ADVERTISEMENT

ಹಿಜಾಬ್‌ ಕಳಚಿ ಎಂದಿದ್ದಕ್ಕೆ ಮನೆಗೆ ವಾಪಸ್: ಮನವೊಲಿಕೆ ಬಳಿಕ ಮರಳಿ ಕಾಲೇಜಿಗೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2022, 10:06 IST
Last Updated 16 ಫೆಬ್ರುವರಿ 2022, 10:06 IST
ಹೊಸಪೇಟೆಯ ಥಿಯೋಸಫಿಕಲ್‌ ಕಾಲೇಜಿನ ಎದುರು ಜನ ಜಮಾಯಿಸಿರುವುದು
ಹೊಸಪೇಟೆಯ ಥಿಯೋಸಫಿಕಲ್‌ ಕಾಲೇಜಿನ ಎದುರು ಜನ ಜಮಾಯಿಸಿರುವುದು   

ಹೊಸಪೇಟೆ (ವಿಜಯನಗರ): ಹಿಜಾಬ್‌ ಕಳಚಿ ತರಗತಿಯೊಳಗೆ ಹೋಗಬೇಕು ಎಂದಿದ್ದಕ್ಕೆ ಮನೆಗೆ ತೆರಳಿದ್ದ ವಿದ್ಯಾರ್ಥಿನಿಯರು ಮನವೊಲಿಕೆ ನಂತರ ತರಗತಿಗಳಿಗೆ ಹಾಜರಾದ ಘಟನೆ ನಗರದ ಎರಡು ಪ್ರತ್ಯೇಕ ಕಾಲೇಜುಗಳಲ್ಲಿ ಬುಧವಾರ ನಡೆದಿದೆ.

ನಗರದ ಹಂಪಿ ರಸ್ತೆಯ ಥಿಯೋಸಫಿಕಲ್‌ ಕಾಲೇಜಿಗೆ ಬಂದಿದ್ದ ಎಂಟು ಪದವಿ ವಿದ್ಯಾರ್ಥಿನಿಯರಿಗೆ ಕಾಲೇಜು ಸಿಬ್ಬಂದಿ, ಹಿಜಾಬ್‌ ಕಳಚಿ ತರಗತಿಯೊಳಗೆ ಹೋಗಬೇಕು ಎಂದಿದ್ದಕ್ಕೆ ಅವರು ಅದರಂತೆ ನಡದುಕೊಂಡರು. ಆದರೆ, ಅದೇ ಕಾಲೇಜಿನ 9 ಪಿಯು ವಿದ್ಯಾರ್ಥಿನಿಯರು ಹಿಜಾಬ್‌ ಕಳಚಲು ನಿರಾಕರಿಸಿದರು. ಈ ಪೈಕಿ ನಾಲ್ವರು, ಮನೆಯವರೊಂದಿಗೆ ಚರ್ಚಿಸಿ ಬರುತ್ತೇವೆ ಎಂದು ಹೇಳಿ ಕಾಲೇಜಿನಿಂದ ನಿರ್ಗಮಿಸಿದರು. ಉಳಿದ ಐವರು ಆವರಣದಲ್ಲೇ ನಿಂತರು. ವಿಷಯ ತಿಳಿದು ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ಡಿವೈಎಸ್ಪಿ ವಿಶ್ವನಾಥರಾವ್‌ ಕುಲಕರ್ಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಾಲೇಜಿಗೆ ಧಾವಿಸಿದರು. ಘಟನೆ ಬಗ್ಗೆ ಮಾಹಿತಿ ಪಡೆದ ಅವರು, ವಿದ್ಯಾರ್ಥಿನಿಯರ ಮನವೊಲಿಸಿದರು. ಬಳಿಕ ವಿದ್ಯಾರ್ಥಿನಿಯರು ತರಗತಿಗಳಿಗೆ ಹಾಜರಾದರು.

ಇನ್ನು, ಬಸವೇಶ್ವರ ಬಡಾವಣೆಯ ಕೆಎಸ್‌ಪಿಎಲ್‌ ಕಾಲೇಜಿಗೆ ಬಂದಿದ್ದ 12 ವಿದ್ಯಾರ್ಥಿನಿಯರಿಗೆ ಹಿಜಾಬ್‌ ಕಳಚಿ ತರಗತಿಯೊಳಗೆ ಹೋಗಬೇಕೆಂದು ಸಿಬ್ಬಂದಿ ಸೂಚಿಸಿದರು. ಆದರೆ, ಅದಕ್ಕವರು ಒಪ್ಪಲಿಲ್ಲ. ನ್ಯಾಯಾಲಯದ ತೀರ್ಪು ಬರುವವರೆಗೆ ಕಾಯುತ್ತೇವೆ. ಪೋಷಕರೊಂದಿಗೆ ಚರ್ಚಿಸಿದ ನಂತರ ಕಾಲೇಜಿಗೆ ಬರುತ್ತೇವೆ ಎಂದು ಹೇಳಿ ಎಲ್ಲರೂ ಅಲ್ಲಿಂದ ಮನೆಗೆ ತೆರಳಿದರು.

ADVERTISEMENT

ಥಿಯೋಸಫಿಕಲ್‌ ಕಾಲೇಜು ಆಡಳಿತ ಮಂಡಳಿಯ ಕ್ರಮವನ್ನು ಪೋಷಕರು ಖಂಡಿಸಿದರು. ಕಾಲೇಜಿನೊಳಗೆ ತೆರಳಲು ಪ್ರಯತ್ನಿಸಿದ ಅವರನ್ನು ಪೊಲೀಸರು ಪ್ರವೇಶ ದ್ವಾರದ ಬಳಿಯೇ ತಡೆದರು. 144 ಸೆಕ್ಷನ್‌ ಜಾರಿಯಲ್ಲಿರುವುದರಿಂದ ವಿದ್ಯಾರ್ಥಿಗಳು, ಸಿಬ್ಬಂದಿ ಹೊರತುಪಡಿಸಿ ಯಾರಿಗೂ ಒಳಹೋಗಲು ಬಿಡುವುದಿಲ್ಲ ಎಂದು ಹೇಳಿದರು. ಮಾಧ್ಯಮದವರಿಗೂ ಒಳಗೆ ಪ್ರವೇಶಿಸಲು ಬಿಡಲಿಲ್ಲ.

‘ನಮ್ಮ ಮಕ್ಕಳು ಮೊದಲಿನಿಂದಲೂ ಕಾಲೇಜು ಸಮವಸ್ತ್ರ ವರ್ಣದ ಹಿಜಾಬ್‌ ಧರಿಸಿಕೊಳ್ಳುತ್ತಾರೆ. ಯಾವ ಕಾಲೇಜುಗಳಲ್ಲಿ ವಿವಾದ ಉಂಟಾಗಿದೆಯೋ ಅಲ್ಲಿ ಸಮವಸ್ತ್ರ ಹೊರತುಪಡಿಸಿ ಬೇರೆ ಏನೂ ತೋಡುವಂತಿಲ್ಲ ಎಂದು ತಿಳಿಸಲಾಗಿದೆ. ಡಿಡಿಪಿಐ ಸಹ ಅದಕ್ಕೆ ಸಮ್ಮತಿ ಸೂಚಿಸಿದ್ದಾರೆ. ಆದರೆ, ಕಾಲೇಜು ಆಡಳಿತ ಮಂಡಳಿಯವರು ಹಿಜಾಬ್‌ ಕಳಚಿಯೇ ತರಗತಿಯೊಳಗೆ ಹೋಗಬೇಕೆಂದು ಪಟ್ಟು ಹಿಡಿದಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಕೊರೊನಾ ಬಂದಾಗ ಮೈತುಂಬ ಬಟ್ಟೆ ಹಾಕಿಕೊಂಡಿರಲಿಲ್ಲವೇ?’ ಎಂದು ಥಿಯೋಸಫಿಕಲ್‌ ಕಾಲೇಜಿನ ವಿದ್ಯಾರ್ಥಿನಿಯ ಪೋಷಕ ನಜೀರ್‌ ಖಾನ್‌ ಪ್ರತಿಕ್ರಿಯಿಸಿದರು.

ಎರಡೂ ಕಾಲೇಜುಗಳ ಬಳಿ ಹಿಂದೂ, ಮುಸ್ಲಿಂ ಸಮುದಾಯಕ್ಕೆ ಸೇರಿದವರು ಸೇರಿದ್ದರು. ಪೊಲೀಸರು ಅವರನ್ನು ಕಳುಹಿಸಿ, ಬಿಗಿ ಬಂದೋಬಸ್ತ್‌ ಮಾಡಿದರು. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಕಾಲೇಜುಗಳ ಬಳಿ ಸಿಬ್ಬಂದಿ ನಿಯೋಜಿಸಿ, ಪೊಲೀಸರು ಗಸ್ತು ತಿರುಗಿದರು.

ಥಿಯೋಸಫಿಕಲ್‌ ಕಾಲೇಜಿನ ಕೆಲ ವಿದ್ಯಾರ್ಥಿನಿಯರು ಹಿಜಾಬ್‌ ಕಳಚಲು ನಿರಾಕರಿಸಿದ್ದರು. ಮನವೊಲಿಸಿದ ನಂತರ ಕಳಚಿ ತರಗತಿಗಳಿಗೆ ಹಾಜರಾದರು.
–ಸಿದ್ದರಾಮೇಶ್ವರ, ಉಪವಿಭಾಗಾಧಿಕಾರಿ

ಮೈತುಂಬ ಬಟ್ಟೆ ಹಾಕಿಕೊಳ್ಳುವುದು ತಪ್ಪಾ? ಧರ್ಮದ ಹೆಸರಿನಲ್ಲಿ ಮುಸ್ಲಿಮರನ್ನು ಗುರಿಯಾಗಿರಿಸಿ ಈ ರೀತಿ ಮಾಡುತ್ತಿರುವುದು ಅನ್ಯಾಯ.
– ನಜೀರ್‌ ಖಾನ್‌, ಥಿಯೋಸಫಿಕಲ್‌ ಕಾಲೇಜು ವಿದ್ಯಾರ್ಥಿನಿ ಪೋಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.