ಪ್ರತಿಭಟನೆ
ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಮರಿಯಮ್ಮನಹಳ್ಳಿ ಸಮೀಪದ 114 ಡಣಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 9ಮತ್ತು 10ನೇ ತರಗತಿಯ 70 ಮಂದಿ ವಿದ್ಯಾರ್ಥಿಗಳು ತಮ್ಮ ಶಾಲೆಯ ಗಣಿತ ಶಿಕ್ಷಕಿ ನಾಗಲಕ್ಷ್ಮಿ ಅವರನ್ನು ತಕ್ಷಣ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ಗುರುವಾರ ಶಾಲೆಯ ಪ್ರಧಾನ ದ್ವಾರಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
‘ಗಣಿತ ಶಿಕ್ಷಕಿ ಸರಿಯಾಗಿ ಶಾಲೆಗೆ ಬರುವುದಿಲ್ಲ, ಬಂದರೂ ಸರಿಯಾಗಿ ಪಾಠ ಮಾಡುತ್ತಿಲ್ಲ. ವಿದ್ಯಾರ್ಥಿಗಳಿಗೆ ಮಾನಸಿಕ ಕಿರುಕುಳ ನೀಡುತ್ತಾರೆ, ಇತರ ಶಿಕ್ಷಕರ ವಿರುದ್ಧ ಇಲ್ಲಸಲ್ಲದ ದೂರು ನೀಡಿ ಅವರಿಗೂ ಕಿರುಕುಳ ನೀಡುತ್ತಿದ್ದಾರೆ, ಹೀಗಾಗಿ ತಕ್ಷಣ ವರ್ಗಾವಣೆ ಮಾಡಬೇಕು’ ಎಂದು ದ್ವಾರದ ಮುಂಭಾಗ ಧರಣಿ ಕುಳಿತ ಪೋಷಕರು ಆಗ್ರಹಿಸಿದರು.
‘ಶಿಕ್ಷಕಿ ಕಳೆದ ಮೂರು ದಿನಗಳಿಂದ ಶಾಲೆಗೆ ಬಂದಿಲ್ಲ. ಕೆಲವೊಮ್ಮೆ ತರಗತಿ ಕೊಠಡಿಯಿಂದ ಬಾಲಕರನ್ನು ಹೊರಗೆ ಕಳುಹಿಸಿ ಬಾಲಕಿಯರಿಗೆ ಮಾತ್ರ ಗಣಿತ ಪಾಠ ಹೇಳಿಕೊಡುವ ತಾರತಮ್ಯವನ್ನೂ ಮಾಡುತ್ತಾರೆ. ಇದನ್ನು ಪೋಷಕರು ಪ್ರಶ್ನಿಸಿದರೆ ಪೋಷಕರನ್ನು ಎದುರು ಹಾಕಿಕೊಳ್ಳಲು ಧೈರ್ಯ ಇಲ್ಲದೆ ಇತರ ಶಿಕ್ಷಕರ ವಿರುದ್ಧ ದೂರು ನೀಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಶಾಲೆಯ ಫಲಿತಾಂಶ ಸಹ ಶೇ 60ರ ಸುತ್ತಮುತ್ತಲಲ್ಲೇ ಇದೆ. ಇದೇ ರೀತಿ ಪ್ರಮುಖ ವಿಷಯ ಬೋಧಿಸುವ ಶಿಕ್ಷಕರ ವರ್ತನೆ ಮುಂದುವರಿದರೆ ನಮ್ಮ ಮಕ್ಕಳ ಭವಿಷ್ಯ ಮಂಕಾಗುತ್ತದೆ, ಹೀಗಾಗಿ ಈ ಶಿಕ್ಷಕರು ಇಲ್ಲಿಗೆ ಬೇಡವೇ ಬೇಡ’ ಎಂದು ಹಲವು ಪೋಷಕರು ಒತ್ತಾಯಿಸಿದರು.
ಬೆಳಿಗ್ಗೆ 11.15 ಆದರೂ ಪ್ರತಿಭಟನೆ ಕೊನೆಗೊಳ್ಳಲಿಲ್ಲ. ಶಿಕ್ಷಕರು, ವಿದ್ಯಾರ್ಥಿಗಳು, ಊರವರು ಶಾಲಾ ಕಾಂಪೌಂಡ್‌ನ ಹೊರಗಡೆಯೇ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.