ಹೊಸಪೇಟೆ ನಗರ ಪ್ರವೇಶ ಮಾಡುವಾಗ ಸಿಗುವ ಜೋಳದರಾಶಿ ಗುಡ್ಡದ ಬುಡದಲ್ಲಿ ಮಣ್ಣು ಕುಸಿಯುವ ಆತಂಕ ಇದ್ದು, ಗುರುವಾರ ಎಸ್‌ಪಿ ಶ್ರೀಹರಿಬಾಬು ಬಿ.ಎಲ್. ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪರಿಶೀಲನೆ ನಡೆಸಿದರು
ಹೊಸಪೇಟೆ (ವಿಜಯನಗರ): ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚುತ್ತಲೇ ಇದ್ದು, ಈಗಾಗಲೇ ಬಹುತೇಕ ಭರ್ತಿಯಾಗಿರುವ ಅಣೆಕಟ್ಟೆಯ ಮಟ್ಟವನ್ನು ಸರಿದೂಗಿಸುವ ಸಲುವಾಗಿ ಗುರುವಾರ ಮಧ್ಯಾಹ್ನ 3 ಗಂಟೆಗೆ 22 ಗೇಟ್‌ಗಳನ್ನು ತೆರೆದು ನೀರನ್ನು ನದಿಗೆ ಬಿಡಲಾಯಿತು.
‘ಎಲ್ಲಾ 22 ಕ್ರಸ್ಟ್‌ಗೇಟ್‌ಗಳನ್ನು ಎರಡು ಅಡಿ ಎತ್ತರಕ್ಕೆ ತೆರೆಯಲಾಗಿದ್ದು, ಒಟ್ಟು 69,817 ಕ್ಯುಸೆಕ್ ನೀರು ನದಿಗೆ ಹರಿಯುತ್ತಿದೆ. ಸದ್ಯ ಒಳಹರಿವಿನ ಪ್ರಮಾಣ 97 ಸಾವಿರ ಕ್ಯುಸೆಕ್‌ಗೆ ತಲುಪಿದೆ’ ಎಂದು ತುಂಗಭದ್ರಾ ಮಂಡಳಿಯ ಅಧಿಕಾರಿಗಳು ತುರ್ತು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಹುತೇಕ ಮುಳುಗಿದ ಪುರಂದರ ಮಂಟಪ: ತುಂಗಭದ್ರಾ ಅಣೆಕಟ್ಟೆಯಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರಬೀಳುತ್ತಿರುವುದರಿಂದ ಹಂಪಿಯಲ್ಲಿ ತುಂಗಭದ್ರಾ ನದಿ ಮೈದುಂಬಿ ಹರಿಯತೊಡಗಿದ್ದು, ವಿಜಯವಿಠ್ಠಲ ದೇವಸ್ಥಾನ ಸಮೀಪದ ಪುರಂದರ ಮಂಟಪ ಬಹುತೇಕ ಮುಳುಗಿದೆ.
ವಿರೂಪಾಕ್ಷ ದೇವಸ್ಥಾನದ ಬಳಿಯ ಸ್ನಾನಘಟ್ಟದಲ್ಲಿ ಸಹ ನೀರು ತುಂಬಿದ್ದು, ಸಂಸ್ಕಾರ ಮಂಟಪ, ತುಂಗಾರತಿ ಮಂಟಪಗಳು ಮುಳುಗಿವೆ. ಆದರೆ ಎಷ್ಟೇ ನೀರು ಬಂದರೂ ಇಲ್ಲಿನ ಸ್ಮಾರಕಗಳಿಗೆ, ಜನವಸತಿ ಪ್ರದೇಶಗಳಿಗೆ ಪ್ರವಾಹ ಆತಂಕ ಇಲ್ಲ. 3.50 ಲಕ್ಷ ಕ್ಯೂಸೆಕ್‌ಗಿಂತ ಅಧಿಕ ನೀರು ಬಿಡುಗಡೆಯಾದರೆ ಮಾತ್ರ ಹಂಪಿಯ ಎದುರುಬಸವಣ್ಣ ಮಂಟಪದ ಸಮೀಪಕ್ಕೆ ಪ್ರವಾಹ ನೀರು ಬರುತ್ತದೆ, ಆಗ ಅಪಾಯದ ಸ್ಥಿತಿ ನಿರ್ಮಾಣವಾಗುತ್ತದೆ, 1992ರಲ್ಲಿ ಮಾತ್ರ ಇಂತಹ ಸನ್ನಿವೇಶ ಸೃಷ್ಟಿಯಾಗಿತ್ತು, ಸದ್ಯ ಎಲ್ಲಿಯೂ ಯಾವುದೇ ಆತಂಕ ಇಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.
ಮಳೆ ಇಲ್ಲ: ತುಂಗಭದ್ರಾ ನದಿಯಲ್ಲಿ ನೀರು ತುಂಬಿ ಹರಿಯುತ್ತಿದ್ದರೂ ವಿಜಯನಗರ ಜಿಲ್ಲೆಯಲ್ಲಿ ಮಾತ್ರ ಮಳೆ ಸುರಿಯದೆ ಮೋಡದ ವಾತಾವರಣವಷ್ಟೇ ಇದೆ. ಅಲ್ಲಲ್ಲಿ ಕೆಲವೊಮ್ಮೆ ತುಂತುರು ಮಳೆಯಾಗುತ್ತಿದೆ.
ಜೋಳದ ರಾಶಿ ಗುಡ್ಡ ಕುಸಿತ ಭೀತಿ: ಹೊಸಪೇಟೆ ನಗರ ಪ್ರವೇಶ ಮಾಡುವಾಗ ಸಿಗುವ ಜೋಳದ ರಾಶಿ ಗುಡ್ಡದ ಬುಡದಲ್ಲೇ ಬಳ್ಳಾರಿ ಹೆದ್ದಾರಿ ಹಾದು ಹೋಗುತ್ತಿದ್ದು, ಅಲ್ಲಿ ಗುಡ್ಡ ಕುಸಿಯುವ ಆತಂಕ ಇದೆ. ಹೀಗಾಗಿ ಗುರುವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಹಿತ ಜಿಲ್ಲಾ ಪೊಲೀಸ್ ವರಿಷ್ಠ ಶ್ರೀಹರಿಬಾಬು ಬಿ.ಎಲ್. ಅವರು ಸ್ಥಳ ಪರಿಶೀಲನೆ ನಡೆಸಿ, ಸಂಭಾವ್ಯ ಅಪಾಯ ತಪ್ಪಿಸುವ ನಿಟ್ಟಿನಲ್ಲಿ ಸಮಾಲೋಚನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.