ADVERTISEMENT

ಹೊಸಪೇಟೆ | ವಾಲ್ಮೀಕಿ ಸಮಾಜಕ್ಕೆ 25 ವರ್ಷ ಆರ್ಥಿಕ ಶಕ್ತಿ ನೀಡಿ: ಗವಿಯಪ್ಪ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 7:31 IST
Last Updated 8 ಅಕ್ಟೋಬರ್ 2025, 7:31 IST
ಹೊಸಪೇಟೆಯಲ್ಲಿ ಮಂಗಳವಾರ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು
ಹೊಸಪೇಟೆಯಲ್ಲಿ ಮಂಗಳವಾರ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು   

ಹೊಸಪೇಟೆ (ವಿಜಯನಗರ): ‘ವಾಲ್ಮೀಕಿ ನಾಯಕರ ಸಮಾಜದವರು ಬಹಳ ಬಡತನದಿಂದ ಮೇಲೆ ಬಂದವರು. ಇನ್ನೂ 20ರಿಂದ 25 ವರ್ಷಗಳ ಕಾಲ ಅವರಿಗೆ ಸರ್ಕಾರದಿಂದ ಆರ್ಥಿಕ ನೆರವಿನ ಅಗತ್ಯವಿದೆ, ಅದರ ಬಗ್ಗೆ ಮುಖ್ಯಮಂತ್ರಿ ಅವರಿಗೆ ಮನವರಿಕೆ ಮಾಡುತ್ತೇನೆ’ ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.

ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ  ಏರ್ಪಡಿಸಿದ್ದ ಶ್ರೀಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

‘ವಾಲ್ಮೀಕಿ ಸಮುದಾಯಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಸದುಪಯೋಗವನ್ನು ಸಮುದಾಯದವರು ಸದ್ಭಳಕೆ ಪಡಿಸಿಕೊಳ್ಳಬೇಕು. ಕುರುಬ, ಇತರ ವರ್ಗದವರು ಸಹ ಹಿಂದುಳಿದವರಿದ್ದು, ಅವರು ಸಹ ಬೇಡಿಕೆ ಮುಂದಿಡುವುದರಲ್ಲಿ ತಪ್ಪಿಲ್ಲ. ಸರ್ಕಾರ ಇದೆಲ್ಲವನ್ನೂ ನಿಭಾಯಿಸುವ ವಿಶ್ವಾಸ ಇದೆ’ ಎಂದರು.

ADVERTISEMENT

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಾಧ್ಯಾಪಕರು ಮತ್ತು ಸದಸ್ಯ ಸಿ.ಬಿ.ಚಿಲ್ಕರಾಗಿ ರವರು ಉಪನ್ಯಾಸ ನೀಡಿದರು.

ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವೈಭವ, ನವೀನ.ಎಂ.ಬಿ. ರವರಿಗೆ ಜಡಗ ಮತ್ತು ಬಾಲ ಯೋಜನೆಯಡಿ ₹1 ಲಕ್ಷ ಪ್ರೋತ್ಸಾಹಧನ ನೀಡಲಾಯಿತು. ದೇವದಾಸಿ ಮಕ್ಕಳ ವಿವಾಹವಾದ ದಂಪತಿಗಳು ಹೊಸಪೇಟೆ ತಾಲೂಕಿನ ಪಿ‌.ಅಶ್ವಿನಿ ಗಂಡ ಎನ್.ರಮೇಶ್, ಕೂಡ್ಲಿಗಿ ತಾಲೂಕಿನ ಡಿ.ಹುಲಿಗೆಮ್ಮ ಗಂಡ ಎನ್.ಅಜ್ಜಯ್ಯ ಮತ್ತು ಹಗರಿಬೊಮ್ಮನಹಳ್ಳಿ ತಾಲೂಕಿನ ಹೆಚ್.ಯಮುನಕ್ಕ ಗಂಡ ಶಿವರಾಜ ಇವರಿಗೆ ತಲಾ 5 ಲಕ್ಷ ರೂ.ಗಳು ದೇವದಾಸಿ ಮಕ್ಕಳ ವಿವಾಹ ಪ್ರೋತ್ಸಾಹ ಧನ ಬಾಂಡ್ ನ್ನು ವಿತರಿಸಲಾಯಿತು.

ಜಿಲ್ಲಾಮಟ್ಟದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ನೀಡಿ ಗೌರವಿಸಿ ಸನ್ಮಾನಿಸಲಾಯಿತು.

ಜಿಲ್ಲಾಧಿಕಾರಿ ಕವಿತಾ.ಎಸ್ ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಸಿಇಒ ನೋಂಗ್ಜಾಯ್ ಮೊಹಮದ್ ಅಲಿ ಅಕ್ರಂ ಷಾ, ಎಸ್‌ಪಿ ಎಸ್.ಜಾಹ್ನವಿ, ಎಡಿಸಿ  ಇ.ಬಾಲಕೃಷ್ಣಪ್ಪ, ಡಿಸಿಎಫ್‌ ಎಚ್.ಅನುಪಮಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.