ಹಗರಿಬೊಮ್ಮನಹಳ್ಳಿ: ‘ಸುಪ್ರೀಂ ಕೋರ್ಟ್ ಒಳಮೀಸಲಾತಿ ಕುರಿತು ನೀಡಿರುವ ತೀರ್ಪು ಸಂವಿಧಾನದ ಸಮಾನತೆಯ ಆಶಯವಾಗಿದೆ. ಇದರಿಂದ ಕಟ್ಟಕಡೆಯ ವ್ಯಕ್ತಿಗೂ ಮೀಸಲಾತಿ ಅನ್ವಯ ಸೌಲಭ್ಯಗಳು ದೊರೆಯುತ್ತವೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬಲ್ಲಾಹುಣ್ಸಿ ರಾಮಣ್ಣ ಹೇಳಿದರು.
ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಬಿಜೆಪಿ ಹಮ್ಮಿಕೊಂಡಿದ್ದ ಒಳಮೀಸಲಾತಿ ಜಾರಿ ವಿಜಯೋತ್ಸವದ ನೇತೃತ್ವವಹಿಸಿ ಅವರು ಮಾತನಾಡಿದರು.
‘30 ವರ್ಷಗಳ ಒಳಮೀಸಲಾತಿ ಹೋರಾಟಕ್ಕೆ ತಾರ್ಕಿಕ ಅಂತ್ಯ ಕಂಡಿದೆ. ಕಾಂಗ್ರೆಸ್ ಈ ಹಿಂದೆ ಪರಿಶಿಷ್ಟರ ಬೇಡಿಕೆ ಈಡೇರಿಸುವುದಾಗಿ ಬರೀ ಭರವಸೆ ನೀಡುತ್ತಲೇ ಬಂದಿತ್ತು. ಸಾಮಾಜಿಕ ನ್ಯಾಯದ ಪರಿಕಲ್ಪನೆ ಬಗ್ಗೆ ಮಾತನಾಡುವ ಸಿಎಂ ಸಿದ್ದರಾಮಯ್ಯ, ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಒಳಮೀಸಲಾತಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಬೆಣ್ಣೆಕಲ್ಲು ಪ್ರಕಾಶ್, ಎಸ್ಸಿ ಮೋರ್ಚಾದ ಅಧ್ಯಕ್ಷ ಮರಿಯಪ್ಪ, ಮಾದೂರು ಮಹೇಶ್ ಮಾತನಾಡಿದರು. ಮುಖಂಡರಾದ ಎಚ್.ಬಸಪ್ಪ, ಉಪ್ಪಾರಗಟ್ಟಿ ಬುಳ್ಳಪ್ಪ, ಗಾಳೆಪ್ಪ, ಆನಂದ್, ರಮೇಶ್, ಮಂಜುನಾಥ, ನಾಗಪ್ಪ, ಸುಬ್ರಮಣ್ಯ, ಹನುಮಂತಪ್ಪ ಇದ್ದರು.
ಬಿಜೆಪಿ ಕಚೇರಿಯಲ್ಲಿ ಪೂಜೆ ಸಲ್ಲಿಸಿ, ಆವರಣದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.