ADVERTISEMENT

ವಿಡಿಯೊ ನೋಡಿ: ತುಂಗಭದ್ರಾ ಅಣೆಕಟ್ಟೆ ಸಮೀಪದ ಗುಡ್ಡದಲ್ಲಿ ಕಾಳ್ಗಿಚ್ಚು

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 13:23 IST
Last Updated 16 ಏಪ್ರಿಲ್ 2025, 13:23 IST
   

ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆ ಸಮೀಪದ ಗುಡ್ಡದಲ್ಲಿ ಬುಧವಾರ ಸಂಜೆ ಕಾಳ್ಗಿಚ್ಚು ಕಾಣಿಸಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಅರಣ್ಯ ಸಿಬ್ಬಂದಿ ಬೆಂಕಿ ನಂದಿಸುವ ಪ್ರಯತ್ನ ನಡೆಸಿದ್ದಾರೆ.

ತುಂಗಭದ್ರಾ ಜಲಾಶಯದ ಬಲದಂಡೆಯ ಮೇಲೆ ಗುಡ್ಡಗಳ ಶ್ರೇಣಿ ಇದ್ದು, ಒಂದು ಗುಡ್ಡದ ಮೇಲೆ ವೈಕುಂಠ ಅತಿಥಿಗೃಹ, ಪವನ ವಿದ್ಯುತ್ ಯಂತ್ರಗಳಿದ್ದರೆ, ವಿಜಯಪುರ–ಚಿತ್ರದುರ್ಗ ಹೆದ್ದಾರಿ ಪಕ್ಕದ ಇನ್ನೊಂದು ಗುಡ್ಡದಲ್ಲಿ ಈ ಬೆಂಕಿ ಕಾಣಿಸಿಕೊಂಡಿದೆ. ಅಲ್ಲೂ ಒಂದು ಪವನ ವಿದ್ಯುತ್ ಯಂತ್ರ ಕಾರ್ಯಾಚರಿಸುತ್ತಿದೆ. ಗಾಳಿಯ ರಭಸಕ್ಕೆ ಪವನ ವಿದ್ಯುತ್ ಯಂತ್ರದ ರೆಕ್ಕೆಗಳು ತಿರುಗುತ್ತಿರುವಂತೆಯೇ ಬೆಂಕಿಯ ಕೆನ್ನಾಲಗೆ ಸಹ ಮೇಲ ಮೇಲಕ್ಕೆ ಹೋಗುತ್ತಿರುವುದು ಹೆದ್ದಾರಿ ಮತ್ತು ದೂರದ ಸ್ಥಳಗಳಿಗೆ ಕಾಣಿಸಿದೆ.

‘ಇದು ಅರಣ್ಯ ಇಲಾಖೆಗೆ ಸೇರಿದ ಪ್ರದೇಶ ಅಲ್ಲ, ಆದರೆ ಅಲ್ಲಿ ಕಾಡುಪ್ರಾಣಿಗಳು ಇವೆ. ಅವುಗಳ ಜೀವಕ್ಕೆ ಅಪಾಯ ಆಗಬಾರದು ಎಂಬ ಕಾರಣಕ್ಕೆ ಅಗ್ನಿಶಾಮಕ ಸಿಬ್ಬಂದಿ ಜತೆಗೆ ಅರಣ್ಯ ಸಿಬ್ಬಂದಿಯೂ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ. ಇದು ಯಾರೋ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿದಂತೆ ಕಾಣಿಸುತ್ತಿದೆ, ಬೆಂಕಿ ನಿಯಂತ್ರಣಕ್ಕೆ ಬರುತ್ತಿದೆ, ಆತಂಕಪಡುವ ಅಗತ್ಯ ಇಲ್ಲ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಅರ್ಸಲನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.