
ಹೊಸಪೇಟೆ (ವಿಜಯನಗರ): ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ರಚಿಸಲಾಗಿರುವ ‘ವಿಜಯ ಮಹಿಳಾ ಮತ್ತು ಮಕ್ಕಳ ಸುರಕ್ಷಾ ಪಡೆ’ಗೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಗುರುವಾರ ಇಲ್ಲಿ ಗುಲಾಬಿ ಬಣ್ಣದ ಬಲೂನುಗಳನ್ನು ಹಾರಿಬಿಡುವ ಮೂಲಕ ಚಾಲನೆ ನೀಡಿದರು ಹಾಗೂ ಇನ್ನು ಮಹಿಳೆಯರು ಭಯಪಡುವ ಅಗತ್ಯವೇ ಇಲ್ಲ ಎಂದು ಭರವಸೆ ನೀಡಿದರು.
‘ಮಹಿಳೆಯರು, ಮಕ್ಕಳ ಸುರಕ್ಷತೆ ವಿಚಾರದಲ್ಲಿ ಜಿಲ್ಲಾ ಪೊಲೀಸ್ ಹೊಸ ಹೆಜ್ಜೆ ಇಟ್ಟಿದೆ. ಈ ಪಡೆಯ ವಾಟ್ಸ್‌ಆ್ಯಪ್ ನಂಬರ್ ಅಥವಾ ಪೊಲೀಸ್ ನಿಯಂತ್ರಣಕ ಕೊಠಡಿ ಇಲ್ಲವೇ ಸಹಾಯವಾಣಿಗೆ ಕರೆ ಮಾಡಿದರೆ ತಕ್ಷಣ ಸ್ಥಳಕ್ಕೆ ಧಾವಿಸಿ ಬರುವ ಪಡೆ ನಮ್ಮ ಬಳಿ ಇದೆ’ ಎಂದು ಹೇಳಿದರು.
ಬಳಿಕ ಅವರು ಗುಂಡಿ ಅದುಮುವ ಮೂಲಕ ವಿಜಯ ಮಹಿಳಾ ಮತ್ತು ಮಕ್ಕಳ ಸುರಕ್ಷಾ ಪಡೆಯ ಕಾರ್ಯವೈಖರಿ ತಿಳಿಸುವ ಪ್ರಚಾರ ವಾಹನಕ್ಕೆ ಚಾಲನೆ ನೀಡಿದರು.
‘ಈ ಪಡೆಯಲ್ಲಿರುವ ಮಹಿಳಾ ಪೊಲೀಸರಿಗೆ ಬೈಕ್, ಜೀಪ್, ಕಾರು ಚಾಲನೆಯ ತರಬೇತಿ ಮಾತ್ರವಲ್ಲ, ಸ್ವ-ರಕ್ಷಣಾ ಕಲೆಯನ್ನೂ ಕಲಿಸಲಾಗಿದೆ. ಅಗತ್ಯ ಇರುವಲ್ಲಿಗೆ ಬಂದು ಸ್ವರಕ್ಷಣೆಯ ಬಗೆಗೆ ಮಾಹಿತಿ ನೀಡುತ್ತಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ಹೇಳಿದರು.
ಇದೇ ವೇಳೆ ಡಿ.ಸಿ, ಎಸ್‌ಪಿ, ಉಪವಿಭಾಗಾಧಿಕಾರಿ ಪಿ.ವಿವೇಕಾನಂದ, ನಗರಸಭೆ ಆಯುಕ್ತ ಎ.ಶಿವಕುಮಾರ್ ಅವರು ಮಹಿಳಾ ಪಡೆಯ ಬೈಕ್ ಸವಾರಿಗೆ ಹಸಿರು ನಿಶಾನೆ ತೋರಿದರು. ಹೆಲ್ಮೆಟ್ ಧರಿಸಿದ ಮಹಿಳಾ ಪೊಲೀಸರು ಠೀವಿಯಿಂದ ಬೈಕನ್ನೇರಿ ಗುಡುಗುಡನೆ ಸದ್ದು ಮಾಡುತ್ತ ಸಾಗಿದಂತೆ ಪುನೀತ್ ರಾಜ್‌ಕುಮಾರ್ ವೃತ್ತದಲ್ಲಿ ಸೇರಿದ್ದ ನೂರಾರು ಕಾಲೇಜು ವಿದ್ಯಾರ್ಥಿನಿಯರು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು. ಎರಡು ಇಸುಜು ವಾಹನ ಮತ್ತು ಒಂದು ಬೊಲೆರೊ ವಾಹನಗಳನ್ನು ಸಹ ವಿದ್ಯಾರ್ಥಿನಿಯರ ಮುಂದೆ ಚಲಾಯಿಸಿಕೊಂಡು ಹೋಗಿ, ಇದುವೇ ಪಡೆಯ ವಾಹನ ಎಂಬುದನ್ನು ತೋರಿಸಲಾಯಿತು.
ಸುರಕ್ಷಾ ಪಡೆಯ ವಾಟ್ಸ್‌ಆ್ಯಪ್ ನಂ. 8277977877 ಕಂಟ್ರೋಲ್ ರೂಂ: 9480805716/ 08394–200202 ಪೊಲೀಸ್ ತುರ್ತು ಸಹಾಯವಾಣಿ: 112
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.