ತುಂಗಭದ್ರಾ ಜಲಾಶಯ
ಹೊಸಪೇಟೆ: ತುಂಗಭದ್ರಾ ಅಣೆಕಟ್ಟೆ ತುಂಬಲು ಒಂದೂವರೆ ಅಡಿಯಷ್ಟೇ ಬಾಕಿ ಉಳಿದಿದ್ದು, ಬುಧವಾರ ಸಂಜೆ 10 ಕ್ರಸ್ಟ್‌ಗೇಟ್‌ಗಳನ್ನು ತೆರೆದು ನೀರನ್ನು ನದಿಗೆ ಬಿಡಲಾಯಿತು.
105 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 98.06 ಟಿಎಂಸಿ ಅಡಿ ಸಂಗ್ರಹವಾಗಿದೆ. 87,700 ಕ್ಯುಸೆಕ್‌ನಷ್ಟು ಒಳಹರಿವು ಇರುವುದರಿಂದ ಗುರುವಾರ ಬೆಳಿಗ್ಗೆಯ ವೇಳೆಗೆ ಜಲಾಶಯ ಭರ್ತಿಯಾಗುವ ನಿರೀಕ್ಷೆ ಇದೆ. 18,686 ಕ್ಯುಸೆಕ್‌ನಷ್ಟು ನೀರನ್ನು ಸದ್ಯ ನದಿಗೆ ಹರಿಸಲಾಗುತ್ತಿದ್ದು, ಒಳಹರಿವು ಹೆಚ್ಚಿದರೆ ಇನ್ನಷ್ಟು ಗೇಟ್‌ಗಳನ್ನು ತೆರೆದು ನೀರು ಹೊರಬಿಡುವ ಸಾಧ್ಯತೆ ಇದೆ ಎಂದು ತುಂಗಭದ್ರಾ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.
‘ಜಿಲ್ಲೆಯಲ್ಲಿ ಸದ್ಯ ಮಳೆ ಇಲ್ಲ, ತುಂಗಭದ್ರಾ ನದಿಯಿಂದ ಸದ್ಯ ಎಲ್ಲೂ ಪ್ರವಾಹ ಸ್ಥಿತಿ ಇಲ್ಲ. ನದಿಗೆ 3.50 ಲಕ್ಷ ಕ್ಯುಸೆಕ್‌ಗಿಂತ ಅಧಿಕ ನೀರು ಹರಿದುಬಂದಾಗ ಮಾತ್ರ ಪ್ರವಾಹ ಸ್ಥಿತಿ ಉಂಟಾಗುತ್ತದೆ.1992ರಲ್ಲಿ ಇಂತಹ ಪರಿಸ್ಥಿತಿ ಎದುರಾದುದು ಬಿಟ್ಟರೆ ಬಳಿಕ ಅಂತಹ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಸದ್ಯ 87 ಕ್ಯುಸೆಕ್‌ನಷ್ಟು ಒಳಹರಿವು ಮಾತ್ರ ಇದೆ, ಹೀಗಾಗಿ ಆತಂಕದ ಸ್ಥಿತಿ ಇಲ್ಲ’ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಹೊಸಪೇಟೆ ತಾಲ್ಲೂಕಿನ 20 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಬುಧವಾರ ಚಾಲನೆ ನೀಡುವ ಮೂಲಕ ಜಿಲ್ಲೆಯಲ್ಲಿ ಕೆರೆಗಳ ತುಂಬಿಸುವಿಕೆಗೆ ವೇಗ ದೊರೆತಿದೆ.
ಈ ಮಧ್ಯೆ, ಹೊಸಪೇಟೆ ಉಪವಿಭಾಗಾಧಿಕಾರಿ ವಿವೇಕಾನಂದ, ತಹಶೀಲ್ದಾರ್ ವಿಶ್ವಜೀತ್ ಮೆಹತಾ ಹಾಗೂ ಇತರ ಕಂದಾಯ ಅಧಿಕಾರಿಗಳು ಬುಧವಾರ ಹಂಪಿ, ಕಮಲಾಪುರ, ಹೊಸೂರು ಮೊದಲಾದ ಕಡೆಗಳಿಗೆ ತೆರಳಿ, ನದಿ ಪಾತ್ರದ ಜನರಿಗೆ ಎಚ್ಚರದಿಂದ ಇರಲು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.