ADVERTISEMENT

ತುಂಗಭದ್ರಾ ಅವಘಡ: ಅಣೆಕಟ್ಟೆಯಲ್ಲಿ ಪೂಜೆ, ಕೆಡಿಪಿಯಲ್ಲಿ ಮಂಗಳಾರತಿ!

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2024, 16:30 IST
Last Updated 14 ಆಗಸ್ಟ್ 2024, 16:30 IST
ಹೊಸಪೇಟೆ ಸಮೀಪದ ತುಂಗಭದ್ರಾ ಅಣೆಕಟ್ಟೆಯ 19ನೇ ಗೇಟ್ ಬಳಿ ಬುಧವಾರ ಪೂಜೆ ನೆರವೇರಿಸಲಾಯಿತು  –ಪ್ರಜಾವಾಣಿ ಚಿತ್ರ
ಹೊಸಪೇಟೆ ಸಮೀಪದ ತುಂಗಭದ್ರಾ ಅಣೆಕಟ್ಟೆಯ 19ನೇ ಗೇಟ್ ಬಳಿ ಬುಧವಾರ ಪೂಜೆ ನೆರವೇರಿಸಲಾಯಿತು  –ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್‌ಗೇಟ್ ಇದ್ದ ಸ್ಥಳದಲ್ಲಿ ತಾತ್ಕಾಲಿಕ ಗೇಟ್ ನಿರ್ಮಿಸಲು ಸಿದ್ಧತೆ ನಡೆದಿರುವಂತೆಯೇ ಬುಧವಾರ ಅದೇ ಸ್ಥಳದಲ್ಲಿ ಪೂಜೆ ನೆರವೇರಿಸಲಾಯಿತು. ಆದರೆ ಅದರ ಮಂಗಳಾರತಿ ನಡೆದುದು ಕೆಡಿಪಿ ಸಭೆಯಲ್ಲಿ.

ಸಚಿವ ಜಮೀರ್ ಅಹ್ಮದ್ ಖಾನ್ ಸ್ವತಃ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಆರತಿ ಬೆಳಗಿ ಭಕ್ತಿಯಿಂದ ಪೂಜೆ ನೆರಬೇರಿಸಿದ್ದರು. ಗೇಟ್‌ ತಜ್ಞ ಕನ್ನಯ್ಯ ನಾಯ್ಡು ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೂ ಚರ್ಚಿಸಿದ್ದರು. 

ಸಂಜೆ ಡಿ.ಸಿ ಕಚೇರಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಇದೇ ವಿಚಾರ ಪ್ರಸ್ತಾಪಿಸಿದ ಸಚಿವರು, ಸ್ಥಳೀಯ ಶಾಸಕರು, ಸಂಸದರಿಗೆ ಪೂಜೆಗೆ ಏಕೆ ಕರೆಯಲಿಲ್ಲ ಎಂದು ಕರ್ನಾಟಕ ನೀರಾವರಿ ನಿಗಮದ ಮುನಿರಾಬಾದ್ ವಿಭಾಗದ ಮುಖ್ಯ ಎಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಮುಂದೆ ಹೀಗಾಗದಂತೆ ನೋಡಿಕೊಳ್ಳುವುದಾಗಿ ಎಂಜಿನಿಯರ್ ಗೋಗರೆದ ಬಳಿಕವಷ್ಟೇ ವಿಷಯವನ್ನು ಅಲ್ಲಿಗೇ ಬಿಡಲಾಯಿತು.

ADVERTISEMENT

ರಾತ್ರಿ ಎಲಿಮೆಂಟ್ ರವಾನೆ: ಜಿಂದಾಲ್‌ನಲ್ಲಿ ಸಿದ್ಧವಾಗಿರುವ ಎರಡು ಹಾಗೂ ಸಂಕ್ಲಾಪುರ, ಹೊಸಹಳ್ಳಿಗಳಲ್ಲಿ ಸಿದ್ಧವಾದ ತಲಾ ಒಂದು ಗೇಟ್ ಎಲಿಮೆಂಟ್‌ಗಳನ್ನು ರಾತ್ರಿ ಹೊತ್ತು ಅಣೆಕಟ್ಟೆಯತ್ತ ಸಾಗಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ತುಂಗಭದ್ರಾ ಮಂಡಳಿಯ ಮೂಲಗಳು ತಿಳಿಸಿವೆ.

ಬುಧವಾರ ದಿನವಿಡೀ ಎಲಿಮೆಂಟ್‌ಗಳ ಸಾಗಣೆ ನೋಡಲು ಸಾರ್ವಜನಿಕರು, ಮಾಧ್ಯಮದವರು ಕಾತರರಾಗಿದ್ದರು. ಆದರೆ ಅದು ಈಡೇರಲಿಲ್ಲ.

‘ಇಂದು ಡ್ಯಾಂನತ್ತ ಬರಬೇಡಿ’

‘ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿರುವ ಜನರು ಡ್ಯಾಂನತ್ತ ಬರಬಾರದು. ಯಾರಿಗೂ ಒಳಗೆ ಪ್ರವೇಶವಿಲ್ಲ. ಜನರು ಸಹಕರಿಸಬೇಕು’ ಎಂದು ತುಂಗಭದ್ರಾ ಮಂಡಳಿ ಮನವಿ ಮಾಡಿದೆ.

ತುಂಗಭದ್ರಾ ಅಣೆಕಟ್ಟೆಯ ತೂಬು ಬಂದ್ ಮಾಡಲು ತೋರಣಗಲ್‌ನ ಜಿಂದಾಲ್‌ನಲ್ಲಿ ಸಜ್ಜಾಗಿರುವ ತಾತ್ಕಾಲಿಕ ಗೇಟ್‌ನ ಒಂದು ಭಾಗ  –ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.