ADVERTISEMENT

‘ತಿರುಪತಿ ಕ್ಷೇತ್ರ ಮಹಾತ್ಮೆ’ ಯಕ್ಷಗಾನ: ಸ್ಥಳೀಯರನ್ನೂ ಸೆಳೆದ ಕರಾವಳಿಯ ಕಲೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 7:21 IST
Last Updated 30 ಆಗಸ್ಟ್ 2025, 7:21 IST
<div class="paragraphs"><p>ಹೊಸಪೇಟೆಯಲ್ಲಿ ಸೋಮವಾರ ನಡೆದ ‘ತಿರುಪತಿ ಕ್ಷೇತ್ರ ಮಹಾತ್ಮೆ’ ಯಕ್ಷಗಾನದ ಒಂದು ದೃಶ್ಯ&nbsp; </p></div>

ಹೊಸಪೇಟೆಯಲ್ಲಿ ಸೋಮವಾರ ನಡೆದ ‘ತಿರುಪತಿ ಕ್ಷೇತ್ರ ಮಹಾತ್ಮೆ’ ಯಕ್ಷಗಾನದ ಒಂದು ದೃಶ್ಯ 

   

–ಪ್ರಜಾವಾಣಿ ಚಿತ್ರ/ ಲವ ಕೆ.

ಹೊಸಪೇಟೆ (ವಿಜಯನಗರ): ನಗರದ ಕರ್ನಾಟಕ ಕಲಾಭಿಮಾನಿಗಳ ಸಂಘದ ಸಹಯೋಗದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿ ವತಿಯಿಂದ ಇಲ್ಲಿ ಈಚೆಗೆ ನಡೆದ ‘ತಿರುಪತಿ ಕ್ಷೇತ್ರ ಮಹಾತ್ಮೆ’ ಕರಾವಳಿಯ ಅಭಿಮಾನಿಗಳು ಮಾತ್ರವಲ್ಲದೆ ಸ್ಥಳೀಯರನ್ನೂ ಬಹುವಾಗಿ ಆಕರ್ಷಿಸಿತು.

ADVERTISEMENT

ತಿರುಪತಿ ಎಂಬ ಹೆಸರೇ ಭಕ್ತಿ, ಭಾವನಾತ್ಮಕವಾದುದು. ಅದೇ ಕ್ಷೇತ್ರದ ಮೇಲಿನ ಪ್ರಸಂಗ ಯಕ್ಷಗಾನವನ್ನು ವಿಶೇಷ ಕುತೂಹಲದಿಂದ ನೋಡುವಂತೆ ಮಾಡಿತು. ಒಬ್ಬರನ್ನೊಬ್ಬರು ಮೀರಿಸುವಂತಹ ನಾಟ್ಯ, ಮಾತುಗಾರಿಕೆಗಳಿಂದ ಬಹುಕಾಲ ನೆನಪಲ್ಲಿ ಉಳಿಯುವ ಕರಾವಳಿಯ ಕಲೆಯಾಗಿ ದಾಖಲಾಯಿತು.

ಭೃಗು ಮಹರ್ಷಿ ತನಗೆ ಸಿದ್ಧಿಸಿದ ವರದಿಂದ ದೇವಾನುದೇವತೆಗಳನ್ನು ಒಂದಿಲ್ಲೊಂದು ಬಗೆಯಲ್ಲಿ ಖೆಡ್ಡಕ್ಕೆ ದೂಡಿದರೂ ನಾರಾಯಣನಲ್ಲಿ ಅವನ ಆಟ ನಡೆಯುವುದಿಲ್ಲ. ಆದರೆ ತನ್ನ ವರವನ್ನು ವಿಷ್ಣು ವಾಪಸ್ ಪಡೆಯುವುದಕ್ಕೆ ಮೊದಲಾಗಿ ಆತ ವಿಷ್ಣುವಿನ ನಾಭಿಯ ಭಾಗಕ್ಕೆ ತುಳಿದ ಕಾರಣ ಅಲ್ಲಿದ್ದ ಲಕ್ಷ್ಮಿ ಸಿಟ್ಟುಗೊಂಡು ಭೂಮಿಯತ್ತ ಹೋಗುತ್ತಾಳೆ. ಬಳಿಕ ವಿಷ್ಣುವು ಶ್ರೀನಿವಾಸನಾಗಿ ಭೂಮಿಯಲ್ಲಿ ಜನಿಸುತ್ತಾನೆ. ವರಾಹ ರೂಪ ತಾಳಿ ವೃಷಭಾಸುರನನ್ನು ಸಂಹರಿಸುತ್ತಾನೆ. ಉದ್ಯಾನದಲ್ಲಿ ಪದ್ಮಾವತಿಯನ್ನು ಕಂಡು ಮೋಹಿಸಿ ಮದುವೆಯಾಗುತ್ತಾನೆ. ಕುಬೇರನಿಂದ ಸಾಲ ಪಡೆದು ಮದುವೆ ಮಾಡಿಕೊಂಡಿರುತ್ತಾರೆ. ಹೀಗಾಗಿ ಭಕ್ತರು ನೀಡುವ ಕಾಣಿಕೆ ಈಗಲೂ ಸಾಲದ ರೂಪದಲ್ಲಿ ಕುಬೇರನಿಗೆ ಸಂದಾಯವಾಗುತ್ತದೆ ಎಂಬ ಸಂದೇಶದೊಂದಿಗೆ ಯಕ್ಷಗಾನ ಕೊನೆಗೊಂಡಿತು.

ಉದ್ಯಾನದಲ್ಲಿ ಶ್ರೀನಿವಾಸ‍–ಪದ್ಮಾವತಿಯರ ನಾಟ್ಯ ಲಾಸ್ಯ ಅರ್ಧ ಗಂಟೆ ಕಾಲ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಹಿಡಿದಿಟ್ಟಿತು. ಗಿರೀಶ್ ರೈ ಕಕ್ಕೆಪದವು ಅವರು ಕಲಾವಿದರಾದ ಶಿವಾನಂದ (ಶ್ರೀನಿವಾಸ), ಪ್ರಶಾಂತ್‌ (ಪದ್ಮಾವತಿ) ಅವರನ್ನು ಕುಣಿಸಿದ ಬಗೆ ಅದ್ಭುತವಾಗಿತ್ತು. ಭೃಗು ಪಾತ್ರದಲ್ಲಿ ಮೋಹನ್‌ ಬೆಳ್ಳಿಪ್ಪಾಡಿ ಅದ್ಭುತವಾಗಿ ನಟಿಸಿದರೆ, ಬಳಿಕ ಬಂದ ವೃಷಭಾಸುರ ಪಾತ್ರದಲ್ಲಿ ಹರೀಶ್ ಶೆಟ್ಟಿ ಮಣ್ಣಾಪು, ವರಾಹ ಪಾತ್ರದಲ್ಲಿ ಬಾಲಕೃಷ್ಣ ಗೌಡ ಮಿಜಾರ್ ಪ್ರೇಕ್ಷಕರಿಗೆ ವೀರರಸದ ರಸದೌತಣ ಬಡಿಸಿದರು.

‘ನಾನು ಇಷ್ಟು ಏಕಾಗ್ರತೆಯಿಂದ ಯಕ್ಷಗಾನ ನೋಡಿದ್ದೇ ಇಲ್ಲ. ಸಂಜೆ 7.15ರಿಂದ ರಾತ್ರಿ 11.15ಕ್ಕೆ  ಯಕ್ಷಗಾನ ಮುಗಿಯುವರೆಗೆ ಕುರ್ಚಿಯಿಂದ ಎದ್ದೇಳಲೇ ಇಲ್ಲ. ಅಷ್ಟರಮಟ್ಟಿಗೆ ಯಕ್ಷಗಾನ ನನ್ನನ್ನು ಸೆಳೆದುಬಿಟ್ಟಿತು’ ಎಂದು ನಗರದ ಯಕ್ಷಗಾನ ಕಲಾಭಿಮಾನಿ ಗಣೇಶ್ ಯಾಜಿ ಪ್ರತಿಕ್ರಿಯಿಸಿದರು.

‘ಹೊಸಪೇಟೆಗೆ ಯಕ್ಷಗಾನ ಹೊಸತು, ಹಲವಾರು ವರ್ಷಗಳಿಂದಲೂ ಇಲ್ಲಿ ವರ್ಷಕ್ಕೆ ಎರಡರಿಂದ ಮೂರು ಯಕ್ಷಗಾನ ಪ್ರದರ್ಶನಗಳು ಇದ್ದೇ ಇರುತ್ತವೆ. ಆದರೆ ಈ ಬಾರಿಯ ವಿಶೇಷವೆಂದರೆ ಕರಾವಳಿ ಭಾಗದವರಂತೆ ಸ್ಥಳೀಯ ನಿವಾಸಿಗಳೂ ಬಂದು ಯಕ್ಷಗಾನ ನೋಡಿದ್ದು. ಇದು ಕರಾವಳಿ ಕಲೆಗೆ ಸಂದ ನಿಜವಾದ ಗೌರವ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಮೋಹನ ಕುಂಟಾರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.