ADVERTISEMENT

ಹಂಪಿ ಸುತ್ತಮುತ್ತಲಿವೆ ದ್ವಾದಶ ಲಿಂಗಗಳು.. ಏನು ಈ ಲಿಂಗಗಳ ವಿಶೇಷತೆ?

ಪ್ರತಿ ಶಿವಲಿಂಗಕ್ಕೆ ನಿತ್ಯ ಪೂಜೆಗೆ ಶಾಸಕರ ಪ್ರಯತ್ನ

ಎಂ.ಜಿ.ಬಾಲಕೃಷ್ಣ
Published 26 ಫೆಬ್ರುವರಿ 2025, 6:34 IST
Last Updated 26 ಫೆಬ್ರುವರಿ 2025, 6:34 IST
ಹಂಪಿಯ ವಿರೂಪಾಕ್ಷೇಶ್ವರ ದೇವರು
ಹಂಪಿಯ ವಿರೂಪಾಕ್ಷೇಶ್ವರ ದೇವರು    

ಹೊಸಪೇಟೆ (ವಿಜಯನಗರ): ಶಿವರಾತ್ರಿ ಸಂದರ್ಭದಲ್ಲಿ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಬರುತ್ತಿದ್ದು, ಹಂಪಿಯ ಸುತ್ತಲೂ 11 ಶಿವಕ್ಷೇತ್ರಗಳಿವೆ. ಮುಂದಿನ ದಿನಗಳಲ್ಲಿ ಇವುಗಳನ್ನು ಯಾತ್ರಾಸ್ಥಳಗಳಾಗಿ ಪರಿವರ್ತಿಸುವ ಚಿಂತನೆಯಲ್ಲಿ ಶಾಸಕ ಎಚ್‌.ಆರ್.ಗವಿಯಪ್ಪ ಇದ್ದಾರೆ.

‘ಹಂಪಿಯಲ್ಲೇ ಇವೆ ದ್ವಾದಶ ಲಿಂಗಗಳು, ಮೊದಲಿಗೆ ಇಲ್ಲಿರುವ ದ್ವಾದಶ ಲಿಂಗಗಳ ದರ್ಶನ ಮಾಡಿ ಪುನೀತರಾಗೋಣ, ಬಳಿಕ ದ್ವಾದಶ ಜ್ಯೋತಿರ್ಲಿಂಗಗಳನ್ನು ದರ್ಶಿಸಿ ಬರೋಣ’ ಎಂದು ಹೇಳುತ್ತಿರುವ ಶಾಸಕರು, ಕಳೆದ ವರ್ಷ ಶ್ರಾವಣ ಮಾಸದಲ್ಲಿ ಪಂಚಲಿಂಗಗಳ ದರ್ಶನಕ್ಕೆ ಭಕ್ತರಿಗೆ ವ್ಯವಸ್ಥೆ ಮಾಡಿದ್ದರು. ಈಗ ಅವರ ದೃಷ್ಟಿ ದ್ವಾದಶ ಲಿಂಗಗಳತ್ತ ನೆಟ್ಟಿದೆ.

ಪಂಚಲಿಂಗಗಳು: ಹಂಪಿ ವಿರೂಪಾಕ್ಷ ಮಧ್ಯಭಾಗದಲ್ಲಿರುವ ಶಿವಲಿಂಗವಾಗಿದ್ದರೆ, ಪೂರ್ವಕ್ಕೆ ಕಿನ್ನರೇಶ್ವರ, ದಕ್ಷಿಣಕ್ಕೆ ಜಂಬುನಾಥೇಶ್ವರ, ಪಶ್ಚಿಮಕ್ಕೆ ಸೋಮನಾಥೇಶ್ವರ, ಉತ್ತರಕ್ಕೆ ಮಾಣಿಭದ್ರೇಶ್ವರ ಶಿವಲಿಂಗಗಳು ಇರುವುದು.

ADVERTISEMENT

‘ಈ ಪಂಚಲಿಂಗಗಳ ಜತೆಗೆ ಇನ್ನೂ ಏಳು ಶಿವಲಿಂಗಗಳು ಹಂಪಿಯ ಸುತ್ತ ಇವೆ. ಎಲ್ಲವೂ ಸೇರಿದಾಗ ದ್ವಾದಶ ಲಿಂಗವಾಗುತ್ತವೆ’ ಎಂದು ಕಳೆದ 40 ವರ್ಷಗಳಿಂದ ಈ ನಿಟ್ಟಿನಲ್ಲಿ ಸಂಶೋಧನೆ, ಕೆಲಸ ಮಾಡುತ್ತ ಬಂದಿರುವ ಹಂಪಿಯ ವೀರಯ್ಯ ಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಏಳು ಲಿಂಗಗಳು: ಬುಕ್ಕಸಾಗರದ ಸಿದ್ಧೇಶ್ವರ ಲಿಂಗ, ತೋರಣಗಲ್‌ನ ಶಂಕರಲಿಂಗ, ಗಂಗಾವತಿಯ ಮಹಾಕಾಲ ಲಿಂಗ, ಗಂಗಾವತಿ ಸಮೀಪದ ಮಹಾಭೈರವ ಲಿಂಗ, ಬೈಲವದ್ದಿಗೇರಿಯ ಕಾಡಸಿದ್ಧೇಶ್ವರ ಲಿಂಗ, ಗಾದಿಗನೂರಿನ ನಂಜುಂಡೇಶ್ವರ ಲಿಂಗ ಮತ್ತು ಹಳೇದರೋಜಿಯ ರಾಮಲಿಂಗೇಶ್ವರ ಲಿಂಗಗಳು ಹಂಪಿ ಸುತ್ತಮುತ್ತ ಇರುವ ಏಳು ಶಿವ ಕ್ಷೇತ್ರಗಳು.

ಶಿವರಾತ್ರಿ ಆಚರಣೆ: ‘ಪಂಪಾ ಕ್ಷೇತ್ರ ಸುತ್ತಮುತ್ತಲಿನ ಎಲ್ಲಾ 11 ಶಿವಲಿಂಗಗಳಿಗೂ ವಿರೂಪಾಕ್ಷನೇ ಕ್ಷೇತ್ರಪಾಲ ಹಾಗೂ ಕೇಂದ್ರ ಬಿಂದು. ಈತನ ತೂಕ ಕಾಶಿ ವಿಶ್ವನಾಥನಿಗಿಂತಲೂ ಒಂದು ಗುಲಗಂಜಿ ಹೆಚ್ಚೇ ಎಂದು ಸ್ವತಃ ವಿಷ್ಣುವೇ ತೂಗಿ ನೋಡಿದ ದೃಶ್ಯವನ್ನು ಹಂಪಿಯ ಭುವನೇಶ್ವರಿ ಗುಡಿ ಬಳಿ ಈಗಲೂ ನೋಡಬಹುದು. ಮಹಾಶಿವರಾತ್ರಿ ದಿನದಂದು ತುಂಗಾನದಿಯಲ್ಲಿ ಸ್ನಾನ ಮಾಡಿ ವಿರೂಪಾಕ್ಷನ ದರ್ಶನ ಪಡೆದು, ಆತನ ಅಪ್ಪಣೆ ಪಡೆದು ಮೊದಲಿಗೆ ಜಂಬುನಾಥ ಗುಡ್ಡಕ್ಕೆ ಹೋಗುತ್ತಿದ್ದೆವು. ಅಲ್ಲಿನ ಕಾಂಚನ ತೀರ್ಥದಲ್ಲಿ ಸ್ನಾನ ಮಾಡಿ ಪೂಜೆ ಸಲ್ಲಿಸಿ ಮತ್ತೆ ಹಂಪಿಗೆ ಬಂದು ಶಿವಪುರಕ್ಕೆ ಹೋಗಿ ಸೋಮನಾಥನ ದರ್ಶನ ಪಡೆಯುತ್ತಿದ್ದೆವು. ಮತ್ತೆ  ಹಂಪಿಗೆ ಬಂದು ಮಾಣಿಭದ್ರೇಶ್ವರ ಬಳಿಕ ಕಿನ್ನೂರೇಶ್ವರ ದರ್ಶನ ಪಡೆಯುತ್ತಿದ್ದೆವು. ನಾನು ಸತತ ಆರು ವರ್ಷ ಇದೇ ರೀತಿ ಅನುಸರಿಸಿಕೊಂಡು ಬಂದಿದ್ದೆ’ ಎಂದು 74 ವರ್ಷದ ವೀರಯ್ಯ ಸ್ವಾಮಿ ತಮ್ಮ ಅನುಭವ  ಹಂಚಿಕೊಂಡರು.

‘ಈಗ ಹಾಗೆ ಮಾಡುವವರು ಯಾರೂ ಇಲ್ಲ. ಕನಿಷ್ಠ ಒಂದು ದಿನದಲ್ಲಿ ಎಲ್ಲಾ 12 ಲಿಂಗಗಳನ್ನು ದರ್ಶಿಸಿ ಪೂಜಿಸುವ ವ್ಯವಸ್ಥೆಯನ್ನು ಮಾಡಿದರೆ ಇಲ್ಲೇ ದ್ವಾದಶ ಲಿಂಗ ದರ್ಶನ ಭಾಗ್ಯ ದೊರೆತಂತಾಗುತ್ತದೆ. ಶಾಸಕ ಗವಿಯಪ್ಪ ಅವರು ಈ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದು, ಅದರಲ್ಲಿ ಯಶಸ್ವಿಯಾಗುವ ವಿಶ್ವಾಸ ಇದೆ’ ಎಂದು ಅವರು ಹೇಳಿದರು.

ಜಂಬುನಾಥ ಸ್ವಾಮಿ
ಎಚ್‌.ಆರ್‌. ಗವಿಯಪ್ಪ
ಕಳೆದ ಬಾರಿ ಪಂಚಲಿಂಗ ದರ್ಶನ ವ್ಯವಸ್ಥೆ ಮಾಡಲಾಗಿತ್ತು ದ್ವಾದಶ ಲಿಂಗಗಳ ದರ್ಶನ ಭಾಗ್ಯವೂ ನಮ್ಮ ಜನರಿಗೆ ಸಿಗಬೇಕು ಎಂಬ ಮಹದಾಸೆ ನನ್ನದು
ಎಚ್‌.ಆರ್.ಗವಿಯಪ್ಪ ಶಾಸಕ

ಮನ್ಮಥ ದಹನ ಕ್ಷೇತ್ರ

ತಾರಕಾಸುರನನ್ನು ಕೊಲ್ಲಲು ಕುಮಾರನ ಜನನ  ಆಗಲೇಬೇಕಿತ್ತು. ಅದಕ್ಕಾಗಿ ಶಿವನ ತಪಸ್ಸನ್ನು ಭಂಗ ಮಾಡಲೇಬೇಕಿತ್ತು. ವಿಷ್ಣುವಿನ ಪುತ್ರ ಮನ್ಮಥನಿಗೆ ಈ ಕೆಲಸ ಒಪ್ಪಿಸಿದಾಗ ಲೋಕ ಕಲ್ಯಾಣಕ್ಕಾಗಿ ಆತ ಅದಕ್ಕೆ ಒಪ್ಪಿಕೊಂಡ. ಶಿವನ ತಪಸ್ಸು ಭಂಗ ಮಾಡಿ ಶಿವನ ಮೂರನೇ ಕಣ್ಣಿನ ಬೆಂಕಿಗೆ ತಾನೇ ಭಸ್ಮವಾದ. ಆ ಸ್ಥಳವೇ ಮನ್ಮಥ ಹೊಂಡ. ಹೀಗಾಗಿ ಪಂಪಾ ಕ್ಷೇತ್ರ ಅತ್ಯಂತ ಪವಿತ್ರವಾದ ಶಿವಕ್ಷೇತ್ರವಾಗಿದ್ದು ಶಿವರಾತ್ರಿ ಆಚರಣೆಗೆ ಇಲ್ಲಿ ವಿಶೇಷ ಮಹತ್ವ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.