ADVERTISEMENT

ವಿಜಯನಗರ | ಫಾರಂ-3 ವಿಚಾರದಲ್ಲಿ ಹಣ ವಸೂಲಿ ಮಾಡಿದರೆ ಕ್ರಮ: ಶಾಸಕ ಎಚ್ಚರಿಕೆ

ಕುಂದುಕೊರತೆ ಸಭೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 6:14 IST
Last Updated 13 ಸೆಪ್ಟೆಂಬರ್ 2025, 6:14 IST
ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕುಂದುಕೊರತೆ ಸಭೆಯಲ್ಲಿ ಶಾಸಕ ಕೆ.ನೇಮರಾಜನಾಯ್ಕ ಮಾತನಾಡಿದರು
ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕುಂದುಕೊರತೆ ಸಭೆಯಲ್ಲಿ ಶಾಸಕ ಕೆ.ನೇಮರಾಜನಾಯ್ಕ ಮಾತನಾಡಿದರು   

ಮರಿಯಮ್ಮನಹಳ್ಳಿ: ‘ಫಾರಂ-3 ವಿಚಾರದಲ್ಲಿ ಅಧಿಕಾರಿಗಳು ಸಾರ್ವಜನಿಕರಿಂದ ಹಣ ವಸೂಲಿ, ಅಲೆದಾಡಿಸುವುದು ಮತ್ತು ಮಧ್ಯವರ್ತಿಗಳ ಹಾವಳಿ ಕಂಡುಬಂದಲ್ಲಿ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕ ಕೆ.ನೇಮರಾಜನಾಯ್ಕ ಎಚ್ಚರಿಸಿದರು.

ಸ್ಥಳೀಯ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕುಂದುಕೊರತೆ ಸಭೆಯಲ್ಲಿ  ಅಧ್ಯಕ್ಷತೆವಹಿಸಿದ್ದ ಅವರು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ ನಂತರ ಅವರು ಮಾತನಾಡಿದರು.

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಯಾರದೋ ಜಾಗಕ್ಕೆ ಮೊತ್ತೊಬ್ಬರಿಗೆ ಫಾರಂ-3 ಕೊಟ್ಟಿರುವ ಬಗ್ಗೆ ಹಾಗೂ ಕಳೆದ 9 ತಿಂಗಳಿನಿಂದ ನಿಂತಲ್ಲೇ ನಿಂತ ಕಸ ಸಾಗಿಸುವ ಆಟೋಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕಚೇರಿಗೆ ಬಾರದಿರುವುದು, ಸಾರ್ವಜನಿಕರೊಂದಿಗೆ ಅಗೌರವವಾಗಿ ನಡೆದುಕೊಳ್ಳುವುದು ಹಾಗೂ ಸ್ವಚ್ಛತೆಯ ಬಗ್ಗೆ ದೂರುಗಳ ಕೇಳಿ ಬಂದಿದ್ದು, ಅಂತಹವರಿಗೆ ಶೋಕಾಸ್ ನೋಟಿಸ್ ನೀಡುವಂತೆ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಅಮೃತ-2 ಯೋಜನೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಯೋಜನೆಯ ಕಾಮಗಾರಿಗೆ ಯಾರೇ ಅಡ್ಡಪಡಿಸಿದಲ್ಲಿ ಅಂತಹವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಪೊಲೀಸ್, ಜೆಸ್ಕಾಂ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಹೇಳಿದರು. ತಿಂಗಳೊಳಗೆ ಕೆಲಸ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.

ಬಸ್ ನಿಲ್ದಾಣದಲ್ಲಿನ ಆಟೋ ಚಾಲಕರ ಸಮಸ್ಯೆ ಹಾಗೂ ಇತರೆ ಸಮಸ್ಯೆಗಳನ್ನು ಆಲಿಸಿದ ಅವರು, ಆಟೋ ಚಾಲಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವ ಜೊತೆಗೆ ಈಗಾಗಲೇ ಅಂಗಡಿಗಳಿಗೆ ಟೆಂಡರ್ ಪಡೆದಿದಲ್ಲಿ ಕೂಡಲೇ ಅದನ್ನು ವಾಪಾಸು ಮಾಡುವಂತೆ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಆದಿಮನಿ ಹುಸೇನ್‍ಬಾಷಾ, ಉಪಾಧ್ಯಕ್ಷೆ ಆರ್.ಲಕ್ಷ್ಮಿ ಮಂಜುನಾಥ ಸ್ಥಾಯಿ ಸಮಿತಿ ಅಧ್ಯಕ್ಷೆ ಹುಲಗಿಬಾಯಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಮನೋಹರ, ಮುಖ್ಯಾಧಿಕಾರಿ ಜಿ.ಕೆ.ಮಲ್ಲೇಶ್, ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಬಿಎಂಎಂ ಇಸ್ಪಾತ್ ಕಾರ್ಖಾನೆಯಿಂದ ಹೊರ ಸೂಸುವ ದೂಳಿನಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕಾರ್ಖಾನೆಗೆ ನೋಟಿಸ್ ನೀಡಬೇಕು.
– ಕೆ.ನೇಮರಾಜನಾಯ್ಕ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.