
ಹೊಸಪೇಟೆ: ತುಂಗಭದ್ರಾ ಅಣೆಕಟ್ಟೆಗೆ ಹೊಸದಾಗಿ ಕ್ರೆಸ್ಟ್‌ಗೇಟ್‌ಗಳನ್ನು ಅಳವಡಿಸುವ ಕಾಮಗಾರಿ ಆರಂಭವಾಗಿ ಭರ್ತಿ ಒಂದು ತಿಂಗಳು (ಡಿ.24ರಿಂದ ಆರಂಭ) ಕಳೆದಿದ್ದು, ಸದ್ಯ ಒಂದು ಗೇಟ್ ಪೂರ್ಣಗೊಂಡಿದ್ದರೆ, ಮೂರು ಪೂರ್ಣಗೊಳ್ಳುವ ಹಂತದಲ್ಲಿದೆ. ಚೈನ್‌ಲಿಂಕ್ ಸಿದ್ಧಪಡಿಸಲು ಟೆಂಡರ್ ಕರೆಯುವುದಕ್ಕೆ ವಿಳಂಬ ಮಾಡಿದ್ದು ಏಕೆ ಎಂಬ ವಿಷಯ ನಿಗೂಢವಾಗಿದೆ.
18ನೇ ಗೇಟ್‌ಗೆ ಮೊದಲಾಗಿ ಹೊಸ ಕ್ರೆಸ್ಟ್‌ಗೇಟ್ ಅಳವಡಿಕೆ ಆರಂಭವಾಗಿತ್ತು. ಅದು ಜ.7ರಂದು ಪೂರ್ಣಗೊಂಡಿತ್ತು. ಹಳೆಯ ಚೈನ್‌ಲಿಂಕ್ ಬಳಸಿ ಆ ಗೇಟ್ ಮೇಲಕ್ಕೆತ್ತುವ ಪ್ರಯೋಗ ಜ.13ರಂದು ಯಶಸ್ವಿಯಾಗಿತ್ತು. ಹೊಸ ಗೇಟ್ ಜತೆಯಲ್ಲೇ ಹೊಸ ಚೈನ್‌ಲಿಂಕ್ ಅನ್ನು ಸಹ ಏಕೆ ಅಳವಡಿಸಿಲ್ಲ ಎಂದು ಕೇಳಿದಾಗ ಟೆಂಡರ್ ಈಗಷ್ಟೇ ಕರೆದು ಅಂತಿಮಗೊಂಡಿದೆ, ಚೆನ್ನೈಯಲ್ಲಿ ಚೈನ್‌ಲಿಂಕ್ ಸಿದ್ಧಪಡಿಸುವ ಕೆಲಸ ಆರಂಭವಾಗಿದೆ ಎಂದು ತುಂಗಭದ್ರಾ ಮಂಡಳಿಯ ಮೂಲಗಳು ಆಗ ತಿಳಿಸಿದ್ದವು.
ಕ್ರೆಸ್ಟ್‌ಗೇಟ್ ತಜ್ಞ ಕನ್ಹಯ್ಯ ನಾಯ್ಡು ಅವರು ಸಹ ಚೈನ್‌ಲಿಂಕ್ ಸಿದ್ಧಪಡಿಸಲು ಟೆಂಡರ್ ಕರೆದುದು ವಿಳಂಬವಾಗಿ ಎಂಬುದನ್ನು ‘ಪ್ರಜಾವಾಣಿ’ ಜತೆಗೆ ಮಾತನಾಡುತ್ತ ಒಪ್ಪಿಕೊಂಡಿದ್ದು, ಚೆನ್ನೈಯ ‘ಡೈಮೆನ್ಷನ್’ ಕಂಪನಿ ಅದನ್ನು ತಯಾರಿಸುವ ಗುತ್ತಿಗೆ ಪಡೆದಿದೆ, ಚೈನ್‌ಲಿಂಕ್ ಅನ್ನು ಬಳಿಕವೂ ಹೊಸ ಗೇಟ್‌ಗಳಿಗೆ ಅಳವಡಿಸಬಹುದು, ಸಮಸ್ಯೆಯೇನೂ ಇಲ್ಲ ಎಂದು ಅವರು ಹೇಳಿದ್ದಾರೆ.
ಹಳೆಯ 8 ಗೇಟ್ ತೆರವು: ಮೊದಲಾಗಿ 18ನೇ ಹಳೆಗೇಟ್ ತೆರೆವುಗೊಳಿಸುವ ಕೆಲಸ ನಡೆದಿತ್ತು. ಬಳಿಕ ಅದಕ್ಕೆ ಹೊಸ ಗೇಟ್ ಅಳವಡಿಕೆ ನಡೆಯಿತು. ಜತೆಗೆ 4, 20, 27ನೇ ಗೇಟ್‌ಗಳಲ್ಲಿ ಹಳೆ ಗೇಟ್ ತೆರವುಗೊಳಿಸಿ ಹೊಸ ಗೇಟ್ ಅಳವಡಿಕೆ ಆರಂಭವಾಯಿತು. ಆದರೆ ಇನ್ನೂ ಪೂರ್ಣಗೊಂಡಿಲ್ಲ. ಈ ತಿಂಗಳ ಅಂತ್ಯದೊಳಗೆ ಪೂರ್ಣಗೊಳ್ಳಬಹುದು. ಇದರ ಜತೆಗೆ 11 ಮತ್ತು 28ನೇ ಗೇಟ್‌ಗಳಲ್ಲಿ ಹಳೆಯ ಗೇಟ್ ತೆರವು ಕೆಲಸ ನಡೆಯಿತು. 19ನೇ ಗೇಟ್‌ನಲ್ಲಿ ಅಳವಡಿಸಲಾಗಿದ್ದ ತಾತ್ಕಾಲಿಕ ಗೇಟ್ (ಸ್ಟಾಪ್‌ಲಾಗ್) ಸಹ ತೆರವುಗೊಳಿಸಲಾಗಿದೆ. ಕೊನೆಯ ಅಂದರೆ 33ನೇ ಗೇಟ್ ತೆರವು ಕಾರ್ಯ ಇದೀಗ ನಡೆದಿದೆ ಎಂದು ತುಂಗಭದ್ರಾ ಮಂಡಳಿಯ ಮೂಲಗಳು ತಿಳಿಸಿವೆ.
ರೈತರಿಗೆ ಮೋಸ ಮಾಡಬೇಡಿ:
‘ಎರಡನೇ ಬೆಳೆಗೆ ನೀರು ಸಿಗುವುದಿಲ್ಲ ಎಂದು ಗೊತ್ತಾದ ಬಳಿಕ ರೈತರು ಪೂರ್ಣವಾಗಿ ಭರವಸೆ ಕಳೆದುಕೊಂಡಿದ್ದಾರೆ. ಜೂನ್ ಒಳಗೆ ಹೊಸ ಗೇಟ್ ಅಳವಡಿಕೆ ಆಗಲಿ ಎಂದಷ್ಟೇ ಅವರೆಲ್ಲ ಬಯಸುತ್ತಿದ್ದಾರೆ, ಅವರ ಭಾವನೆಯನ್ನು ಎಲ್ಲಾ ಸರ್ಕಾರಗಳು ಗೌರವಿಸಬೇಕು. ರಾಜ್ಯ ಸರ್ಕಾರ ಸಹ ತನ್ನ ಪಾಲಿನ ದುಡ್ಡು ಕೊಡಲು ಸತಾಯಿಸಬಾರದು’ ಎಂದು ಹೇಳಿರುವ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ (ಕಾರ್ತಿಕ್ ಬಣ) ರಾಜ್ಯ ಗೌರವಾಧ್ಯಕ್ಷ ಜೆ.ಎನ್.ಕಾಳಿದಾಸ್, ರೈತ ಮುಖಂಡರನ್ನು ಒಡೆದು ಆಳುವ ಕೆಲಸವನ್ನು ಸರ್ಕಾರಗಳು ಮಾಡುತ್ತಿವೆ, ಇದು ಬಹಳ ಅಪಾಯಕಾರಿ, ಇದರ ಬಗ್ಗೆ ಎಲ್ಲರೂ ಎಚ್ಚರದಿಂದ ಇರಬೇಕು ಎಂದು ಹೇಳಿದರು.
ಕರ್ನಾಟಕ ಸರ್ಕಾರ ಗೇಟ್ ಅಳವಡಿಕೆಗೆ ದುಡ್ಡು ನೀಡಬೇಕು ರಾಜ್ಯದಿಂದಾಗಿಯೇ ಕಾಮಗಾರಿ ವಿಳಂಬ ಎಂಬ ಅಪವಾದ ಬಾರದಂತೆ ನೋಡಿಕೊಳ್ಳಬೇಕುಜೆ.ಎನ್.ಕಾಳಿದಾಸ, ರಾಜ್ಯ ಗೌರವಾಧ್ಯಕ್ಷ ರೈತ ಸಂಘ ಕಾರ್ತಿಕ್ ಬಣ
ಕನ್ಹಯ್ಯ ನಾಯ್ಡು ಹೇಳಿದ್ದು ಸತ್ಯ
‘ಗೇಟ್ ತಜ್ಞ ಕನ್ಹಯ್ಯ ನಾಯ್ಡು ಅವರು ಹೇಳಿದ ಮಾತು ನೂರಕ್ಕೆ ನೂರರಷ್ಟು ಸತ್ಯ. ನಮ್ಮೆಲ್ಲರ ಭಾವನೆಯನ್ನು ಬೇಸರವನ್ನು ಅವರು ನೇರವಾಗಿ ವ್ಯಕ್ತಪಡಿಸಿದ್ದಾರೆ ಅಷ್ಟೇ. ಗೇಟ್ ನಿರ್ಮಾಣಕ್ಕೆ ಮೀಸಲಾದ ಅನುದಾನವನ್ನು ಸಂಬಳದ ಬುಕ್ ಅಡ್ಜ್‌ಸ್ಟ್‌ಮೆಂಟ್ ಆಗಿ ಮಾಡಿದರೆ ತಪ್ಪಲ್ಲವೇ? ಆಂಧ್ರ ಸರ್ಕಾರದ ಎಚ್ಚರಿಕೆಯ ಸಂದೇಶ ಕನ್ಹಯ್ಯ ನಾಯ್ಡು ಅವರ ಮೂಲಕ ಬಂದಂತಿದೆ ಇನ್ನಾದರೂ ಕರ್ನಾಟಕ ಸರ್ಕಾರ ಎಚ್ಚೆತ್ತುಕೊಂಡರೆ ಕಾಮಗಾರಿ ತ್ವರಿತವಾಗಿ ಮುಗಿಯಬಹುದು’ ಎಂದು ತುಂಗಭದ್ರಾ ಮಂಡಳಿಯ ಮೂಲಗಳು ತಿಳಿಸಿವೆ.