ಹೊಸಪೇಟೆ (ವಿಜಯನಗರ): ಸಾರಿಗೆ ರಂಗದ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ರಚಿಸಿದ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವುದರ ಜತೆಗೆ ಈ ಮಂಡಳಿಗೆ ಅಗತ್ಯದ ₹1,000 ಕೋಟಿ ಹಣಕಾಸಿನ ನೆರವು ನೀಡಬೇಕೆಂದು ಆಗ್ರಹಿಸಿ ಮಂಗಳವಾರ ಇಲ್ಲಿ ವಿಜಯೋತ್ಸವ ಮತ್ತು ಪ್ರತಿಭಟನೆ ಏಕಕಾಲಕ್ಕೆ ನಡೆಯಿತು.
ಎಫ್‌ಕೆಎಆರ್‌ಡಿಯು, ಎಆರ್‌ಡಿಯು, ಎಐಆರ್‌ಟಿಡಬ್ಲ್ಯುಎಫ್ ಚಾಲಕರ ಸಂಘಟನೆಗಳ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುದೀರ್ಘ 38 ವರ್ಷಗಳ ಕಾಲ ಹೋರಾಟ ನಡೆಸಿದ ಭಾಗವಾಗಿ ಈ ಮಂಡಳಿ ರಚನೆಗೆ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿರುವುದು ಸ್ವಾಗತಾರ್ಹ, ಆದರೆ ಆರ್ಥಿಕ ನೆರವು ಇಲ್ಲದೆ ಇಂತಹ ಮಂಡಳಿ ರಚಿಸಿದರೆ ಪ್ರಯೋಜನ ಇಲ್ಲ. ಹೀಗಾಗಿ ಸರ್ಕಾರ ತಕ್ಷಣ ಆರ್ಥಿಕ ನೆರವು ನೀಡಬೇಕು ಮತ್ತು ಇತರ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ, ಸಾರಿಗೆ ಸಚಿವರು, ಕಾರ್ಮಿಕ ಸಚಿವರು ಹಾಗೂ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಯಿತು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಆಲ್ ಇಂಡಿಯಾ ರೋಡ್ ಟ್ರಾನ್ಸ್‌ಪೋರ್ಟ್ ವರ್ಕರ್ಸ್ ಫೆಡರೇಷನ್ ಹೊಸಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಂ.ಸಂತೋಷ್ ಕುಮಾರ್ ಮಾತನಾಡಿ, ಕಲ್ಯಾಣ ಮಂಡಳಿಗೆ ₹1,000 ಕೋಟಿ ಅನುದಾನ ನೀಡಿ, ಸಾರಿಗೆ ರಂಗದ ಕಾರ್ಮಿಕರನ್ನು ನೋಂದಣಿ ಮಾಡಿ ಕಲ್ಯಾಣ ಯೋಜನೆಗಳನ್ನು ಜಾರಿ ಮಾಡಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜನವಿರೋಧಿ ನೀತಿಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
‘ಸಿಐಟಿಯು ಮಾರ್ಗದರ್ಶನದಲ್ಲಿ ಎಫ್‌ಕೆಎಆರ್‌ಡಿಯು, ಎಆರ್‌ಡಿಯು ಸಂಘಟನೆಗಳು ಸುಧೀರ್ಘವಾಗಿ 38 ವರ್ಷಗಳ ಕಾಲ ಹೋರಾಟ ನಡೆಸಿದ್ದರಿಂದ ಈ ಬೆಳವಣಿಗೆ ಆಗಿದೆ. ಸಾರಿಗೆ ವ್ಯವಸ್ಥೆ ಇಲ್ಲದ ಸಮಾಜವೊಂದನ್ನು ಕಲ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ಕೃಷಿ ಕ್ಷೇತ್ರವನ್ನು ಹೊರತುಪಡಿಸಿದರೆ ಅತ್ಯಂತ ಹೆಚ್ಚು ಉದ್ಯೋಗಿಗಳನ್ನು ಸೃಷ್ಟಿಸುವ ಕ್ಷೇತ್ರ ಇದಾಗಿದೆ. ಇದರಲ್ಲಿ ಸಿಂಹ ಪಾಲು ಅತ್ಯಂತ ಸಂಕಷ್ಟದಲ್ಲಿ ಕೆಲಸ ಮಾಡುತ್ತಿರುವ ಬದುಕಿನ ಯಾವುದೇ ಭದ್ರತೆ ಇಲ್ಲದ ಆ ಸಂಘಟಿತ ರಸ್ತೆ ಸಾರಿಗೆ ಕಾರ್ಮಿಕರೇ ಆಗಿದ್ದಾರೆ. ಹೀಗಾಗಿ ಇವರ ನೆರವಿಗೆ ಸರ್ಕಾರ ಬರಬೇಕು’ ಎಂದರು.
ಇತರ ಬೇಡಿಕೆಗಳು: ದುಬಾರಿ ದಂಡ ಹಾಗೂ ದುಬಾರಿ ಶುಲ್ಕ ವಿಧಿಸುವ ಮೋಟರ್ ವಾಹನಗಳ ತಿದ್ದುಪಡಿಗಳ ಕಾಯ್ದೆ 2019 ಹಿಂಬಡಿಯಬೇಕು, 10 ವರ್ಷ ಜೈಲು ಶಿಕ್ಷೆ ಮತ್ತು 7 ಲಕ್ಷ ದಂಡ ವಿಧಿಸುವ ಚಾಲಕ ವಿರೋಧಿಯಾದ ಅಂಶಗಳನ್ನು ಹೊಂದಿರುವ ಹಾಗೂ ಸಾರಿಗೆ ವಾಹನ ಚಾಲಕರಿಗೆ ಮರಣ ಶಾಸನವಾಗಿರುವ (ಹಿಟ್ ಅಂಡ್ ರನ್) ಭಾರತೀಯ ನ್ಯಾಯ ಸಂಹಿತೆ 2023 ಕಾನೂನು ಹಿಂಪಡೆಯಬೇಕು, ವೆಹಿಕಲ್ ಲೊಕೇಶನ್ ಟ್ರಾಕಿಂಗ್ ಡಿವೈಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಸುವ ಆದೇಶ ಕೂಡಲೇ ಹಿಂಪಡೆಯಬೇಕು, ರಾಷ್ಟ್ರೀಯ ಹೆದ್ದಾರಿಗಳಲ್ಲಿ 20 ಕಿ.ಮೀ ಒಳಗಡೆ ವಾಸ ಮಾಡುತ್ತಿರುವ ಸಾರ್ವಜನಿಕರಿಗೆ ಸುಂಕ ರಹಿತ ಟೋಲ್ ಪ್ರವೇಶ ಮತ್ತು 60 ಕಿಲೋಮೀಟರ್ ಒಳಗಡೆ ಇರುವ ಟೋಲ್ ಗಳನ್ನು ತೆರವುಗೊಳಿಸಬೇಕು, ಅಂಕೋಲಾ–ಗುತ್ತಿ ಹೆದ್ದಾರಿಯ ಆಮೆಗತಿಯ ಕಾಮಗಾರಿ ವಿರುದ್ಧ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಲಾಗಿದೆ.
ವಿವಿಧ ಸಂಘಟನೆಗಳ ಮುಖಂಡರಾದ ಎನ್.ಅನಂತಶಯನ, ಕೆ.ಎಂ.ಸ್ವಪ್ನ, ಬಿ.ಎಸ್.ಯಮುನಪ್ಪ, ಮೈನುದ್ದೀನ್, ಅಸ್ಲಾಂ ಬಾಷಾ, ಷರೀಫ್, ಕೆ.ಚಾಂದ್ ಪಾಷಾ, ಸಿ.ರಾಮಚಂದ್ರ, ನಾಗರತ್ನಮ್ಮ ಇತರರು ಇದ್ದರು.
ಹೋರಾಟಕ್ಕೆ ಸ್ಪಂದಿಸಿ ವೆಹಿಕಲ್ ಲೊಕೇಶನ್ ಟ್ರಾಕಿಂಗ್ ಡಿವೈಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಸುವ ಆದೇಶವನ್ನು ಸಾರಿಗೆ ಇಲಾಖೆ ಕೈಬಿಡಲು ತೀರ್ಮಾನಿಸಿದೆಕೆ.ಎಂ.ಸಂತೋಷ್ ಕುಮಾರ್ ಅಧ್ಯಕ್ಷ ಎಐಆರ್‌ಟಿಡಬ್ಲ್ಯುಎಫ್ ಹೊಸಪೇಟೆ ತಾಲ್ಲೂಕು ಘಟಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.