ADVERTISEMENT

ತುಂಗಭದ್ರಾ: 1.24 ಲಕ್ಷ ಕ್ಯೂಸೆಕ್‌ ನೀರು ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 16:07 IST
Last Updated 18 ಆಗಸ್ಟ್ 2025, 16:07 IST
   

ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲೆಯಲ್ಲಿ ಮಳೆ ಇಲ್ಲದಿದ್ದರೂ, ಶಿವಮೊಗ್ಗ ಭಾಗದಲ್ಲಿ ಬಿರುಸಿನ ಮಳೆ ಆಗುತ್ತಿರುವುದರಿಂದ ತುಂಗಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ಭಾನುವಾರ ಸಂಜೆ 1.24 ಲಕ್ಷ ಕ್ಯೂಸೆಕ್‌ ನೀರನ್ನು ನದಿಗೆ ಮತ್ತು ಕಾಲುವೆಗಳಿಗೆ ಹರಿಯಬಿಡಲಾಯಿತು.

ಸದ್ಯ 77,221 ಕ್ಯೂಸೆಕ್‌ನಷ್ಟು ಒಳಹರಿವು ಇದೆ, ಆದರೆ 80 ಟಿಎಂಸಿ ಅಡಿಗಿಂತ ಹೆಚ್ಚು ನೀರು ಸಂಗ್ರಹಿಸಲಾಗದು ಎಂಬ ಕಾರಣಕ್ಕೆ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದೆ. ಕಾಲುವೆಗಳಿಗೆ ಸುಮಾರು 15 ಕ್ಯೂಸೆಕ್‌ನಷ್ಟು ನೀರನ್ನು ಹರಿಸಲಾಗುತ್ತಿದ್ದರೆ, 26 ಗೇಟ್‌ಗಳನ್ನು ತೆರೆದು 1.09 ಲಕ್ಷ ಕ್ಯೂಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತಿದೆ ಎಂದು ತುಂಗಭದ್ರಾ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ 6 ಗೇಟ್‌ಗಳನ್ನು ಮೇಲೆತ್ತಲು ಸಾಧ್ಯವಾಗುತ್ತಿಲ್ಲ. 19ನೇ ಗೇಟ್‌ಗೆ ಸ್ಟಾಪ್‌ಲಾಗ್‌ ಅಳವಡಿಸಿದ್ದರಿಂದ ಅದರಲ್ಲಿ ನೀರು ಹೊರಬಿಡುವುದು ಸಾಧ್ಯವಿಲ್ಲ. 4ನೇ ಗೇಟ್‌ ಅನ್ನು ಎರಡು ಅಡಿಯಷ್ಟು ಮಾತ್ರ ಮೇಲೆತ್ತಲಾಗುತ್ತಿದೆ.13 ಗೇಟ್‌ಗಳನ್ನು 5 ಅಡಿಯಷ್ಟು ಮೇಲಕ್ಕೆ ಎತ್ತಿ 68,965 ಕ್ಯೂಸೆಕ್‌ ನೀರನ್ನು ಹೊರಗೆ ಬಿಡಲಾಗುತ್ತಿದೆ. ಉಳಿದಂತೆ 5 ಗೇಟ್‌ಗಳನ್ನು 2 ಅಡಿಯಷ್ಟು, 5 ಗೇಟ್‌ಗಳನ್ನು 3 ಅಡಿಯಷ್ಟು, 2 ಗೇಟ್‌ಗಳನ್ನು 4 ಅಡಿಯಷ್ಟು ಹಾಗೂ 1 ಗೇಟ್‌ ಅನ್ನು 3.5 ಅಡಿಯಷ್ಟು ಮೇಲಕ್ಕೆತ್ತಿ ನೀರು ನದಿಗೆ ಹರಿಸಲಾಗುತ್ತಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.