ADVERTISEMENT

ವಿಬಿ ಗ್ರಾಮ್ ಜಿ; ಕಾಂಗ್ರೆಸ್‌ನ ಹೊಸ ಅಸ್ತ್ರ: ಪ್ರತಿಭಟನೆ, ಜಾಥಾ ನಡೆಸಲು ಸಿದ್ಧತೆ

ಎಂ.ಜಿ.ಬಾಲಕೃಷ್ಣ
Published 23 ಜನವರಿ 2026, 1:58 IST
Last Updated 23 ಜನವರಿ 2026, 1:58 IST
ವಿಜಯನಗರ ಜಿಲ್ಲೆಯ ಗ್ರಾಮ ಗ್ರಾಮಗಳಲ್ಲಿ ಜನರಿಗೆ ಹಂಚಲು ಸಿದ್ಧವಾಗಿರುವ ಕರಪತ್ರ. ಇದರಲ್ಲಿ ಹಳೆಯ ಮತ್ತು ಹೊಸ ಕಾರ್ಯಕ್ರಮದ ತುಲನೆ ಮಾಡಿ ಜನರಿಗೆ ಅರ್ಥ ಮಾಡಿಸುವ ಪ್ರಯತ್ನ ನಡೆದಿದೆ
ವಿಜಯನಗರ ಜಿಲ್ಲೆಯ ಗ್ರಾಮ ಗ್ರಾಮಗಳಲ್ಲಿ ಜನರಿಗೆ ಹಂಚಲು ಸಿದ್ಧವಾಗಿರುವ ಕರಪತ್ರ. ಇದರಲ್ಲಿ ಹಳೆಯ ಮತ್ತು ಹೊಸ ಕಾರ್ಯಕ್ರಮದ ತುಲನೆ ಮಾಡಿ ಜನರಿಗೆ ಅರ್ಥ ಮಾಡಿಸುವ ಪ್ರಯತ್ನ ನಡೆದಿದೆ   

ಹೊಸಪೇಟೆ (ವಿಜಯನಗರ): ಬಹು ಚರ್ಚೆಯಲ್ಲಿರುವ ನರೇಗಾದ ಹೊಸ ರೂಪ ವಿಕಸಿತ ಭಾರತ–ಗ್ಯಾರಂಟಿ ರೋಜ್‌ಗಾರ್‌, ಆಜಿವಿಕಾ ಮಿಷನ್‌–ಗ್ರಾಮೀಣ ವನ್ನು ಕಾಂಗ್ರೆಸ್‌ ಜಿ ರಾಮ್‌ ಜಿ ಎಂದು ಕರೆಯದೆ ವಿಬಿ ಗ್ರಾಮ್‌ ಜಿ ಎಂದೇ ಕರೆಯುತ್ತಿದ್ದು, ಜಿಲ್ಲೆಯಾದ್ಯಂತ ಗ್ರಾಮೀಣ ಭಾಗದಲ್ಲಿ ಜನರನ್ನು ಎಚ್ಚರಿಸಲು ಸಜ್ಜಾಗುತ್ತಿದೆ.

ಜಿಲ್ಲೆಯ 120 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನವರಿ 26ರಿಂದ ಒಂದು ತಿಂಗಳ ಕಾಲ ಪಾದಯಾತ್ರೆಗಳ ಮೂಲಕ ಅಭಿಯಾನ ನಡೆಸಲಿದ್ದು, ಹಳೆಯ ನರೇಗಾ ಯೋಜನೆಯ ವೈಶಿಷ್ಟ್ಯಗಳನ್ನು ಹಾಗೂ ಬದಲಾವಣೆ ನಂತರ ಎದುರಾಗುವ ಸಮಸ್ಯೆಗಳನ್ನು ಜನರ ಮುಂದೆ ಪರಿಣಾಮಕಾರಿಯಾಗಿ ಇಡಲು ಸಿದ್ಧತೆ ನಡೆದಿದೆ.

‘ಜ.26ರಂದು ಹೊಸಪೇಟೆಯ ಪಕ್ಷದ ಕಚೇರಿಯಲ್ಲಿ ಧ್ವಜಾರೋಹಣದೊಂದಿಗೆ ಗ್ರಾಮ ಸಂಗ್ರಾಮ ಅಭಿಯಾನ ಆರಂಭಿಸಲಿದ್ದೇವೆ. ಪ್ರತಿಯೊಂದು ಗ್ರಾಮದಲ್ಲೂ ಒಟ್ಟು 10 ಕಿ.ಮೀ.ನಷ್ಟು ಪಾದಯಾತ್ರೆ ನಡೆಸಿ ಜನರಿಗೆ ವಿಬಿ ರಾಮ್‌ಜಿ ಯ ಕೆಡುಕುಗಳ ಬಗ್ಗೆ ತಿಳಿವಳಿಕೆ ನೀಡುವ ಅಭಿಯಾನ ನಡೆಯಲಿದೆ. ಇದರಲ್ಲಿ ಬ್ಲಾಕ್‌ ಮಟ್ಟದ ಪದಾಧಿಕಾರಿಗಳು ಪಾಲ್ಗೊಳ್ಳುತ್ತಾರೆ, ಗ್ರಾಮೀಣ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಪಕ್ಷದ ವತಿಯಿಂದ ನಡೆಯಲಿದೆ, ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿ ಕೇಂದ್ರ ತನ್ನ ನಿರ್ಧಾರ ವಾಪಸ್ ಪಡೆಯುವ ತನಕವೂ ಹೋರಾಟ ಮುಂದುವರಿಯಲಿದೆ’ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಿರಾಜ್‌ ಶೇಖ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಭಾರಿ ಹೊರೆ ನಿಶ್ಚಿತ: ‘ಒಂದೊಂದು ಗ್ರಾಮ ಪಂಚಾಯಿತಿಗೆ ವಾರ್ಷಿಕ ₹1.20 ಕೋಟಿ ಖರ್ಚಿನ ಬಾಬತ್ತು ಇದೆ. ಕೇಂದ್ರದ ಹೊಸ ನೀತಿಯಂತೆ ವಿಬಿ ಗ್ರಾಮ್‌ ಜಿಗೆ ಶೇ 40ರಷ್ಟು ದುಡ್ಡನ್ನು ರಾಜ್ಯವೇ ಭರಿಸಬೇಕು. ಅಂದರೆ ಸುಮಾರು ₹55 ಲಕ್ಷ ಇದಕ್ಕಾಗಿಯೇ ಗ್ರಾಮ ಪಂಚಾಯಿತಿಗಳಿಗೆ ನೀಡಬೇಕು ಇಲ್ಲವೇ ಗ್ರಾಮ ಪಂಚಾಯಿತಿಗಳು ಭರಿಸಬೇಕು. ಇದು ಒಟ್ಟಾರೆ ಅಭಿವೃದ್ಧಿ ಕೆಲಸಗಳಿಗೆ ಹೊಡೆತ ನೀಡಲಿದೆ. ಕ್ರಮೇಣ ಯೋಜನೆಯನ್ನೇ ರದ್ದುಪಡಿಸುವ ಹುನ್ನಾರ ಇದರ ಹಿಂದೆ ಅಡಗಿದೆ. ಇದನ್ನು ಜನರಿಗೆ ತಿಳಿಸಿ ಜನರೇ ಕೇಂದ್ರದ ವಿರುದ್ಧ ಸಿಡಿದೇಳುವಂತೆ ನಾವು ಕಾರ್ಯತಂತ್ರ ರೂಪಿಸಲಿದ್ದೇವೆ’ ಎಂದು ಅವರು ಹೇಳಿದರು.

ಮಹಾತ್ಮ ಗಾಂಧೀಜಿ ಕೊನೆಯುಸಿರೆಳೆಯುವಾಗ ಹೊರಟ ಪದ ಹೇ ರಾಮ್. ಅದೇ ಹೆಸರನ್ನು ನರೇಗಾಕ್ಕೆ ಬಳಸಿಕೊಂಡಿದ್ದಕ್ಕೂ ನಮ್ಮ ಆಕ್ಷೇಪ ಇಲ್ಲ ರಾಮನ ಹೆಸರಲ್ಲಿ ಹೊಸ ಯೋಜನೆ ತನ್ನಿ ಹಳೆಯದ್ದನ್ನು ಬದಲಿಸಬೇಡಿ
ಸಿರಾಜ್ ಶೇಖ್‌ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ

ತುಲನಾತ್ಮಕ ವಿವರಣೆ

ಕಾಂಗ್ರೆಸ್ ಹೊರತಂದ ಕರಪತ್ರದ ಶೀರ್ಷಿಕೆಯಲ್ಲಿ ನರೇಗಾ VS ವಿಬಿ ಗ್ರಾಮ್‌ ಜಿ ಎಂದು ಬರೆದು ಕೆಳಗಡೆ ಹಿಂದಿನ ಯೋಜನೆಯ ಮತ್ತು ಹೊಸ ಯೋಜನೆಯ ಅಂಶಗಳನ್ನು ಬಿಡಿ ಬಿಡಿಯಾಗಿ ತಿಳಿಸಲಾಗಿದೆ. ಗ್ರಾಮೀಣ ಭಾಗದ ಜನರಿಗೆ ಸುಲಭವಾಗಿ ಅರ್ಥ ಆಗುವ ರೀತಿಯಲ್ಲೂ ವಿಷಯ ಮಂಡನೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.