ADVERTISEMENT

ತುಂಗಭದ್ರಾ ಅಣೆಕಟ್ಟೆ; ಗೇಟ್‌ ನಿರ್ಮಾಣ ಕಾರ್ಯಕ್ಕೆ ವೇಗ

ತುಂಗಭದ್ರಾ ಅಣೆಕಟ್ಟೆ; ನಾಲ್ಕು ಗೇಟ್‌ಗಳಿಗೆ ಕತ್ತರಿ ಕೆಲಸವೂ ಚುರುಕು

ಎಂ.ಜಿ.ಬಾಲಕೃಷ್ಣ
Published 14 ಡಿಸೆಂಬರ್ 2025, 5:28 IST
Last Updated 14 ಡಿಸೆಂಬರ್ 2025, 5:28 IST
ಹೊಸಪೇಟೆಯ ಟಿ.ಬಿ.ಡ್ಯಾಂ ಕಚೇರಿ ಸಮೀಪದ ಗೇಟ್ ನಿರ್ಮಾಣ ಕಾರ್ಯಾಗಾರ ಸ್ಥಳದಲ್ಲಿ ಶನಿವಾರ ಕ್ರೇನ್‌ ಮೂಲಕ ಗೇಟ್‌ಗಳ ಅಳವಡಿಕೆ ಕೆಲಸ ಭರದಿಂದ ಸಾಗಿದೆ  –ಪ್ರಜಾವಾಣಿ ಚಿತ್ರ/ ಲವ ಕೆ.
ಹೊಸಪೇಟೆಯ ಟಿ.ಬಿ.ಡ್ಯಾಂ ಕಚೇರಿ ಸಮೀಪದ ಗೇಟ್ ನಿರ್ಮಾಣ ಕಾರ್ಯಾಗಾರ ಸ್ಥಳದಲ್ಲಿ ಶನಿವಾರ ಕ್ರೇನ್‌ ಮೂಲಕ ಗೇಟ್‌ಗಳ ಅಳವಡಿಕೆ ಕೆಲಸ ಭರದಿಂದ ಸಾಗಿದೆ  –ಪ್ರಜಾವಾಣಿ ಚಿತ್ರ/ ಲವ ಕೆ.   

ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ ಹಳೆಯ ಕ್ರೆಸ್ಟ್‌ಗೇಟ್‌ಗಳನ್ನು ತೆರವುಗೊಳಿಸಿ ಹೊಸ ಗೇಟ್‌ಗಳನ್ನು ಅವಳವಡಿಸುವುದಕ್ಕೆ ಎಲ್ಲ ಸಿದ್ಧತೆ ನಡೆದಿರುವಂತೆಯೇ ಗೇಟ್‌ಗಳ ನಿರ್ಮಾಣ ಕೆಲಸಕ್ಕೆ ವೇಗ ಸಿಕ್ಕಿದೆ.

ಟಿ.ಬಿ.ಡ್ಯಾಂ ಕಚೇರಿ ಸಮೀಪದ ಗೇಟ್ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಶನಿವಾರ ‘ಪ್ರಜಾವಾಣಿ’ ಭೇಟಿ ನೀಡಿದಾಗ ಒಂದೊಂದು ಗೇಟ್‌ಗಳ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿರುವುದು ಕಾಣಿಸಿತು.

ಮೂರು ಗರ್ಡರ್‌ಗಳು, ಎರಡು ಎಂಡ್‌ ಬಾಕ್ಸ್‌ಗಳು, ಏಳು ಸ್ಲಿಂ ಪ್ಲೇಟ್‌ಗಳು ಜೋಡಣೆಯಾದಾಗ 60 ಅಡಿ ಅಗಲ, 21 ಅಡಿ ಎತ್ತರದ ಕ್ರೆಸ್ಟ್‌ಗೇಟ್ ಸಿದ್ಧವಾಗುತ್ತದೆ. ಸದ್ಯ ಇವುಗಳಿಗೆ ಪೇಂಟ್‌ ಮಾಡುವ ಕೆಲಸ ನಡೆಯುತ್ತಿದ್ದು, ಅಣೆಕಟ್ಟೆಯಲ್ಲಿ ಗೇಟ್‌ ಅಳವಡಿಕೆಯಾದ ಬಳಿಕ ಕೊನೆಯ ಹಂತದ ಪೇಂಟಿಂಗ್‌ ನಡೆಯಲಿದೆ.

ADVERTISEMENT

ಒಂದೊಂದು ಗೇಟ್‌ 49 ಟನ್‌ನಷ್ಟು ತೂಗಲಿದ್ದು, ಗೇಟ್‌ನ ಬಿಡಿ ಭಾಗಗಳನ್ನು ಪ್ರತ್ಯೇಕವಾಗಿ ಅಣೆಕಟ್ಟೆ ಸ್ಥಳಕ್ಕೆ ಸಾಗಿಸಿ ಅಲ್ಲಿ ಹಂತ ಹಂತವಾಗಿ ಜೋಡಣೆ ನಡೆಯುವ ನಿರೀಕ್ಷೆ ಇದೆ. 

ಸ್ಥಗಿತಗೊಂಡ ಗೇಟ್‌ಗಳಿಗೆ ಮೊದಲು ಕತ್ತರಿ: ಅಣೆಕಟ್ಟೆಯ ಎಲ್ಲ ಗೇಟ್‌ಗಳೂ ಶಿಥಿಲಗೊಂಡಿವೆ, ಎಲ್ಲವನ್ನೂ ಬದಲಿಸಬೇಕು ಎಂದು ತಜ್ಞರು ವರದಿ ನೀಡಿದ್ದರು.

ಹೊಸ ಗೇಟ್ ಅಳವಡಿಕೆಯ ಸಿದ್ಧತೆ ನಡೆದಿರುವಾಗಲೇ ಕಳೆದ ಮಳೆಗಾಲದಲ್ಲಿ 4, 11, 18, 20, 24, 27 ಮತ್ತು 28ನೇ ಗೇಟ್‌ಗಳನ್ನು ಮೇಲಕ್ಕೆ ಎತ್ತಲು ಸಾಧ್ಯವಾಗದೆ ಸ್ಥಗಿತಗೊಂಡಿದ್ದುದು ಕಂಡುಬಂದಿತ್ತು. 19ನೇ ಗೇಟ್‌ಗೆ ಸ್ಟಾಪ್‌ಲಾಗ್ ಗೇಟ್ ಅಳವಡಿಸಿದ್ದರಿಂದ ಅದರ ಮೂಲಕ ನೀರು ಹರಿಸುವುದು ಸಾಧ್ಯವೇ ಇಲ್ಲವಾಗಿತ್ತು. ಹೀಗಾಗಿ ಅಧಿಕ ನೀರು ಸಂಗ್ರಹವಾಗಿ ನದಿಗೆ ಬಿಡುವಾಗ ಈ ಎಂಟು ಗೇಟ್‌ಗಳ ಬದಲಿಗೆ ಇತರ ಗೇಟ್‌ಗಳ ಮೂಲಕ ನೀರನ್ನು ಬಿಡಲಾಗಿತ್ತು. ಇದೀಗ ಆ ಗೇಟ್‌ಗಳನ್ನೇ ನೀರಿನ ಮಟ್ಟಕ್ಕೆ ಕತ್ತರಿಸಿ ತೆಗೆಯುವ ಕೆಲಸ ಮೊದಲಿಗೆ ನಡೆದಿದ್ದು, ಈಗಾಗಲೇ 18, 20 ಮತ್ತು 24ನೇ ಗೇಟ್‌ಗಳನ್ನು ತಲಾ 10 ಅಡಿಯಷ್ಟು ಕತ್ತರಿಸಿ ತೆಗೆಯಲಾಗಿದೆ. ಇನ್ನು ಮುಂದೆ 4, 11, 27 ಮತ್ತು 28ನೇ ಗೇಟ್‌ಗಳನ್ನು ಕತ್ತರಿಸಿ ತೆಗೆಯುವ ಕೆಲಸ ವಾರದೊಳಗೆ ಮುಗಿಯಲಿದೆ ಎಂದು ತುಂಗಭದ್ರಾ ಮಂಡಳಿ ಮೂಲಗಳು ತಿಳಿಸಿವೆ.

Highlights - ಸದ್ಯ 58.42 ಟಿಎಂಸಿ ಅಡಿ ನೀರಿನ ಸಂಗ್ರಹ ಇದೀಗ 1,618.95 ಅಡಿ ಮಟ್ಟದಲ್ಲಿದೆ ನೀರು 1,613 ಅಡಿಗೆ ತಲುಪಿದಾಗ ಗೇಟ್ ಅಳವಡಿಕೆ ಆರಂಭ

ವಿಶ್ವಾಸ ವೃದ್ಧಿ ಸಮಯಕ್ಕೆ ಕಾತರ

‘ಒಂದು ಗೇಟ್ ಅಳವಡಿಸಿದಾಗ ಇಡೀ ತಂಡದ ವಿಶ್ವಾಸ ವೃದ್ಧಿಯಾಗಲಿದೆ. ಬಹುತೇಕ ಈ ತಿಂಗಳ ಅಂತ್ಯದೊಳಗೆ ಒಂದು ಗೇಟ್ ಅಳವಡಿಕೆ ಆಗುವುದು ನಿಶ್ಚಿತ. ಮುಂದೆ ಗೇಟ್ ಅಳವಡಿಕೆಗೆ ವೇಗ ಸಿಗಲಿದೆ ಮೊದಲ ಗೇಟ್ ಅಳವಡಿಕೆಗಾಗಿ ಇಡೀ ತಂಡ ಇದೀಗ ಎದುರು ನೋಡುತ್ತಿದೆ’ ಎಂದು ತುಂಗಭದ್ರಾ ಮಂಡಳಿಯ ಮೂಲಗಳು ಹೇಳಿವೆ.

ಉಳಿದ ಗೇಟ್‌ಗಳ ಸಾಮಗ್ರಿ ರವಾನೆ

ಈಗಾಗಲೇ ಏಳು ಗೇಟ್‌ಗಳ ನಿರ್ಮಾಣ ಪೂರ್ಣಗೊಂಡಿದ್ದು ಉಳಿದ ಏಳು ಗೇಟ್‌ಗಳಿಗೆ ಬೇಕಾದ ಕಬ್ಬಿಡದ ಹಲಗೆ ಇತರ ಸಾಮಗ್ರಿಗಳು ಜಿಂದಾಲ್‌ ಮತ್ತು ವೈಜಾಗ್‌ ಉಕ್ಕಿನ ಕಾರ್ಖಾನೆಗಳಿಂದ ಬಂದಿವೆ. ಹೀಗಾಗಿ ಹೊಸ ಗೇಟ್‌ಗಳ ನಿರ್ಮಾಣಕ್ಕೂ ಚಾಲನೆ ದೊರೆತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.