ADVERTISEMENT

ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳ: ಕಂಪ್ಲಿ ಸೇತುವೆ ಮೇಲೆ ಸಂಚಾರ ಬಂದ್‌

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 7:37 IST
Last Updated 8 ಆಗಸ್ಟ್ 2022, 7:37 IST
ಕಂಪ್ಲಿ ಸೇತುವೆ ಮೇಲೆ ಸಂಚಾರ ಬಂದ್‌
ಕಂಪ್ಲಿ ಸೇತುವೆ ಮೇಲೆ ಸಂಚಾರ ಬಂದ್‌   

ಹೊಸಪೇಟೆ (ವಿಜಯನಗರ): ಇಲ್ಲಿನ ತುಂಗಭದ್ರಾ ಜಲಾಶಯದಿಂದ ನದಿಗೆ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದಲ್ಲಿ ನೀರು ಹರಿಸುತ್ತಿದ್ದು, ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವುದರಿಂದ ಕಂಪ್ಲಿ–ಗಂಗಾವತಿ ಸೇತುವೆ ಬಂದ್‌ ಮಾಡಿ, ವಾಹನಗಳ ಸಂಚಾರವನ್ನು ಸೋಮವಾರ ನಿರ್ಬಂಧಿಸಲಾಗಿದೆ.

ಭಾನುವಾರವೇ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿದ್ದರಿಂದ ಸೇತುವೆಗೆ ಸಮನಾಗಿ ನೀರು ಹರಿಯುತ್ತಿತ್ತು. ಭಾರಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. ಲಘು ವಾಹನಗಳು ಓಡಾಡುತ್ತಿದ್ದವು. ಆದರೆ, ಸೋಮವಾರ ನೀರಿನ ಮಟ್ಟ ಮತ್ತಷ್ಟು ಹೆಚ್ಚಳವಾಗಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಸೇತುವೆಯ ಎರಡೂ ಕಡೆಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಸೇತುವೆಗೆ ಹೊಂದಿಕೊಂಡಿರುವ ಬಾಳೆಗದ್ದೆಗಳಿಗೆ ನೀರು ನುಗ್ಗಿದೆ.
ಅನೇಕ ದಿನಗಳ ಹಿಂದೆಯೇ ಹಂಪಿಯ ಸ್ನಾನಘಟ್ಟ, ಕರ್ಮ ಮಂಟಪ, ಪುರಂದರದಾಸರ ಮಂಟಪ, ಚಕ್ರತೀರ್ಥ, ವಿಜಯನಗರ ಕಾಲದ ಕಾಲು ಸೇತುವೆ ಸ್ಮಾರಕಗಳು ಮುಳುಗಿವೆ. 1,633 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 1,631.91 ಅಡಿ ನೀರಿನ ಸಂಗ್ರಹವಿದೆ. 120470 ಕ್ಯುಸೆಕ್‌ ಒಳಹರಿವು ಇದೆ. 105909 ಕ್ಯುಸೆಕ್‌ ನೀರು ನದಿಗೆ ಹರಿಸಲಾಗುತ್ತಿದೆ.
ಇನ್ನು, ಜಿಲ್ಲೆಯಾದ್ಯಂತ ಮಳೆ ತಗ್ಗಿದ್ದು, ಕಾರ್ಮೋಡ ಆವರಿಸಿಕೊಂಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.