ತುಂಗಭದ್ರಾ ಜಲಾಶಯ ಅಣೆಕಟ್ಟೆ ಉದ್ಯಾನಗಳು ಭಾನುವಾರ ಮುಸ್ಸಂಜೆ ದೀಪದ ಬೆಳಕಿನಲ್ಲಿ ಹೀಗೆ ಕಾಣಿಸಿದವು
–ಪ್ರಜಾವಾಣಿ ಚಿತ್ರ/ ಲವ ಕೆ.
ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯಿಂದ ನದಿಗೆ ನೀರು ಹರಿಸಲು ಆರಂಭವಾಗಿ 13 ದಿನ ಕಳೆದಿದ್ದು, ಸದ್ಯ ಒಂಬತ್ತು ಕ್ರಸ್ಟ್‌ಗೇಟ್‌ಗಳನ್ನು ತೆರೆದು ನೀರನ್ನು ಹರಿಸಲಾಗುತ್ತಿದೆ. ಇದನ್ನು ನೋಡಲು ಪ್ರವಾಸಿಗರ ದೊಡ್ಡ ದಂಡೇ ಅಣೆಕಟ್ಟೆಯತ್ತ ಹರಿದು ಬರುತ್ತಿದೆ.
ಭಾನುವಾರ 30 ಸಾವಿರಕ್ಕೂ ಅಧಿಕ ಪ್ರವಾಸಿಗರು ಬಂದು ಅಣೆಕಟ್ಟೆಯ ಸೊಬಗು ವೀಕ್ಷಿಸಿದರು. ದೂರದ ಬೆಂಗಳೂರು, ದಾವಣಗೆರೆ, ಹಿಂದೂಪುರ, ಕರ್ನೂಲ್‌ಗಳಿಂದ ಬಂದ ಹಲವು ಪ್ರವಾಸಿಗರು ‘ಪ್ರಜಾವಾಣಿ’ ಜತೆಗೆ ಮಾತಿಗೆ ಸಿಕ್ಕಿದರು. ಇಂತಹ ಅದ್ಭುತ ನೋಟ, ಪ್ರಶಾಂತ ವಾತಾವರಣ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಎಂಬುದು ಬಹುತೇಕ ಪ್ರವಾಸಿಗರ ಅನಿಸಿಕೆಯಾಗಿತ್ತು.
‘ನಾನು ಬೆಂಗಳೂರಿನಿಂದ ಹಿಂದೂಪುರದ ಫ್ರೆಂಡ್ ಮನೆಗೆ ಬಂದಿದ್ದೆ. ಅವರು ಹಂಪಿ, ತುಂಗಭದ್ರಾ ಜಲಾಶಯ ನೋಡಿಬರೋಣ ಎಂದು ಹೇಳಿದಳು. ಹೀಗಾಗಿ ನಾಲ್ಕು ಮಂದಿ ಇಲ್ಲಿಗೆ ಬಂದೆವು. ಇದೇ ಮೊದಲ ಬಾರಿಗೆ ಇಲ್ಲಿಗೆ ಬಂದಿದ್ದೇನೆ. ನಿಜಕ್ಕೂ ಟಿ.ಬಿ.ಡ್ಯಾಂ ಪರಿಸರ ಅತ್ಯದ್ಭುತವಾಗಿದೆ. ಭೇಟಿ ಕೊಟ್ಟಿದ್ದು ಸಾರ್ಥಕ ಎಂಬ ಭಾವ ಮೂಡುತ್ತಿದೆ. ಕಬಿನಿ ಡ್ಯಾಂ ನೋಡಿದ್ದೆ. ಈ ಡ್ಯಾಂ ನೋಡಿದ ಮೇಲೆ ಅದು ಏನೂ ಅಲ್ಲ ಅನ್ನಿಸಿತು’ ಎಂದು ಬೆಂಗಳೂರಿನ ಪ್ರವಾಸಿ ಸಾನಿಯಾ ಹೇಳಿದರು.
‘ಇಲ್ಲಿಯ ಗಾಳಿ, ಪರಿಸರ ಕಂಡು ಬಹಳ ಖುಷಿಯಾಗಿದೆ. ನನ್ನ ಫ್ರೆಂಡ್ಸ್ ಜತೆ ಚಿಲ್ ಮಾಡಲು ಬಂದಿದ್ದು ಸಾರ್ಥಕ ಅನಿಸಿದೆ’ ಎಂದು ಹಿಂದೂಪುರದ ಮಧುಲಿಕಾ ಹೇಳಿದರು.
ದಾವಣಗೆರೆ ಜಿಲ್ಲೆ ಚನ್ನಗಿರಿಯಿಂದ ಬಂದಿದ್ದ ರೈತ ಮುಖಂಡ ಮಹಾರುದ್ರಯ್ಯ ಅವರಿಗೆ ಅಣೆಕಟ್ಟೆಯ ಸೌಂದರ್ಯಕ್ಕಿಂತಲೂ ಹೊಸ ಕ್ರೆಸ್ಟ್‌ಗೇಟ್ ಅಳವಡಿಸದೆ ಇರುವುದೇ ದೊಡ್ಡ ಚಿಂತೆಯ ಸಂಗತಿಯಾಗಿತ್ತು. ‘ಕ್ರೆಸ್ಟ್‌ಗೇಟ್‌ಗಳನ್ನು ಅಳವಡಿಸುವುದಕ್ಕೆ ವಿಳಂಬ ಮಾಡಿದರು, ಈ ಬಾರಿ ಉತ್ತಮ ಮಳೆಯೂ ಆಗುತ್ತಿದೆ, ಎರಡು ಬೆಳೆಗೆ ಧಾರಾಳವಾಗಿ ನೀರು ಸಿಗುತ್ತಿತ್ತು. ಸದ್ಯ ನೀರು ಸುಮ್ಮನೆ ನದಿಗೆ ಪೋಲಾಗಿ ಹರಿದು ಹೋಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ನಿಜಕ್ಕೂ ಹಂಪಿ ಟಿ.ಬಿ.ಡ್ಯಾಂ ಹೊಸಪೇಟೆಗೆ ಬಂದವರು ನೋಡಲೇಬೇಕಾದ ಸ್ಥಳಗಳು. ಅಣೆಕಟ್ಟೆಯಿಂದ ನೀರು ಬಿಟ್ಟಿದ್ದಾರೆ. ಈಗ ನೋಡುವ ನೋಟವೇ ಅದ್ಭುತಕಾರ್ತಿಕ್, ಬೆಂಗಳೂರಿನ ಪ್ರವಾಸಿಗ
ಸಂಗೀತ ಕಾರಂಜಿ ಸುತ್ತ ಜನಜಂಗುಳಿ
ತುಂಗಭದ್ರಾ ಅಣೆಕಟ್ಟೆಯ ಕೆಳಭಾಗದಲ್ಲಿ ಸುಂದರ ಉದ್ಯಾನ ಇದ್ದು ಪ್ರವಾಸಿಗರು ಅಲ್ಲಿಗೂ ಭೇಟಿ ನೀಡುತ್ತಿದ್ದಾರೆ. ಕಾರಂಜಿ ಸಹಿತ ದೀಪಗಳ ಬೆಳಕಿನಲ್ಲಿ ಉದ್ಯಾನ ಚೆನ್ನಾಗಿ ಕಾಣಿಸುತ್ತಿದೆ. ಆದರೆ ನಿರ್ವಹಣೆಯ ಕೊರತೆ ಸ್ವಲ್ಪ ಕಾಣಿಸದೆ ಇಲ್ಲ. ಅಲ್ಲೇ ಪಕ್ಕದಲ್ಲಿರುವ ಸಂಗೀತ ಕಾರಂಜಿ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸುತ್ತಿದೆ. ಸಂಜೆ 7.30ಕ್ಕೆ ಹಾಗೂ ರಾತ್ರಿ 8.10ಕ್ಕೆ ಸಂಗೀತ ಕಾರಂಜಿ ಪ್ರದರ್ಶನ ಇದೆ. ಇಲ್ಲೂ ನಿರ್ವಹಣೆಯ ಕೊರತೆ ಇದ್ದೇ ಇದೆ. ಹಲವು ದೀಪಗಳು ಉರಿಯುತ್ತಿಲ್ಲ. ಆದರೆ ಜನ ಬೇಸರಿಸದೆ ಇದ್ದ ವ್ಯವಸ್ಥೆಗೇ ಒಗ್ಗಿಕೊಂಡು ಸಂತೋಷ ಪಡುತ್ತಿದ್ದಾರೆ.
ದೀಪದ ಬೆಳಕಲ್ಲಿ ತುಳುಕುವ ನೀರು
ಭಾನುವಾರ ಸಂಜೆ ತುಂಗಭದ್ರಾ ಅಣೆಕಟ್ಟೆಯ 9 ಗೇಟ್‌ಗಳಿಂದ ನೀರನ್ನು ಹೊರ ಬಿಡಲಾಗುತ್ತಿತ್ತು. ಹೀಗಿದ್ದರೂ ಎಲ್ಲಾ 33 ಗೇಟ್‌ಗಳಿಗೂ ದೀಪ ಹಚ್ಚಿ ಸಂಭ್ರಮವನ್ನು ತೋರಿಸಲಾಯಿತು. ನೀರಿಗೆ ಬಿದ್ದ ಬಣ್ಣದ ಬೆಳಕು ಮೂಡಿಸಿದ ಚಿತ್ತಾರ ಕಣ್ಣಿಗೆ ಹಬ್ಬವನ್ನೇ ಉಂಟುಮಾಡಿತು. ಪ್ರವಾಸಿಗರು ಇದಕ್ಕಾಗಿ ಬಹಳ ಹೊತ್ತು ಕಾಯ್ದು ಕುಳಿತಿದ್ದರು. ಬೆಳಕಿನ ರಾಶಿ ಕಂಡು ಖುಷಿಗೊಂಡರು. ಶನಿವಾರ 20 ಸಾವಿರಕ್ಕೂ ಅಧಿಕ ಪ್ರವಾಸಿಗರು ಬಂದಿದ್ದರು. ಆದರೆ ಮಳೆ ಸಹ ಸ್ವಲ್ಪಮಟ್ಟಿಗೆ ಇತ್ತು. ಹೀಗಾಗಿ ಅಣೆಕಟ್ಟೆಗೆ ವಿದ್ಯುತ್ ದೀಪ ಬೆಳಗಿಸಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.