ADVERTISEMENT

ರಾಮುಲು ವಿರುದ್ಧ ಅವಹೇಳನ ಪದ ಬಳಕೆ: ಜನಾರ್ದನ ರೆಡ್ಡಿ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಜನವರಿ 2025, 16:03 IST
Last Updated 28 ಜನವರಿ 2025, 16:03 IST
ಹೊಸಪೇಟೆಯಲ್ಲಿ ಮಂಗಳವಾರ ವಾಲ್ಮೀಕಿ ನಾಯಕ ಸಮುದಾಯದ ಮುಖಂಡರು ಬೈಕ್‌ ರ‍್ಯಾಲಿ ನಡೆಸಿದರು
ಹೊಸಪೇಟೆಯಲ್ಲಿ ಮಂಗಳವಾರ ವಾಲ್ಮೀಕಿ ನಾಯಕ ಸಮುದಾಯದ ಮುಖಂಡರು ಬೈಕ್‌ ರ‍್ಯಾಲಿ ನಡೆಸಿದರು   

ಹೊಸಪೇಟೆ (ವಿಜಯನಗರ): ‘ಮಾಜಿ ಸಚಿವ ಬಿ. ಶ್ರೀರಾಮುಲು ವಿರುದ್ಧ ಅವಹೇಳನಕಾರಿ ಪದ ಬಳಸಿರುವ ಶಾಸಕ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಈಗಾಗಲೇ ಎಸ್‌ಪಿ ಅವರಿಗೆ ದೂರು ನೀಡಿದ್ದೇವೆ. ವಾರದೊಳಗೆ ಎಫ್‍ಐಆರ್ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳದಿದ್ದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು’ ಎಂದು ತಾಲ್ಲೂಕು ವಾಲ್ಮೀಕಿ ನಾಯಕ ಸಂಘದ ಪ್ರಧಾನ ಕಾರ್ಯದರ್ಶಿ ದೇವರಮನೆ ಶ್ರೀನಿವಾಸ ಎಚ್ಚರಿಸಿದರು.

ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಡೂರು ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಅವರು ತಮ್ಮ ಆಪ್ತ ಗೆಳೆಯರಾಗಿದ್ದ ಶ್ರೀರಾಮುಲು ಮೇಲೆ ಅಪವಾದ ಹೊರೆಸುವುದು ಸರಿಯಲ್ಲ. ಶ್ರೀರಾಮುಲು ಅವರನ್ನು ಮುಂದಿಟ್ಟುಕೊಂಡು ರೆಡ್ಡಿಗಳು ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಬಹುಸಂಖ್ಯಾತ ವಾಲ್ಮೀಕಿ ಸಮಾಜದ ಬೆಂಬಲ ಪಡೆದು, ಬಲಾಢ್ಯರಾಗಿ ಮೆರೆದಿದ್ದನ್ನು ಮರೆಯಬಾರದು’ ಎಂದರು.

‘ರೆಡ್ಡಿ ಸಹೋದರರ ರಾಜಕೀಯ ಬೆಳವಣಿಗೆಗೆ ಶ್ರೀರಾಮುಲು ಶ್ರೀರಕ್ಷೆ ಹಾಗೂ ವಾಲ್ಮೀಕಿ ಸಮುದಾಯದ ಬೆಂಬಲವೇ ಕಾರಣ. ಒಂದೊಮ್ಮೆ ರೆಡ್ಡಿ ಬೆಂಬಲದಿಂದ ಶ್ರೀರಾಮುಲು ರಾಜಕೀಯ ಪ್ರಭಾವ ಬೆಳೆದಿದ್ದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿ ನಗರ ಕ್ಷೇತ್ರದಲ್ಲಿ ರೆಡ್ಡಿ ಪತ್ನಿಗೆ ಏಕೆ ಸೋಲಾಯಿತು’ ಎಂದು ಪ್ರಶ್ನಿಸಿದರು.

ADVERTISEMENT

‘ಶ್ರೀರಾಮುಲು, ಸತೀಶ್ ಜಾರಕಿಹೊಳಿ ಯಾವುದೇ ಪಕ್ಷದಲ್ಲಿ ಗುರುತಿಸಿಕೊಂಡಿದ್ದರೂ, ಅವರು ನಮ್ಮ ಸಮಾಜದ ನಾಯಕರು. ಭವಿಷ್ಯದಲ್ಲಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡುವುದಕ್ಕಾಗಿ ಸಮಾಜದ ಜನರು ಕಾತುರರಾಗಿದ್ದಾರೆ’ ಎಂದರು.

‘ಚುನಾವಣೆಯಲ್ಲಿ ಅಭ್ಯರ್ಥಿಗಳು ಒಂದೇ ಸಮುದಾಯದವರು ಇದ್ದಾಗ ಒಬ್ಬರಿಗೆ ಸೋಲಾಗುವುದು ಸಹಜ.  ಶ್ರೀರಾಮುಲು ಅವರನ್ನು ಸಮುದಾಯವೇ ಸೋಲಿಸಿದೆ ಎಂದು ಹೇಳಲಾಗದು’ ಎಂದು ನಗರಸಭೆ ಸದಸ್ಯ ತಾರಿಹಳ್ಳಿ ಜಂಬುನಾಥ ಹೇಳಿದರು.

ಸಂಘದ ಅಧ್ಯಕ್ಷ ಗುಜ್ಜಲ ಶ್ರೀನಾಥ, ಉಪಾಧ್ಯಕ್ಷ ಕಿನ್ನಾಳ ಹನುಮಂತ, ಜಂಬನಹಳ್ಳಿ ವಸಂತ, ಕಣ್ಣಿ ಶ್ರೀಕಂಠ ಇದ್ದರು.

ಪ್ರತಿಭಟನೆ: ಇದಕ್ಕೂ ಮೊದಲು ವಾಲ್ಮೀಕಿ ವೃತ್ತದಲ್ಲಿ ಜನಾರ್ದನ ರೆಡ್ಡಿ ಪ್ರತಿಕೃತಿ ದಹಿಸಿ, ಟಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಸಲಾಯಿತು. ಡ್ಯಾಂ ರೋಡ್, ಶ್ರೀ ಸಾಯಿ ಬಾಬ ಸರ್ಕಲ್ ಮಾರ್ಗವಾಗಿ ಎಸ್‌ಪಿ ಕಚೇರಿವರೆಗೆ ಬೈಕ್ ರ‍್ಯಾಲಿ ನಡೆಸಲಾಯಿತು.

‘70 ಲಕ್ಷ ಮಂದಿಗಾದ ಅವಮಾನ’

‘ಜನಾರ್ದನ ರೆಡ್ಡಿ ಅವರು ಶ್ರೀರಾಮುಲು ವಿರುದ್ಧ ಕೀಳಾಗಿ ಮಾತನಾಡಿದ್ದು ರಾಜ್ಯದ ನಾಲ್ಕನೇ ದೊಡ್ಡ ಸಮುದಾಯವಾದ ವಾಲ್ಮೀಕಿ ನಾಯಕ ಸಮುದಾಯದ 70 ಲಕ್ಷ ಜನರಿಗೆ ಮಾಡಿದ ಅವಮಾನ ಎಂದೇ ಸಮಾಜ ಭಾವಿಸಿದೆ. ಹೀಗಾಗಿ ರೆಡ್ಡಿ ಅವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಮುಂದೆ ಅವರಿಬ್ಬರೂ ಒಂದಾಗುತ್ತಾರೋ ಇಲ್ಲವೋ. ನಾವಂತೂ ರಾಜಕೀಯದಲ್ಲಿ ಇಲ್ಲ’ ಎಂದು ದೇವರಮನೆ ಶ್ರೀನಿವಾಸ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.