ಬಾರಿ ಇಮಾಂ, ರಾಜಾಭಕ್ಷಿ
ಮರಿಯಮ್ಮನಹಳ್ಳಿ (ವಿಜಯನಗರ ಜಿಲ್ಲೆ): ಹೊಸಪೇಟೆ ತಾಲ್ಲೂಕು ಮರಿಯಮ್ಮನಹಳ್ಳಿ ಸಮೀಪದ ಎಂಎಸ್‍ಪಿಎಲ್ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ-50ರ ಮೇಲ್ಸುತುವೆ ಬದಿಯ ತುಂಗಭದ್ರಾ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಸೋಮವಾರ ಸಂಜೆ ಇಬ್ಬರು ಸಹೋದರರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಪಟ್ಟಣ ಸಮೀಪದ ಹಂಪಿನಕಟ್ಟೆ ಗ್ರಾಮದ ಕೂಲಿಕಾರ್ಮಿಕ ರಾಜಾಭಕ್ಷಿ (30) ಮತ್ತು ಅವರ ತಮ್ಮ ಬೀದರ್ ಜಿಲ್ಲೆ ಹುಮನಬಾದ್‍ನಲ್ಲಿ ಗ್ರಾಮ ಲೆಕ್ಕಿಗನಾಗಿ ಕೆಲಸ ಮಾಡುತ್ತಿದ್ದ ಬಾರಿ ಇಮಾಂ(26) ಮೃತಪಟ್ಟವರು.
ಇವರಿಬ್ಬರೂ ಅವಿವಾಹಿತರಾಗಿದ್ದರು. ಭಾನುವಾರ ಮನೆಯಲ್ಲಿ ಗ್ಯಾರ್ವಿ ಹಬ್ಬ ಆಚರಿಸಿಕೊಂಡಿದ್ದರು. ಸೋಮವಾರ ಕುಟುಂಬದ ಇತರೆ ಏಳು ಜನ ಸದಸ್ಯರೊಂದಿಗೆ ಸಮೀಪದ ಎಂಎಸ್‍ಪಿಎಲ್ ಕ್ರಾಸ್ ಬಳಿಯ ತುಂಗಭದ್ರಾ ಜಲಾಶಯದ ಹಿನ್ನೀರ ಪ್ರದೇಶಕ್ಕೆ ಸಂಜೆ ವನಭೋಜನಕ್ಕೆ ತೆರಳಿದ್ದರು.
ಈಜು ಬಾರದ ಇವರಿಬ್ಬರು ನದಿಗೆ ಇಳಿದಿದ್ದಾಗ ಕಾಲು ಜಾರಿ ಬಿದ್ದು ಮುಳುಗಿದ್ದಾರೆ. ನಂತರ ಅಗ್ನಿ ಶಾಮಕ ಮತ್ತು ತುರ್ತು ಸೇವೆಯ ಸಿಬ್ಬಂದಿ ಬಂದು ಮೃತದೇಹಗಳನ್ನು ಹೊರತೆಗೆದಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ಭೇಟಿ ನೀಡಿ ಪರಿಶೀಲಿಸಿದರು. ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.