ADVERTISEMENT

ಪರಿಶಿಷ್ಟ ವಿದ್ಯಾರ್ಥಿ ದೊಡ್ಡಬಸಪ್ಪ ಬೆಂಬಲಕ್ಕೆ ನಿಂತ ವಿದ್ಯಾರ್ಥಿಗಳಿಂದ ಧರಣಿ

ನೋಟಿಸ್‌ ಹಿಂಪಡೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2022, 6:43 IST
Last Updated 20 ಏಪ್ರಿಲ್ 2022, 6:43 IST
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕ್ರಿಯಾಶಕ್ತಿ ಕಟ್ಟಡದಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಮಂಗಳವಾರ ಧರಣಿ ನಡೆಸಿದರು
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕ್ರಿಯಾಶಕ್ತಿ ಕಟ್ಟಡದಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಮಂಗಳವಾರ ಧರಣಿ ನಡೆಸಿದರು   

ಹೊಸಪೇಟೆ (ವಿಜಯನಗರ): ಪರಿಶಿಷ್ಟ ಜಾತಿಯ ಸಂಶೋಧನಾ ವಿದ್ಯಾರ್ಥಿ ಎ.ಕೆ. ದೊಡ್ಡಬಸಪ್ಪ ಅವರಿಗೆ ನೀಡಿರುವ ನೋಟಿಸ್‌ ಹಿಂಪಡೆಯಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ಮಂಗಳವಾರ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕ್ರಿಯಾಶಕ್ತಿ ಕಟ್ಟಡದಲ್ಲಿ ಶಾಂತಿಯುತ ಧರಣಿ ನಡೆಸಿದರು.

40 ತಿಂಗಳ ಫೆಲೋಶಿಪ್‌ ಬಿಡುಗಡೆಗೆ ಕ್ರಮ ಜರುಗಿಸಬೇಕೆಂದು ದೊಡ್ಡಬಸಪ್ಪ ನೇತೃತ್ವದಲ್ಲಿ ಇತ್ತೀಚೆಗೆ ವಿದ್ಯಾರ್ಥಿಗಳು ರಾಜ್ಯಪಾಲರು, ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದರು. ಅದನ್ನೇ ದುರ್ವರ್ತನೆ ಎಂದು ಆರೋಪಿಸಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ ಅವರು ಏ. 18ರಂದು ನೋಟಿಸ್‌ ನೀಡಿದ್ದರು. ಪಿಎಚ್‌.ಡಿ. ಅಧ್ಯಯನದ ಕಾಯಂ ನೋಂದಣಿ ಏಕೆ ರದ್ದುಗೊಳಿಸಬಾರದು ಎಂದು ನೋಟಿಸ್‌ನಲ್ಲಿ ಕೇಳಿದ್ದಾರೆ. ಈ ಧೋರಣೆಯನ್ನು ಖಂಡಿಸಿ, ದೊಡ್ಡಬಸಪ್ಪ ಅವರನ್ನು ಬೆಂಬಲಿಸಿ ವಿದ್ಯಾರ್ಥಿಗಳು ಎರಡು ಗಂಟೆಗೂ ಹೆಚ್ಚು ಕಾಲ ಧರಣಿ ನಡೆಸಿದರು.

ನಂತರ ಕುಲಸಚಿವರನ್ನು ಭೇಟಿಯಾಗಿ, ‘ದೊಡ್ಡಬಸಪ್ಪ ಅವರು ವಿದ್ಯಾರ್ಥಿಗಳಿಗೆ ಸಿಗಬೇಕಾದ ಫೆಲೋಶಿಪ್‌ ಸಂಬಂಧ ಮಾತನಾಡಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ. ದುರ್ವರ್ತನೆ ತೋರಿಲ್ಲ. ಅವರಿಗೆ ಕೊಟ್ಟಿರುವ ನೋಟಿಸ್‌ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು. ಅದಕ್ಕವರು, ನೋಟಿಸ್‌ಗೆ ಉತ್ತರ ಕೊಟ್ಟ ನಂತರ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ADVERTISEMENT

‘ಕನ್ನಡ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಹೆಚ್ಚಿನ ವಿದ್ಯಾರ್ಥಿಗಳಲ್ಲಿ ಗ್ರಾಮೀಣ ಬಡ, ಪರಿಶಿಷ್ಟ, ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ. ಫೆಲೋಶಿಪ್‌ ನೆಚ್ಚಿಕೊಂಡೇ ಸಂಶೋಧನೆಗೆ ಪ್ರವೇಶ ಪಡೆದಿರುತ್ತಾರೆ. ಆದರೆ, ವಿ.ವಿ. ಆಡಳಿತವು ಸರ್ಕಾರದಿಂದ ಫೆಲೋಶಿಪ್‌ ಬಂದರೂ ನೀಡುತ್ತಿಲ್ಲ. ಸರ್ಕಾರದಿಂದ ಅನುದಾನ ಬಂದಿಲ್ಲ ಎಂದು ಹೇಳುತ್ತಿದೆ. ಸರ್ಕಾರದ ಉನ್ನತ ಸ್ಥಾನದಲ್ಲಿರುವ ರಾಜ್ಯಪಾಲರು, ಮುಖ್ಯಮಂತ್ರಿಯವರಿಗೆ ಈ ಸಂಬಂಧ ಮನವಿ ಸಲ್ಲಿಸಲಾಗಿತ್ತು. ದೊಡ್ಡಬಸಪ್ಪ ವಿದ್ಯಾರ್ಥಿ ಮುಖಂಡ ಆಗಿರುವುದರಿಂದ ಅವರು ನೇತೃತ್ವ ವಹಿಸಿದ್ದರು. ಇದರಲ್ಲಿ ದುರ್ವರ್ತನೆಯ ಪ್ರಶ್ನೆ ಎಲ್ಲಿಂದ ಬಂತು? ವಿದ್ಯಾರ್ಥಿಗಳ ಬಾಯಿ ಮುಚ್ಚಿಸುವ ಹುನ್ನಾರ ಇದರಲ್ಲಿ ಅಡಗಿದೆ’ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.