್ಲೂ ಉದ್ಯೋಗ ಅವಕಾಶ ಹೆಚ್ಚಿಸಬೇಕು, ಇಲ್ಲೂ ಸ್ಥಳೀಯರಿಗೆ ಹೆಚ್ಚಿನ ಅವಕಾಶ ನೀಡಬೇಕು. ಕೆಲವೇ  ಕೆಲವು ಕಾರ್ಪೊರೇಟ್ ಕಂಪನಿಗಳ ಒತ್ತಡಕ್ಕೆ ಮಣಿದು ನೇಮಕಾತಿಯಲ್ಲಿ ಕನ್ನಡಿಗರಿಗೆ ಮೀಸಲಾತಿ ಅಧಿಸೂಚನೆ ಹಿಂಪಡೆದ ರಾಜ್ಯ ಸರ್ಕಾರದ ಕ್ರಮ ಖಂಡನೀಯ ಎಂದರು.

ಜಿಂದಾಲ್ ಕಂಪನಿಗೆ ಭೂಮಿ ಮಾರಾಟ ಮಾಡುವುದರ ವಿರುದ್ಧ ಈ ಹಿಂದೆ ಸಂಘಟಿತವಾಗಿ ಹೋರಾಟ ನಡೆಸಲಾಗಿತ್ತು. ಇದೀಗ ಮತ್ತೆ ಅಂತಹದೇ ಹೋರಾಟದ ಅಗತ್ಯ ಎದುರಾಗಿದೆ. ಈ ಹಿಂದೆ ಭೂಮಿ ಮಾರಾಟಕ್ಕೆ ವಿರೋಧಿಸಿದ್ದ ಕಾಂಗ್ರೆಸ್‌ ಇದೀಗ ಉಲ್ಟಾ ಹೊಡೆದಿದೆ. ಮೂರೂ ಪಕ್ಷಗಳು ಒಂದೇ ಎಂಬುದನ್ನು ಇದು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದರು.

ಡಿವೈಎಫ್‌ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಪೂಜಾರ ಪ್ರಾಸ್ತಾವಿಕ ಮಾತನಾಡಿದರು. ಅಧ್ಯಕ್ಷೆ ಲವಿತ್ರ ವಸ್ತ್ರದ್‌ ಅಧ್ಯಕ್ಷತೆ ವಹಿಸಿದ್ದರು. ಸಿದ್ಧತಾ ಸಮಿತಿಯ ಅಧ್ಯಕ್ಷ ಎ.ಕರುಣಾನಿಧಿ ಸಂಘಟನೆಯ ಬಗ್ಗೆ ಮಾತನಾಡಿ, ಯುವಪಡೆ ಉತ್ಸಾಹ ಕಳೆದುಕೊಂಡಂತೆ ಕಾಣಿಸುತ್ತಿದ್ದು, ಮತ್ತೆ ಪ್ರಬಲವಾಗಿ ಹೋರಾಟಕ್ಕೆ ಸಜ್ಜಾಗಬೇಕು ಎಂದರು.

ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ನಾಗರತ್ನಮ್ಮ, ದಲಿತ ಹಕ್ಕುಗಳ ಸಮಿತಿಯ ರಾಜ್ಯ ಉಪಾಧ್ಯಕ್ಷ ಜಂಬಯ್ಯ ನಾಯಕ, ವಿಮಾ ನೌಕರರ ಸಂಘದ ಅಧ್ಯಕ್ಷ ಜೆ.ಪ್ರಕಾಶ, ಜಿಲ್ಲಾ ಕಾರ್ಯದರ್ಶಿ ಈಡಿಗರ ಮಂಜುನಾಥ, ಅಧ್ಯಕ್ಷ ವಿ.ಸ್ವಾಮಿ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.