Urea shortage; farmers outraged
ಕೊಟ್ಟೂರು: ತಾಲ್ಲೂಕಿನಾದ್ಯಂತ ಸೊಸೈಟಿಗಳಿಗೆ ಹಾಗೂ ರಸಗೊಬ್ಬರ ಮಳಿಗೆಗಳಿಗೆ ಯೂರಿಯಾ ಗೊಬ್ಬರ ಬಂದಿದೆ ಎಂದು ಗೊತ್ತಾದರೆ ಸಾಕು ರೈತರು ಜಮೀನುಗಳ ಕೆಲಸವನ್ನು ಬದಿಗೊತ್ತಿ ಗೊಬ್ಬರ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ಕಾದು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಕಾಲಕ್ಕೆ ಮಳೆಯಾದ ಹಿನ್ನೆಲೆಯಲ್ಲಿ ಬೆಳಗಳಿಗೆ ಯೂರಿಯಾ ಅವಶ್ಯಕತೆ ಇದೆ. ಆದರೆ ಯೂರಿಯಾ ಕೊರತೆ ಉಂಟಾಗಿರುವುದರಿಂದ ಬೆಳೆ ಹಾಳಾದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುವುದೇನೋ ಎಂಬ ಚಿಂತೆ ರೈತರನ್ನು ಕಾಡುತ್ತಿದೆ.
ರೈತ ದೇಶದ ಬೆನ್ನೆಲುಬು ಎಂದು ಹೇಳುವ ಸರ್ಕಾರ, ರೈತರ ಬೆನ್ನು ಮುರಿಯುತ್ತಿದೆಯೇ ಹೊರತು ರೈತರ ಹಿತ ಕಾಯುತ್ತಿಲ್ಲ’ ಎಂದು ರೈತರ ಬೇಡಿಕೆಗೆ ತಕ್ಕಂತೆ ಯೂರಿಯಾ ಪೂರೈಸದಿರುವ ಸರ್ಕಾರದ ವಿರುದ್ಧ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಎನ್.ಭರಮಣ್ಣ ಆಕ್ರೋಶ ವ್ಯಕ್ತಪಡಿಸಿದರು.
‘ಸೊಸೈಟಿಗಳು ಹಾಗೂ ರಸಗೊಬ್ಬರ ಅಂಗಡಿಗಳ ಮೂಲಕ ವಿತರಿಸಲು ತಾಲ್ಲೂಕಿಗೆ 80 ಟನ್ ಯೂರಿಯಾ ಹಂಚಿಕೆಯಾಗಿದ್ದು, ಪ್ರತಿಯೊಬ್ಬ ರೈತರಿಗೆ ಒಂದು ಬ್ಯಾಗ್ ಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ಶ್ಯಾಮ ಸುಂದರ್ ಹೇಳಿದರು.
‘ಯೂರಿಯಾ ಶೇ 35ರಷ್ಟು ಅನುಕೂಲವಾದರೆ ನ್ಯಾನೋ ಯೂರಿಯಾ ಸಿಂಪಡಣೆಯಿಂದ ಶೇ 80ರಷ್ಟು ಅನುಕೂಲವಾಗುವುದು. ಹೀಗಾಗಿ ರೈತರು ತಮ್ಮ ಬೆಳೆಗಳಿಗೆ ಹೆಚ್ಚಿನ ಅನುಕೂಲವಾಗುವಂತಹ ನ್ಯಾನೋ ಯೂರಿಯಾ ಬಳಕೆಗೆ ಹೆಚ್ಚು ಒತ್ತು ನೀಡಬೇಕು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.