ADVERTISEMENT

ಮೈಲಾರ: ಶಿಬಾರದಿಂದ ಕಳಚಿ ಬಿದ್ದ ತ್ರಿಶೂಲ

​ಪ್ರಜಾವಾಣಿ ವಾರ್ತೆ
Published 9 ಜನವರಿ 2022, 16:36 IST
Last Updated 9 ಜನವರಿ 2022, 16:36 IST
ಮೈಲಾರಲಿಂಗೇಶ್ವರ ದೇವಸ್ಥಾನ ಮುಂಭಾಗದಲ್ಲಿರುವ ಶಿಬಾರದ ಮೇಲೆ ಅಳವಡಿಸಿದ್ದ ಕಲ್ಲಿನ ತ್ರಿಶೂಲ
ಮೈಲಾರಲಿಂಗೇಶ್ವರ ದೇವಸ್ಥಾನ ಮುಂಭಾಗದಲ್ಲಿರುವ ಶಿಬಾರದ ಮೇಲೆ ಅಳವಡಿಸಿದ್ದ ಕಲ್ಲಿನ ತ್ರಿಶೂಲ    

ಹೂವಿನಹಡಗಲಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಮೈಲಾರ ಸುಕ್ಷೇತ್ರದಲ್ಲಿನ ಮೈಲಾರಲಿಂಗೇಶ್ವರ ದೇವಸ್ಥಾನ ಮುಂಭಾಗದಲ್ಲಿರುವ ಶಿಬಾರದ ಮೇಲೆ ಅಳವಡಿಸಿದ್ದ ಕಲ್ಲಿನ ತ್ರಿಶೂಲ ಭಾನುವಾರ ಮತ್ತೊಮ್ಮೆ ಕಳಚಿ ಬಿದ್ದಿದೆ.

ಕೋವಿಡ್ ಭೀತಿಯ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ಮುಚ್ಚಿರುವ ಕಾರಣ ಭಕ್ತರು ಶಿಬಾರ ಕಟ್ಟೆಗೆ ಹಣ್ಣು, ಕಾಯಿ ನೈವೇದ್ಯ ಅರ್ಪಿಸಿ ಅಲ್ಲಿಂದಲೇ ಸ್ವಾಮಿಯ ದರ್ಶನ ಪಡೆಯುತ್ತಿದ್ದಾರೆ. ಭಕ್ತರು ಕಟ್ಟೆ ಮೇಲೆ ಇರಿಸಿದ್ದ ಬಾಳೆ ಹಣ್ಣು, ಕೊಬ್ಬರಿಯ ಪ್ರಸಾದವನ್ನು ತಿನ್ನಲು ಕೋತಿಗಳು ಪೈಪೋಟಿಗಿಳಿದು ಶಿಬಾರದ ಮೇಲೆ ಹಾರಾಟ ನಡೆಸಿದಾಗ ತ್ರಿಶೂಲ ಮೇಲಿಂದ ಬಿದ್ದು ಭಗ್ನವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಹಿಂದಿನ ವರ್ಷ ಕಾರಣಿಕ ಮಹೋತ್ಸವ ದಿನದಂದು ಸ್ವಾಮಿಯ ಉತ್ಸವ ಹೊರಟಿದ್ದ ವೇಳೆಯೂ ಶಿಬಾರದಲ್ಲಿನ ತ್ರಿಶೂಲ ಕಳಚಿ ಬಿದ್ದಿತ್ತು. ಈ ಬಾರಿ ಜಾತ್ರೆ ಕೆಲವೇ ದಿನ ಇರುವಾಗ ಸುಕ್ಷೇತ್ರದಲ್ಲಿ ಮತ್ತೊಮ್ಮೆ ಅವಘಡ ಸಂಭವಿಸಿರುವುದರಿಂದ ಭಕ್ತರು ಆತಂಕಕ್ಕೆ ಒಳಗಾಗಿದ್ದಾರೆ.

ADVERTISEMENT

‘ಕೋತಿಗಳ ಹಾರಾಟದಿಂದ ತ್ರಿಶೂಲ ಕಳಚಿ ಬಿದ್ದಿದೆ. ಸದ್ಯದಲ್ಲೇ ಆಗಮ ಪಂಡಿತರನ್ನು ಆಹ್ವಾನಿಸಿ ಶಾಸ್ತ್ರೋಕ್ತವಾಗಿ ಹೊಸ ತ್ರಿಶೂಲ ಪ್ರತಿಷ್ಠಾಪಿಸಲಾಗುವುದು' ಎಂದು ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಎಂ.ಎಚ್.ಪ್ರಕಾಶ್ ರಾವ್ 'ಪ್ರಜಾವಾಣಿ' ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.